ನವದೆಹಲಿ: ವಾರಾಂತ್ಯದಲ್ಲಿ ರಾಜಸ್ಥಾನದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿದೆ. ಆದರೆ, ಕನ್ನಡಿಗ ಹಾಗೂ ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ (Venkatesh Prasad) ಮೋದಿ ಹೇಳಿದ್ದು ಸರಿ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಪ್ಪಿದೆ ಎಂದು ಹೇಳುವುದಕ್ಕೆ ಐಪಿಎಲ್ 2024ರ ಉದಾಹರಣೆಯನ್ನು ತೆಗೆದುಕೊಂಡಿದ್ದಾರೆ.
ರಾಜಸ್ಥಾನದ ಭಾಷಣವನ್ನು ಉಲ್ಲೇಖಿಸಿ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಅಲ್ಲಿ ಮೋದಿ ಅವರು ದೇಶದ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿದ್ದಾರೆ. ಈ ವರ್ಷದ ಚುನಾವಣೆಯ ನಂತರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ “ನುಸುಳುಕೋರರಿಗೆ ಆಸ್ತಿಗಳನ್ನು ಮರುಹಂಚಿಕೆ ಮಾಡಲು” ಕಾಂಗ್ರೆಸ್ ಯೋಜಿಸಿದೆ ಎಂದು ಆರೋಪಿಸಿದ್ದಾರೆ. ಭಾರತದ ಮಾಜಿ ವೇಗಿ ಈ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ರಿಕೆಟ್ ಹೋಲಿಕೆಯನ್ನು ಮಾಡಿದ್ದಾರೆ.
“ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರುಹಂಚಿಕೆ ಮಾಡುವುದು ರಾಜಕೀಯ ಪಕ್ಷದ ಪ್ರಣಾಳಿಕೆಗಳಲ್ಲಿ ಒಂದಾಗಿದೆ. ಬಡವರನ್ನು ಮೇಲೆತ್ತಬೇಕಾಗಿರುವುದು ಸರಿ. ಆದರೆ ಈ ಆಲೋಚನಾ ಪ್ರಕ್ರಿಯೆಯು ತುಂಬಾ ಕರುಣಾಜನಕವಾಗಿದೆ ಎಂದು ಪ್ರಸಾದ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೋದಿಗೆ ಮತ ಹಾಕಬೇಡಿ ಎಂದ ರೈತ ಮುಖಂಡರಿಗೆ ಚಾಮರಾಜನಗರ ರೈತರಿಂದ ಕ್ಲಾಸ್!
ನಾವು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳಿಂದ ತಲಾ 4 ಅಂಕಗಳನ್ನು ತೆಗೆದುಕೊಂಡು ಅದನ್ನು ಕೊನೆಯ 3 ತಂಡಗಳಿಗೆ ಮರು ವಿತರಿಸಿದರೆ, ಅವರೆಲ್ಲರೂ ಪ್ಲೇಆಫ್ ಹಂತಕ್ಕೆ ಪ್ರವೇಶಿಸಬಹುದು ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆ ಸರಿಯಿಲ್ಲ ಎಂಬುದಾಗಿ ಹೇಳಿದ್ದಾರೆ.
ಮೋದಿ ಭಾಷಣಕ್ಕೆ ಟೀಕೆ
ಈ ವಾರಾಂತ್ಯದಲ್ಲಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಮಾಡಿದ ಭಾಷಣವು ಪ್ರತಿಪಕ್ಷಗಳು ಮತ್ತು ನಾಗರಿಕ ಸಮಾಜದ ಒಂದು ವಿಭಾಗದಿಂದ ತೀವ್ರ ವಿರೋಧಕ್ಕೆ ಕಾರಣವಾಯಿತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸುಳ್ಳುಗಳ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಮುಸ್ಲಿಮರನ್ನು ನಿಂದಿಸುವುದು ಪ್ರಧಾನಿಯ ಏಕೈಕ ‘ಗ್ಯಾರಂಟಿ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಮೋದಿಗೆ ಟೀಕೆ ಮಾಡಿದ್ದಾರೆ.
ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ ಎಂದಿದ್ದ ಮೋದಿ
ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಗುಡುಗಿದ್ದಾರೆ. ಉತ್ತರಪ್ರದೇಶದ ಆಲಿಗಡ್(Aligarh)ದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ (Lok Sabha Election 2024).
“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದಾರೆ.