Site icon Vistara News

Karnataka Budget 2024 : ಕಡಲ ತೀರ ವ್ಯಾಪಾರಕ್ಕೆ ಒತ್ತು; 1,017 ಕೋಟಿ ರೂಪಾಯಿ ಅನುದಾನ

State Budget

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವ ರಾಜ್ಯ ಬಜೆಟ್​ನಲ್ಲಿ (Karnataka Budget 2024) ಮೂಲ ಸೌಕರ್ಯ ಹಾಗೂ ಒಳನಾಡು ಸಾರಿಗೆಗೆ ಸಾಕಷ್ಟು ಕೊಡುಗೆಗಳನ್ನು ಘೋಷಿಸಲಾಗಿದೆ. ಪ್ರಮುಖವಾಗಿ ರಾಜ್ಯದ 320 ಕಿಲೋಮೀಟರ್​​ ಕರಾವಳಿ ತೀರವನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಯೋಜನೆ ರೂಪಿಸಲಾಗಿದೆ. ಕಡಲ ತೀರ ವ್ಯಾಪಾರ ವೃದ್ಧಿಗಾಗಿ 1,017 ಕೋಟಿ ರೂಪಾಯಿ ಪ್ರಕಟಿಸಲಾಗಿದೆ.

ವಿಸ್ತಾರ ನ್ಯೂಸ್​ನಲ್ಲಿ ಬಜೆಟ್​ ಲೈವ್​ ವೀಕ್ಷಿಸಿ

ರಾಜ್ಯದ ಕರಾವಳಿ ತೀರವನ್ನು ಆರ್ಥಿಕ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು. ಬಂದರು, ರೈಲು ಮತ್ತು ವಿಮಾನ ಸಂಪರ್ಕವನ್ನು ಒದಗಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಅಂದಾಜು 20,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸಮುದ್ರ ಸಾರಿಗೆ, ಸರಕು ಸಾಗಣೆ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಜಲಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿಯನ್ನು ಹಾಗೂ ಒಳನಾಡು ಜಲಸಾರಿಗೆ ನಿಯಮಗಳನ್ನು ರೂಪಿಸುವುದಾಗಿ ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಸಾಗರಮಾಲಾ ಯೋಜನೆಯಡಿ ಅನುದಾನ

ಸಾಗರಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಪ್ರಾಮುಖ್ಯತೆ ನೀಡಲು ಅಂದಾಜು 1,017 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 26 ಕಾಮಗಾರಿಗಳನ್ನು ನಡೆಯಲಿದೆ. ಇದರಲ್ಲಿ ರಾಜ್ಯದ ಪಾಲು 530 ಕೋಟಿ ರೂಪಾಯಿ.. ಮುಂದುವರಿದು ಇನ್ನೂ 1,145 ಕೋಟಿ ರೂ. ಮೊತ್ತದ 12 ಕಾಮಗಾರಿಗಳ ವಿಸ್ತೃತ ಯೋಜನಾ ವರದಿಗಳನ್ನು ಕೇಂದ್ರದ ಅನುಮೋದನೆಗಾಗಿ ಲ್ಲಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸಾಮರ್ಥ್ಯದ ಮತ್ತು 4,200 ಕೋಟಿ ರೂ. ಅಂದಾಜು ಯೋಜನಾ ವೆಚ್ಚದ ಹೊಸ ಆಳಸಮುದ್ರ ಸರ್ವಋತು ಬಂದರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಪಾವಿನಕುರ್ವೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಅಂದಾಜು 3048 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಎರಡನೇ ಬೃಹತ್ ಬಂದರಿನ ಅಭಿವೃದ್ಧಿಗೆ ಅಂತರಾಷ್ಟ್ರೀಯ ಟೆಂಡರ್ ಅನ್ನು ಕರೆಯಲಾಗಿದೆ ಎಂದು ಬಜೆಟ್​ನಲ್ಲಿ ಸಿಎಂ ಘೋಷಿಸಿದರು.

ಕಾರವಾರ, ಮಲ್ಪೆ ಮತ್ತು ಹಳೇ ಮಂಗಳೂರು ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಾಲ್ಕು ಬರ್ತ್​ಗ ಅಭಿವೃದ್ದಿಗೆ ಗುರುತು ಹಾಕಲಾಗಿದೆ. ಕಾರವಾರ, ಹಳೆ ಮಂಗಳೂರು ಮತ್ತು ರಾಜ್ಯದ 11 ಕಿರು ಬಂದರುಗಳಲ್ಲಿ ಸುಗಮ ಸಂಚಾರಕ್ಕಾಗಿ ಹೂಳೆತ್ತುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಗೊಳ್ಳಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ವಿವಿಧೋದ್ದೇಶ ಬಂದರಿನ ಅಭಿವೃದ್ಧಿಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಘೋಷಿಸಿದರು. ಹಳೆ ಮಂಗಳೂರು ಮತ್ತು ಹಂಗಾರಕಟ್ಟೆ ಬಂದರುಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಈ ವಲಯದಲ್ಲಿ ಇನ್ನೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಲಾಗುವುದು ಎಂದು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಮೂಲ ಸೌಕರ್ಯ ಅಭಿವೃದ್ಧಿ

ಮೂಲಸೌಕರ್ಯ ಅಭಿವೃದ್ದಿ ಇಲಾಖೆಯಡಿಯಲ್ಲಿ ಕಾರ್ಯಸಾಧ್ಯತಾ ವರದಿಗಳ ತಯಾರಿಕೆಗಾಗಿ Karnataka Infrastructure Project Development Fund ಅನ್ನು (KIPDF) ಸ್ಥಾಪಿಸಲಾಗಿದೆ.cಇದನ್ನು ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಲಾಗುವುದು ಮತ್ತು ಯೋಜನೆಗಳ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ನುರಿತ ಸಂಸ್ಥೆಗಳನ್ನು (Transaction Advisor) ನೇಮಿಸಿಕೊಳ್ಳಲಾಗುವುದು.

ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮೂಲಸೌಕರ್ಯ ಯೋಜನೆಗಳ ಪ್ರಗತಿ ಮೇಲ್ವಿಚಾರಣೆಗೆ ಹಾಗೂ ಎದುರಾಗುವ ಅಂತರ್ ಇಲಾಖಾ ಮತ್ತು ಹಣಕಾಸಿನ ತೊಡಕುಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳ ಕಛೇರಿಯಲ್ಲಿ ಪ್ರತ್ಯೇಕ ಘಟಕವನ್ನು ಸ್ಥಾಪನೆ ಮಾಡುವುದಾಗಿ ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತದೆ ಎಂದು ಸಿಎಂ ಬಜೆಟ್​ನಲ್ಲಿ ಪ್ರಕಟಿಸಿದರು.

ವಿಮಾನ ನಿಲ್ದಾಣಗಳಗಳ ಅಭಿವೃದ್ಧಿ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ದೃಷ್ಟಿಯಿಂದ 1600 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ ಪ್ರಸಕ್ತ ಸಾಲಿನಲ್ಲಿ ಬಾಕಿ 43 ಕೋಟಿ ರೂ. ಬಿಡುಗಡೆಗೊಳಿಸಲಾಗುವುದು.

ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 2023-24ನೇ ಸಾಲಿನಲ್ಲಿ 55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.

ಇದನ್ನೂ ಓದಿ : Karnataka Budget 2024 : ನಯಾಪೈಸೆ ಪ್ರಯೋಜನ ಇಲ್ಲದ ಬಜೆಟ್‌, ಉತ್ತರಕ್ಕೆ ಒಂದು ರೂ. ಕೂಡಾ ಇಲ್ಲ; ಬಿ.ವೈ ವಿಜಯೇಂದ್ರ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಸಿಗ್ನೇಚರ್ ಬಿಸಿನೆಸ್ ಪಾರ್ಕ್​​ನಿಂದ ಹಣಕಾಸು, ಉದಯೋನ್ಮುಖ ತಂತ್ರಜ್ಞಾನ ವಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಉತ್ತೇಜನ ದೊರೆಯಲಿದೆ. ಒಟ್ಟು 817 ಕೋಟಿ ರೂ. ಯೋಜನಾ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಮುಂದಿನ ದಿನಗಳಲ್ಲಿ 5,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ರೈಲ್ವೆ ಕಾಮಗಾರಿಗಳಿಗೆ ಉತ್ತೇಜನ

ರಾಜ್ಯದಲ್ಲಿ ರೈಲ್ವೆ ಇಲಾಖೆಯೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ 12,147 ಕೋಟಿ ರೂ.ಗಳ 9 ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯ ಕಾಮಗಾರಿಗಳು ಹಾಗೂ ಭೂಸ್ವಾಧೀನಕ್ಕಾಗಿ 9,915 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಭರಿಸಲಿದೆ. 2023-24ನೇ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ರೈಲ್ವೆ ಯೋಜನೆಗಳಿಗಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

Exit mobile version