Site icon Vistara News

Manmohan Singh: ‌33 ವರ್ಷದ ಬಳಿಕ ಮನಮೋಹನ್‌ ಸಿಂಗ್‌ ಇಂದು ರಾಜ್ಯಸಭೆಯಿಂದ ನಿವೃತ್ತಿ; ʼಒಂದು ಯುಗ ಮುಗಿಯಿತುʼ

manmohan singh

ಹೊಸದಿಲ್ಲಿ: ನೆಹರೂ- ಗಾಂಧಿ ಕುಟುಂಬದವರ (Nehru Family) ಹೊರತಾಗಿ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ಪ್ರಧಾನಿ, ಮಾಜಿ ಪಿಎಂ ಮನಮೋಹನ್ ಸಿಂಗ್ (Manmohan Singh) ಅವರು ತಮ್ಮ 33 ವರ್ಷಗಳ ದೀರ್ಘಾವಧಿಯ ರಾಜ್ಯಸಭೆಯ (Rajya Sabha) ಇನ್ನಿಂಗ್ಸ್ ಅನ್ನು ಬುಧವಾರ ಕೊನೆಗೊಳಿಸಲಿದ್ದಾರೆ.

91 ವರ್ಷದ ಸಿಂಗ್ ಅವರು ಇಂದಿರಾ ಗಾಂಧಿ (ಅವರ ಮೊದಲ ಅವಧಿಯಲ್ಲಿ) ಮತ್ತು ಇಂದರ್ ಕುಮಾರ್ ಗುಜ್ರಾಲ್ ನಂತರ ರಾಜ್ಯಸಭೆಯಿಂದ ಬಂದ ಮೂರನೇ ಪ್ರಧಾನಿಯಾಗಿದ್ದರು. ಭಾರತದ ಆರ್ಥಿಕ ಉದಾರೀಕರಣದ (economic liberalisation) ವಾಸ್ತುಶಿಲ್ಪಿ ಮತ್ತು 2008ರ ಇಂಡೋ-ಯುಎಸ್ ಪರಮಾಣು ಒಪ್ಪಂದದ (Indo-US nuclear agreement) ಹಿಂದಿನ ಶಕ್ತಿ ಎಂದೇ ಅವರನ್ನು ಗುರುತಿಸಲಾಗುತ್ತದೆ. ಆಧಾರ್‌ (Aadhar) ಅನ್ನು ಪ್ರಾರಂಭಿಸಿದವರು, ನೇರ ಲಾಭ ವರ್ಗಾವಣೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ತಂದವರು.

ಭಾರತದ ಏಕೈಕ ಸಿಖ್ ಪ್ರಧಾನಿಯಾಗಿರುವ ಸಿಂಗ್‌ ಅವರು ವೈಯಕ್ತಿಕ ಮಟ್ಟದಲ್ಲಿ ಜಂಟಲ್‌ಮನ್‌ ಹಾಗೂ ಮುತ್ಸದ್ಧಿ ಆಗಿದ್ದವರು. ಯುಪಿಎ ಸರ್ಕಾರ ರಚನೆಯಾದಾಗ, ರಕ್ಷಣಾ ಸಚಿವ ಪ್ರಣಬ್ ಮುಖರ್ಜಿ (Pranab Mukherjee) ಅವರು ಸಿಂಗ್ ತಮ್ಮನ್ನು “ಸರ್” ಎಂದು ಸಂಬೋಧಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಬೇಕಾಯಿತು. ಯಾಕೆಂದರೆ ಅದು ಅವರ ಹಳೆಯ ಅಭ್ಯಾಸವಾಗಿತ್ತು. ಮುಖರ್ಜಿ ಅವರು ಕೇಂದ್ರದಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಸಿಂಗ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಆಗಿದ್ದರು.

ಸಿಂಗ್ ಅವರು ಜೂನ್ 1991ರಲ್ಲಿ ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ ಅಕ್ಟೋಬರ್ 1991ರಲ್ಲಿ ಮೇಲ್ಮನೆ ಪ್ರವೇಶಿಸಿದರು. ಮೇಲ್ಮನೆಯಲ್ಲಿ ಐದು ಅವಧಿಗೆ ಅಸ್ಸಾಂ ಅನ್ನು ಪ್ರತಿನಿಧಿಸಿದರು ಮತ್ತು 2019ರಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರು. 10 ವರ್ಷಗಳ ಆಡಳಿತದಲ್ಲಿ ಸಿಂಗ್ ದುರ್ಬಲವಾದ ಒಕ್ಕೂಟವನ್ನು ಮುನ್ನಡೆಸಿದರು.

ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಪ್ರವೀಣರಾಗಿರುವ ಸಿಂಗ್ ಅತ್ಯುತ್ತಮ ಸಂಸದೀಯ ಭಾಷಣಕಾರರಲ್ಲಿ ಒಬ್ಬರಾಗಿದ್ದರು. “ಯಾರ ಸಮಯ ಬಂದಿದೆಯೋ ಅವರನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ. ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಅಂತಹ ಒಂದು ಸಾಧ್ಯತೆ” ಎಂದು ಸಿಂಗ್ ಅವರು 1991ರಲ್ಲಿ ತಮ್ಮ ಮೊದಲ ಬಜೆಟ್ ಮಂಡನೆಯಲ್ಲಿ ಹೇಳಿದ್ದರು. 1984ರ ಸಿಖ್ ವಿರೋಧಿ ಹತ್ಯಾಕಾಂಡದ ಕುರಿತು ಮೇಲ್ಮನೆಯಲ್ಲಿ “ನಾನು ನಾಚಿಕೆಯಿಂದ ತಲೆ ಬಾಗಿಸುತ್ತೇನೆ” ಎಂದು ಹೇಳಲು ಅವರು ಹಿಂಜರಿಯಲಿಲ್ಲ.

ಕವಿ ಇಕ್ಬಾಲ್‌ನ ಕಟ್ಟಾ ಅಭಿಮಾನಿಯಾದ ಸಿಂಗ್, ಸದನದಲ್ಲಿ ಅವರ ಶಾಯರಿಗಳನ್ನು ಉದಾಹರಿಸುತ್ತಿದ್ದರು. “ಮಾನ ಕಿ ತೇರಿ ದೀದ್ ಕೆ ಕಬಿಲ್ ನಹೀ ಹೂನ್ ಮೈನ್, ತು ಮೇರಾ ಶೌಕ್ ದೇಖ್ ಮೇರಾ ಇಂತಿಜಾರ್ ದೇಖ್ (ನಾನು ಒಪ್ಪುತ್ತೇನೆ, ನಾನು ನಿಮ್ಮ ದೃಷ್ಟಿಗೆ ಯೋಗ್ಯವಾಗಿಲ್ಲ, ಆದರೆ ನನ್ನ ಉತ್ಸಾಹವನ್ನು ನೋಡಿ ಮತ್ತು ನಾನು ಹೇಗೆ ಕಾಯುತ್ತಿದ್ದೇನೆ ಎಂದು ನೋಡಿ)”

ಮಲ್ಲಿಕಾರ್ಜುನ ಖರ್ಗೆ ಶ್ಲಾಘನೆ

“ನಾವು ನಿಮ್ಮಿಂದ ರೂಪುಗೊಂಡ ಕಾಲದಲ್ಲಿ ವಾಸಿಸುತ್ತಿದ್ದೇವೆ. ಇಂದು ನಾವು ಅನುಭವಿಸುತ್ತಿರುವ ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯು ನಮ್ಮ ಮಾಜಿ ಪ್ರಧಾನಿ, ಭಾರತರತ್ನ ಪಿವಿಎನ್‌ ಅವರೊಂದಿಗೆ ನೀವು ಹಾಕಿದ ಅಡಿಪಾಯದ ಮೇಲೆ ರೂಪುಗೊಂಡಿದೆ. ನಿಮ್ಮ ದುಡಿಮೆಯ ಲಾಭವನ್ನು ಪಡೆದಿರುವ ಈಗಿನ ನಾಯಕರು ರಾಜಕೀಯ ಪಕ್ಷಪಾತದ ಕಾರಣದಿಂದ ನಿಮಗೆ ಮನ್ನಣೆ ನೀಡಲು ಹಿಂಜರಿಯುತ್ತಿದ್ದಾರೆ” ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಸಿಂಗ್‌ಗೆ ಭಾವಪೂರ್ಣ ನಮನ ಅರ್ಪಿಸಿದ್ದಾರೆ.

“ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ರಚಿಸುವ ಮೂಲಕ ವೈಯಕ್ತಿಕ ಫಲಾನುಭವಿಗಳಿಗೆ ಪ್ರಯೋಜನಗಳ ನೇರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸಿಂಗ್ ಅವರ ಸರ್ಕಾರವು ಪ್ರಾರಂಭಿಸಿದ ಕೆಲಸವನ್ನು ಮತ್ತು ಆಧಾರ್ ವಿಶಿಷ್ಟ ಗುರುತಿನ ಕೆಲಸದಲ್ಲಿ ಸಿಂಗ್ ಮಾಡಿದ ಕೆಲಸಕ್ಕೆ ಅವರಿಗೆ ಯಾವುದೇ ಕ್ರೆಡಿಟ್ ನೀಡದೆ ನಂತರದ ಸರ್ಕಾರವು ಹೈಜಾಕ್ ಮಾಡಿದೆ” ಎಂದು ಖರ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ.

ಸಿಂಗ್ ಅವರನ್ನು “ಮಧ್ಯಮ ವರ್ಗದ ಹೀರೋ” ಎಂದು ಶ್ಲಾಘಿಸಿದ ಖರ್ಗೆ, “ನೀವು ಪ್ರಧಾನಿ ಕಚೇರಿಗೆ ತಂದ ಶಾಂತತೆ ಮತ್ತು ಘನತೆಯನ್ನು ರಾಷ್ಟ್ರವು ಕಳೆದುಕೊಳ್ಳುತ್ತಿದೆ. ಸಂಸತ್ತು ಈಗ ನಿಮ್ಮ ಬುದ್ಧಿವಂತಿಕೆ ಮತ್ತು ಅನುಭವವನ್ನು ಕಳೆದುಕೊಳ್ಳಲಿದೆ. ನಿಮ್ಮ ಘನತೆ, ಅಳತೆ, ಮೃದುವಾಗಿ ಆಡುವ, ಈಗಿನ ರಾಜಕಾರಣಿಗಳ ಸುಳ್ಳುಗಳಿಂದ ತುಂಬಿದ ದೊಡ್ಡ ಧ್ವನಿಗಳಿಗೆ ವಿರುದ್ಧವಾದ ಮಾತುಗಳನ್ನು ಕಳೆದುಕೊಳ್ಳಲಿದೆ” ಎಂದಿದ್ದಾರೆ.

ಅರ್ಥಶಾಸ್ತ್ರದ ಲೇಖನಗಳ ಅಧ್ಯಯನಕ್ಕಾಗಿ ಸಂಸತ್ತಿನ ಲೈಬ್ರರಿಗೆ ಸಿಂಗ್ ನಿಯಮಿತವಾಗಿ ಭೇಟಿ ಕೊಡುತ್ತಿದ್ದರು. ಒಮ್ಮೆ ಅವರು ಸೆಂಟ್ರಲ್ ಹಾಲ್‌ನ ಹೊರಗಿನ ಹಾಲಿನ ಸ್ಟಾಲ್‌ನಲ್ಲಿ ಲಸ್ಸಿ ಕುಡಿದರು. ಹಣಕ್ಕಾಗಿ ತಮ್ಮ ಜೇಬಿನಲ್ಲಿ ಹುಡುಕಾಡತೊಡಗಿದರು. ಅಂಗಡಿಯಾತ ಹಣ ಬೇಡವೆಂದು ಎಷ್ಟು ವಿನಂತಿಸಿದರೂ ಕೇಳದೆ, ತಮ್ಮ ಹಲವಾರು ಜೇಬುಗಳಿಂದ ನಾಣ್ಯಗಳನ್ನು ಹುಡಹುಡುಕಿ ತೆಗೆದು ₹6 ಕೊಟ್ಟರು!

ಸಂಸತ್ತಿನಲ್ಲಿ ಸಿಂಗ್ ಅವರ ಕೊನೆಯ ಮಾತು, ನೋಟು ಅಮಾನ್ಯೀಕರಣದ ವಿರುದ್ಧ ಬಂದಿತ್ತು. ಅದನ್ನು ಅವರು “ಸಂಘಟಿತ ಮತ್ತು ಕಾನೂನುಬದ್ಧ ಲೂಟಿ” ಎಂದು ಕರೆದಿದ್ದರು. ಸಿಂಗ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರು, “ಹಲವು ವರ್ಷಗಳ ಕಾಲ ಡಾ ಸಿಂಗ್ ಅವರೊಂದಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ಶ್ರೇಷ್ಠ ಸವಲತ್ತುಗಳಲ್ಲಿ ಒಂದಾಗಿದೆ” ಎಂದಿದ್ದಾರೆ.

ಸಿಂಗ್ ಅವರ ನೇತೃತ್ವದಲ್ಲಿ ಶಿಕ್ಷಣ ಮತ್ತು ಕಾನೂನು ಸಚಿವರಾಗಿದ್ದ ಕಪಿಲ್ ಸಿಬಲ್ ಅವರು, “ಪ್ರಧಾನಿಯಾಗಿ 10 ವರ್ಷಗಳಲ್ಲಿ, ಇದನ್ನು ಮಾಡಿ ಅಥವಾ ಅದನ್ನು ಮಾಡಿ ಎಂದು ಹೇಳಲು ಅವರು ಎಂದಿಗೂ ನನಗೆ ಕರೆ ಮಾಡಲಿಲ್ಲ. ನಾನು ಶೈಕ್ಷಣಿಕ ಸುಧಾರಣೆಗಳನ್ನು ತರಲು ಪ್ರಯತ್ನಿಸಿದಾಗ, ಇದಕ್ಕೆ ವಿರೋಧವಿದೆ ಎಂದು ಅವರು ನನಗೆ ಹೇಳಿದರು. ಅವರು ಎಂದಿಗೂ ನನ್ನ ಮೇಲೆ ಹಸ್ತಕ್ಷೇಪ ಮಾಡಲಿಲ್ಲ ಅಥವಾ ಅವರ ಅಭಿಪ್ರಾಯವನ್ನು ಹೇರಲಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: Rajya Sabha : ಮನಮೋಹನ್ ಸಿಂಗ್ ಸೇರಿ 54 ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿ, ಇನ್ಯಾರೆಲ್ಲ ಇದ್ದಾರೆ?

Exit mobile version