ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟು, 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರವಾಸಕ್ಕಾಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು ಎನ್ನುವುದೇ ನಂಬಲಸಾಧ್ಯ ಸಂಗತಿಯಾಗಿದೆ! ಅತಿ ವೇಗದ ಚಾಲನೆಯಿಂದಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. 8 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಕಳೆದ ಎರಡು ತಿಂಗಳಲ್ಲಿ 20ಕ್ಕೂ ಅಧಿಕ ಶಾಲಾ ಪ್ರವಾಸ ವಾಹನಗಳು ಅಪಘಾತಕ್ಕೀಡಾಗಿವೆ. ಐವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ, ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಹುತೇಕ ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿಯೇ ಕಾರಣವಾಗಿದೆ. ಈ ಅಪಘಾತಗಳು ಮಕ್ಕಳ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಯನ್ನು ಹುಟ್ಟು ಹಾಕಿವೆ. ಪೋಷಕರಲ್ಲಿ ಆತಂಕ ಮೂಡಿಸಿದೆ.
ಶಾಲಾ ಪ್ರವಾಸವು ಮಕ್ಕಳ ಶೈಕ್ಷಣಿಕ ಪ್ರಮುಖ ಅಗತ್ಯಗಳಲ್ಲಿ ಒಂದು. ಆದರೆ, ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಶಾಲೆಗಳು ಬಾಗಿಲು ಹಾಕಿದ್ದವು. ಮಕ್ಕಳ ಕಲಿಕೆಯ ಜತೆಗೆ ಇತರ ಚಟುವಟಿಕೆಗಳಿಗೂ ತಡೆ ಬಿದ್ದಿತ್ತು. ಪ್ರವಾಸ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಶುರುವಾಗಿ, ಎಂದಿನ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಅದರ ಭಾಗವಾಗಿಯೇ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಪೂರ್ವ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ, ಅವರ ಕಲಿಕೆಯ ಅನುಭವವನ್ನು ಹೆಚ್ಚಿಸಲು ಈ ರೀತಿಯ ಪ್ರವಾಸಗಳು ಸಹಕಾರಿಯಾಗುತ್ತವೆ ಎನ್ನುವುದು ವೈಜ್ಞಾನಿಕ ಅಧ್ಯಯನದಿಂದ ಸಾಬೀತಾಗಿದೆ. ಆದರೆ, ಅಪಘಾತಗಳಿಂದಾಗಿ ಈ ಶಾಲಾ ಪ್ರವಾಸಗಳು ದುಃಖದ ಮೂಲಗಳಾಗಿ ಬದಲಾಗುತ್ತಿರುವುದು ಮಾತ್ರ ವಿಷಾದಕರ. ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿಕೊಡಲು ಹಿಂಜರಿಯುವ ಪೋಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ ಅಂಥ ಪೋಷಕರ ಸಾಲಿಗೆ ಇನ್ನಷ್ಟು ಪೋಷಕರನ್ನು ಸೇರ್ಪಡೆಯಾಗುವಂತೆ ಮಾಡುತ್ತಿವೆ ಈ ಅಪಘಾತಗಳು.
ಶೈಕ್ಷಣಿಕ ಪ್ರವಾಸಗಳನ್ನು ಯಾವ ರೀತಿ ಕೈಗೊಳ್ಳಬೇಕು ಎಂಬ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿರುತ್ತದೆ. ಅದರ ಪ್ರಕಾರವೇ, ಸ್ಕೂಲ್ ಟ್ರಿಪ್‌ಗಳನ್ನು ಆಯೋಜಿಸಬೇಕು. ಮಕ್ಕಳ ಸುರಕ್ಷತೆಯ ಕಡೆಗೆ ಗರಿಷ್ಠ ಆದ್ಯತೆ ನೀಡಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು. ಟೆಂಪೋ, ಮ್ಯಾಕ್ಸಿ ಕ್ಯಾಬ್, ಜೀಪ್ ಇತ್ಯಾದಿ ಖಾಸಗಿ ವಾಹನಗಳಲ್ಲಿ ಶಾಲಾ ಪ್ರವಾಸ ಕೈಗೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳಬೇಕು. ಈ ರೀತಿಯಾಗಿ ಸ್ಪಷ್ಟ ನಿಯಮಗಳಿದ್ದರೂ ಟ್ರ್ಯಾಕ್ಟರ್‌ಗಳಲ್ಲಿ ಮಕ್ಕಳನ್ನು ಶಾಲೆ, ಕಾಲೇಜು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎನ್ನುವುದು ಸೋಜಿಗದ ವಿಷಯವಾಗಿದೆ. ಮಕ್ಕಳ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಂಡು, ಸ್ಕೂಲ್ ಟ್ರಿಪ್‌ಗಳನ್ನು ಪೂರ್ಣಗೊಳಿಸುತ್ತಿರುವುದು ಕಂಡು ಬರುತ್ತಿದೆ. ಕಳೆದ ಒಂದೆರಡು ತಿಂಗಳಲ್ಲಿ ಸಂಭವಿಸಿದ ಅಪಘಾತಗಳು, ಬಳಸಿದ ವಾಹನಗಳನ್ನು ಗಮನಿಸಿದರೆ ಇದು ವೇದ್ಯವಾಗುತ್ತಿದೆ. ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಮಕ್ಕಳ ಜೀವಕ್ಕೆ ಸಂಚಾರ ತರುತ್ತಿರುವುದು ಅಕ್ಷಮ್ಯ.
ಪ್ರವಾಸ ಎಂಬುದು ಸಂತೋಷವನ್ನು ತರುವಂಥ, ಮನಸ್ಸನ್ನು ಉಲ್ಲಾಸಗೊಳಿಸುವಂಥ ಸಂಗತಿ. ಶೈಕ್ಷಣಿಕ ಪ್ರವಾಸವಾದರೆ, ಜ್ಞಾನದ ಹರಿವು ಹೆಚ್ಚಿಸುವ ಮಹತ್ವದ ಸಾಧನವೂ ಹೌದು. ಹಾಗಾಗಿ, ಮಕ್ಕಳು ಮತ್ತು ಪೋಷಕರಿಬ್ಬರೂ ಇದರಿಂದ ಸಂತೋಷವನ್ನು ಅನುಭವಿಸುವಂತಾಗಬೇಕು. ಅದರೆ ಅದೇ ಪ್ರವಾಸ ಅವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಬಾರದು. ಹಾಗಾಗಿ, ಶಾಲೆ – ಕಾಲೇಜುಗಳು ಸರ್ಕಾರ ಸೂಚಿಸಿರುವ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ಅನ್ವಯವೇ ಪ್ರವಾಸಗಳನ್ನು ಆಯೋಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲೇಬಾರದು. ಒಂದೊಮ್ಮೆ, ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಪ್ರವಾಸಕ್ಕೆ ಹೋಗುವ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ಇನ್ನಷ್ಟು ನಿಯಮಗಳನ್ನು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ಜಾರಿಗೆ ತರಬೇಕು. ಶಾಲಾ ಪ್ರವಾಸಕ್ಕೆ ಗೊತ್ತುಪಡಿಸುವ ಕೆ ಎಸ್ ಆರ್ ಟಿ ಸಿ ಬಸ್ ದರದಲ್ಲಿ ಸರ್ಕಾರ ಮತ್ತಷ್ಟು ವಿನಾಯಿತಿ ಪ್ರಕಟಿಸಬೇಕು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಫಲ ಸ್ಥಳೀಯರಿಗೂ ಸಿಗಲಿ