Site icon Vistara News

Electoral Bonds: ಮಹಾ ದಾನಿ ‘ಲಾಟರಿ ಕಿಂಗ್’ ಅತಿ ಹೆಚ್ಚು ಕೊಟ್ಟದ್ದು ಬಿಜೆಪಿಗಲ್ಲ! ಬಿಜೆಪಿಗೆ ಕೊಟ್ಟವರ್ಯಾರು?

electoral bonds contributions

ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಲ್ಲಿಸಿದ ವಿವರವಾದ ಚುನಾವಣಾ ಬಾಂಡ್ (Electoral Bonds) ಡೇಟಾವನ್ನು ಭಾರತೀಯ ಚುನಾವಣಾ ಆಯೋಗ (Election commission) ಗುರುವಾರ ಬಿಡುಗಡೆ ಮಾಡಿದೆ. ಆಲ್ಫಾ-ಸಂಖ್ಯೆಯ ಕೋಡ್‌ಗಳನ್ನು ಒಳಗೊಂಡಿರುವ ಈ ಹೊಸ ಡೇಟಾವು ಬಾಂಡ್‌ಗಳ ಖರೀದಿದಾರರು ಯಾರು, ಅವುಗಳನ್ನು ನಗದು ಮಾಡಿಕೊಂಡ ರಾಜಕೀಯ ಪಕ್ಷಗಳು ಯಾವುವು ಎಂಬುದನ್ನು ಪತ್ತೆಹಚ್ಚಲು ನೆರವಾಗಿದೆ. ಇದರಲ್ಲಿ ದೊರೆತ ಹಲವು ಕುತೂಹಲಕಾರಿ ವಿವರ ಇಲ್ಲಿವೆ.

1) 1,368 ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತವನ್ನು ಚುನಾವಣಾ ಬಾಂಡ್‌ಗಳಲ್ಲಿ (Electoral Bonds) ತೊಡಗಿಸಿದ ʻಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್‌ನ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಸಂಸ್ಥೆ, ಹೆಚ್ಚಿನ ಮೊತ್ತವನ್ನು ನೀಡಿರುವುದು ಬಿಜೆಪಿಗಲ್ಲ, ಬದಲು ಪ್ರತಿಪಕ್ಷಗಳಿಗೆ. ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗೆ ತಲಾ ₹500 ಕೋಟಿ ದೇಣಿಗೆ ನೀಡಿದ್ದಾನೆ. ಮಾರ್ಟಿನ್ ಕಂಪನಿ ಬಿಜೆಪಿಗೆ ₹100 ಕೋಟಿ, ಕಾಂಗ್ರೆಸ್‌ಗೆ ₹50 ಕೋಟಿ ದೇಣಿಗೆ ನೀಡಿದೆ.

2) ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್, ಏಪ್ರಿಲ್ 2019ರಿಂದ ₹670 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿದೆ. ಇದು ಬಿಜೆಪಿಗೆ ಅತಿ ಹೆಚ್ಚಿನ ಮೊತ್ತ ನೀಡಿದ ಸಂಸ್ಥೆ.

3) ಕ್ವಿಕ್ ಸಪ್ಲೈ ಚೈನ್ ಎಂಬ ಸಂಸ್ಥೆ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ಬಿಜೆಪಿಗೆ ₹375 ಕೊಡುಗೆ ನೀಡಿದೆ. ಇದು ಮುಖೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್‌ನ ಸಹಸಂಸ್ಥೆ ಎನ್ನಲಾಗಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರು ಈ ಹಿಂದೆ, “ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಯಾವುದೇ ರಿಲಯನ್ಸ್ ಘಟಕದ ಅಂಗಸಂಸ್ಥೆಯಲ್ಲ” ಎಂದು ಹೇಳಿದ್ದರು.

4) ಎಂಕೆಜೆ ಎಂಟರ್‌ಪ್ರೈಸಸ್ ಮತ್ತು ಕೆವೆಂಟರ್ ಸೇರಿದಂತೆ ಮದನ್‌ಲಾಲ್ ಗ್ರೂಪ್ ಇದೇ ಅವಧಿಯಲ್ಲಿ ಬಿಜೆಪಿಗೆ ₹393 ಕೋಟಿ ದೇಣಿಗೆ ನೀಡಿದೆ.

5) ವೇದಾಂತ ₹254 ಕೋಟಿ ಮತ್ತು ಏರ್‌ಟೆಲ್ ₹210 ಕೋಟಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ನೀಡಿವೆ.

6) ಕಾಂಗ್ರೆಸ್‌ಗೆ ಮದನ್‌ಲಾಲ್ ಗ್ರೂಪ್ ಕಂಪನಿಗಳು ₹172 ಕೋಟಿ, ಮೇಘಾ ಇಂಜಿನಿಯರಿಂಗ್ ಮತ್ತು ಅದರ ಅಂಗ ಸಂಸ್ಥೆಯಿಂದ ₹137 ಕೋಟಿ ಮತ್ತು ವೇದಾಂತದಿಂದ ₹125 ಕೋಟಿ ದೇಣಿಗೆ ನೀಡಿವೆ.

7) ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕೇವಲ ಒಂದೇ ಹೆಸರಿನ ಪಟ್ಟಿಯಲ್ಲಿರುವ ಮೋನಿಕಾ, ಕಾಂಗ್ರೆಸ್‌ಗೆ ಚುನಾವಣಾ ಬಾಂಡ್‌ಗಳ ಮೂಲಕ ₹ 5 ಲಕ್ಷ ದೇಣಿಗೆ ನೀಡಿದ್ದಾರೆ.

8) ಫಾರ್ಮಾಸ್ಯುಟಿಕಲ್ ಕಂಪನಿಗಳಾದ ಪಿರಮಲ್ ಕ್ಯಾಪಿಟಲ್ ಮತ್ತು ಸನ್ ಫಾರ್ಮಾ ಬಿಜೆಪಿಗೆ ದೇಣಿಗೆ ನೀಡಿದರೆ, ಟೊರೆಂಟ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಿವೆ. ನ್ಯಾಟ್ಕೊ ಫಾರ್ಮಾ ಬಿಜೆಪಿ, ಟಿಡಿಪಿ, ಟಿಎಂಸಿ ಮತ್ತು ಬಿಆರ್‌ಎಸ್‌ಗೆ ನೀಡಿದೆ.

9) ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಮತ್ತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬಿಜೆಪಿ, ಟಿಎಂಸಿ ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಿದ್ದಾರೆ.

10) ರುಂಗ್ಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಕಾಂಗ್ರೆಸ್, ಬಿಜೆಪಿ, ಟಿಎಂಸಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಗೆ ದೇಣಿಗೆ ನೀಡಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ನ ವಿವರಗಳನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Exit mobile version