ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ʼಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ’ಗಳನ್ನು ನಿಷೇಧಿಸಿ (Electric Bike Taxi) ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ನಿನ್ನೆ ಶಾಂತಿನಗರ ಸಾರಿಗೆ ಆಯುಕ್ತರ (Transport commissioner) ಕಚೇರಿಯಲ್ಲಿ ಖಾಸಗಿ ಸಾರಿಗೆ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಸಂಘಟನೆಗಳ ಒತ್ತಾಯದ ಬಳಿಕ ಇಂದು ಹಾಗೂ ನಾಳೆ ಕಾರ್ಯಾಚರಣೆಗೆ ಇಳಿಯಲಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಮತ್ತು ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಈ ಬಗ್ಗೆ 11 ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದು, ನಗರದ ನಾನಾ ಭಾಗಗಳಲ್ಲಿರುವ ಅನಧಿಕೃತ ಬೈಕ್ ಟ್ಯಾಕ್ಸಿಗಳಿಗೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದವು.
ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ನೋಟೀಸ್ ಹೀಗಿದೆ:
“ಸರ್ಕಾರದ 14-07-2021ರ ಸೂಚನೆಯನ್ವಯ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ, ಮೋಟಾರು ವಾಹನ ಕಾಯ್ದೆ 1988ರ (1998ರ ಕೇಂದ್ರ ಅಧಿನಿಯಮ 59)ರ ಕಲಂ 2ರ ಉಪಕಲಂ (1) ಕ್ರಮ ಸಂಖ್ಯೆ: 38(ಎ) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯಿಸುವಂತೆ “ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021″ನ್ನು ಜಾರಿಗೆ ತರಲಾಗಿತ್ತು.
ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆ ಮತ್ತು ಜಾರಿಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, BMRCL ರವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿರುವುದಿಲ್ಲವೆಂದು ತಿಳಿಸಿದೆ. ಪ್ರಸ್ತುತ ಕೆಲವು ಖಾಸಗಿ ಆಪ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೇತರ (Non-transport) ದ್ವಿಚಕ್ರ ವಾಹನಗಳನ್ನು ಸಾರಿಗೆ (Transport) ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಖಾಸಗಿ ಸಾರಿಗೆ ಕ್ಷೇತ್ರಗಳಲ್ಲಿನ ಇತರೆ ಆಟೋರಿಕ್ಷಾ, ಮ್ಯಾಕ್ಸಿ ಕ್ಯಾಬ್ ಮತ್ತು ಟ್ಯಾಕ್ಸಿ ಸಂಘಗಳು / ಚಾಲಕರುಗಳು, ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಹಲವಾರು ಬಾರಿ ಸಂಘರ್ಷಣೆಗಳು ನಡೆದು, ಮೊಕದ್ದಮೆಗಳು ದಾಖಲಾಗುತ್ತಿರುವುದನ್ನು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಹಾಗೂ ಮಹಿಳೆಯರಿಗೆ ಈ ಯೋಜನೆ ಅಸುರಕ್ಷಿತವಾಗಿರುವುದನ್ನು ಸಹ ಗಮನಿಸಲಾಗಿದೆ. ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಗೆ ಮತ್ತು ಪವರ್ತನ ಚಟುವಟಿಕೆಯ ಸಮರ್ಥ ಕಾರ್ಯನಿರ್ವಹಣೆಗೆ ಈ ಯೋಜನೆಯಿಂದ ಕಷ್ಟವಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, “ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021″ ನ್ನು ಜಾರಿಗೊಳಿಸಿ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಟಿಡಿ 160 ಟಿಡಿಓ 2020, ದಿನಾಂಕ:14-07-2021ನ್ನು ಈ ಮೂಲಕ ರದ್ದುಗೊಳಿಸಿ ಆದೇಶಿಸಿದೆ.”
ಇದನ್ನೂ ಓದಿ: Electric Bike taxi Service : ನಿರ್ಬಂಧ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಮಾತ್ರ; ರ‍್ಯಾಪಿಡೊ ಸೇವೆಗೆ ತೊಂದರೆ ಇಲ್ಲ