Site icon Vistara News

Water Crisis: ಈಜು ಕೊಳಕ್ಕೆ ನೀರು ಬಳಸಿದರೂ ಬೀಳುತ್ತೆ ಭಾರಿ ದಂಡ; ಜಲ ಮಂಡಳಿ ಎಚ್ಚರಿಕೆ

Even if you use water in a swimming pool, you will be fined heavily

ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಸಮಸ್ಯೆ (Water Crisis) ಉಲ್ಬಣಿಸಿರುವುದರಿಂದ ಎಚ್ಚೆತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು(BWSSB), ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನಗಳ ಸ್ವಚ್ಛತೆ, ಕೈದೋಟ, ಕಟ್ಟಡ ನಿರ್ಮಾಣ ಸೇರಿ 6 ಉದ್ದೇಶಗಳಿಗೆ ಕುಡಿಯುವ ನೀರು ಬಳಸಿದರೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಇತ್ತೀಚೆಗೆ ಎಚ್ಚರಿಕೆ ನೀಡಿದ್ದ ಜಲಮಂಡಳಿ, ಇದೀಗ ಆ ಪಟ್ಟಿಗೆ ಸ್ವಿಮ್ಮಿಂಗ್‌ ಪೂಲ್‌ ಅನ್ನು ಸೇರಿಸಿದೆ. ಕುಡಿಯುವ ನೀರನ್ನು ಈಜು ಕೊಳ ಉದ್ದೇಶಗಳಿಗೆ ಬಳಸುವುದನ್ನು ನೀಷೇಧಿಸಿ ಆದೇಶ ಹೊರಡಿಸಿರುವ ಜಲಮಂಡಳಿಯು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಭಾರಿ ದಂಡಾಸ್ತ್ರ ಪ್ರಯೋಗ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈಜು ಕೊಳ ಉದ್ದೇಶಗಳಿಗೆ ಬಳಸುವುದನ್ನು ನೀಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ, ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡದ ಮೊತ್ತ 5000 ರೂಪಾಯಿ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿಯಂತೆ ಪ್ರತಿದಿನದಂತೆ ದಂಡ ಹಾಕಲಾಗುವುದು. ಹಾಗೆಯೇ, ಈಜುಕೊಳದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದಂಡ ವಸೂಲಿ ಮಾಡಲಾಗುವುದು. ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರೂ ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ | Water Crisis: ಬೆಂಗಳೂರಲ್ಲಿ ಈ 6 ಕೆಲಸಕ್ಕೆ ನೀರು ಬಳಸಿದ್ರೆ 5000 ರೂ. ದಂಡ! ನೀವೂ ದೂರು ಕೊಡಿ

ಬೆಂಗಳೂರು ಮಹಾನಗರದಲ್ಲಿ ಕಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1.40 ಕೋಟಿ ಜನಸಂಖ್ಯೆ ಇದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಲ ಮಂಡಳಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.

Exit mobile version