ಬೆಂಗಳೂರು: 15 ವರ್ಷಗಳ ನಂತರ ರಾಜ್ಯದಲ್ಲಿ ಮಾಡಲಾಗಿರುವ ಭಾರಿ ವಿದ್ಯುತ್ ದರ ಕಡಿತ (Electricity Rate cut) ಇಂದಿನಿಂದ ಜಾರಿಯಾಗುತ್ತಿದೆ. ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ಪರಿಷ್ಕರಿಸಿರುವ ಆದೇಶ ಏ.1ರಿಂದ ಜಾರಿಯಾಗಲಿದ್ದು, 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.10 ರೂ. ಕಡಿಮೆಯಾಗಲಿದೆ.
15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆಯಾಗಿದ್ದು, 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್‌ಸಿ ಮಾಡಿರುವ ದರ ಪರಿಷ್ಕರಣೆ ಆದೇಶದಲ್ಲಿ ಈವರೆಗೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ 0-100 ವರೆಗಿನ ಯುನಿಟ್ ಹಾಗೂ 100ಕ್ಕಿಂತ ಹೆಚ್ಚು ಯುನಿಟ್ ಬಳಕೆಗೆ ಪ್ರತ್ಯೇಕವಾಗಿದ್ದ ಎಲ್.ಟಿ. ಗೃಹಬಳಕೆ ಶುಲ್ಕದ ಸ್ಲ್ಯಾಬ್ ರದ್ದು ಪಡಿಸಲಾಗಿದೆ.
ಗೃಹ ಜ್ಯೋತಿ ವಿದ್ಯುತ್ ಷರತ್ತಿನಲ್ಲಿ ಬದಲಾವಣೆ ಇಲ್ಲ
ವಿದ್ಯುತ್ ದರ ಪರಿಷ್ಕರಣೆಯಾದರೂ ಗೃಹ ಜ್ಯೋತಿ (Gruha Jyothi) ಉಚಿತ ವಿದ್ಯುತ್ ಬಳಕೆದಾರರಿಗೆ ಇದರ ಹೊರೆ ತಟ್ಟುವುದಿಲ್ಲ. ಯಾಕೆಂದರೆ, ಗೃಹಜ್ಯೋತಿಗೆ ಇರುವ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ 10 ಯುನಿಟ್ ಉಚಿತವಾಗಿ ನೀಡಲಾಗುತ್ತದೆ. ಉದಾಹರಣೆಗೆ, ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸುತ್ತಿದ್ದವರು ಈಗ 110 ಯೂನಿಟ್ ಬಳಸಿದರೆ ವಿದ್ಯುತ್ ಬಿಲ್ ಬರುವುದಿಲ್ಲ. ಅದೇ ರೀತಿ ಸರಾಸರಿ ಐವತ್ತು ಯುನಿಟ್ ಬಳಸುತ್ತಿದ್ದವರಿಗೆ 60 ಯುನಿಟ್ ವರೆಗೆ ಫ್ರೀ ಸಿಗಲಿದೆ. ಹೀಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವವರು ಬಿಲ್ ಕಟ್ಟುವಂತಿಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಬಿಲ್ ಬರುತ್ತದೆ.
ಏಕರೂಪದ ವಿದ್ಯುತ್ ದರ
ಎಷ್ಟೇ ಯುನಿಟ್ ಬಳಕೆ ಮಾಡಿದರೂ ಪ್ರತಿ ಯುನಿಟ್‌ಗೆ 5.90 ರೂ.ಗಳಂತೆ ದರ ನಿಗದಿ ಮಾಡಿದೆ. ಜತೆಗೆ ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಿದೆ. ಇದರಿಂದ 100ಕ್ಕಿಂತ ಹೆಚ್ಚು ಯುನಿಟ್ ಬಳಕೆ ಮಾಡುವವರಿಗೆ 7 ರೂ. ಬದಲಿಗೆ ಪ್ರತಿ ಯುನಿಟ್‌ಗೆ 5.90 ರು. ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ 15 ವರ್ಷಗಳ ಬಳಿಕ ವಿದ್ಯುತ್ ದರ ಕಡಿಮೆಯಾಗಿರುವ ಅನುಕೂಲವನ್ನು ಜನ ಪಡೆಯಲಿದ್ದಾರೆ.
100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈವರೆಗೆ ಪ್ರತಿ ಯುನಿಟ್‌ಗೆ 4.75 ರೂ. ನಿಗದಿ ಮಾಡಲಾಗಿತ್ತು. ಅದು ಸಹ 5.90 ರೂ.ಗೆ ಹೆಚ್ಚಳವಾಗುವುದರಿಂದ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಪ್ರತಿ ಯುನಿಟ್‌ಗೆ 1.15 ರು. ಶುಲ್ಕ ಹೆಚ್ಚಳ ಹೊರೆ ಬೀಳಲಿದೆ. ಆದರೆ, 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಶೇ.97ರಷ್ಟು ವಿದ್ಯುತ್ ಬಳಕೆದಾರರು ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ದರ ಏರಿಕೆ ಬಿಸಿ ತಾಗುವುದಿಲ್ಲ.
ಎಲ್.ಟಿ ಸಂಪರ್ಕ ಹೊಂದಿರುವ ಆಸ್ಪತ್ರೆ ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯುನಿಟ್‌ಗೆ 7.75 ರೂ. ನಿಗದಿ ಮಾಡಿದ್ದ ಶುಲ್ಕವನ್ನು 7.25 ರೂ.ಗೆ (50 ಪೈಸೆ ಇಳಿಕೆ) ಇಳಿಸಲಾಗಿದೆ. ಎಲ್.ಟಿ. ವಾಣಿಜ್ಯ ಬಳಕೆಯ ಸಂಪರ್ಕಗಳಿಗೆ ಡಿಮ್ಯಾಂಡ್ ಆಧಾರದ ಶುಲ್ಕ ನಿಗದಿ ಮಾಡಿದ್ದು ಹಿಂದಿನ ಸ್ಲ್ಯಾಬ್ ಪದ್ಧತಿ ರದ್ದು ಪಡಿಸಲಾಗಿದೆ. ಜತೆಗೆ ಪ್ರತಿ ಯುನಿಟ್‌ಗೆ 8.50 ರೂ. ಇದ್ದ ಬೆಲೆಯನ್ನು 8 ರೂ.ಗೆ ಇಳಿಸಿದೆ.
ಗೃಹ ಬಳಕೆ ವಿದ್ಯುತ್ ದರ
ಹಿಂದಿನ ದರ
0-100 ಯುನಿಟ್ – 4.75 ರು.
100ಕ್ಕಿಂತ ಹೆಚ್ಚು – 7.00 ರು.
ಪರಿಷ್ಕೃತ ದರ
ಎಲ್ಲಾ ಯುನಿಟ್ – 5.90 ರು.
ಇದನ್ನೂ ಓದಿ: Free Electricity: ಯಂತ್ರಗಳ ಅಡವಿಟ್ಟು ಈ ವರ್ಷ 33 ಕೋಟಿ ರೂ. ಸಾಲ ಪಡೆದ ಕರ್ನಾಟಕ ವಿದ್ಯುತ್ ನಿಗಮ!