Site icon Vistara News

ವಿಸ್ತಾರ ಸಂಪಾದಕೀಯ: ನಕಲಿ ಸುದ್ದಿ ತಡೆಗೆ Fact Check ವಿಭಾಗ ಸ್ವಾಗತಾರ್ಹ, ಆದರೆ ದುರುಪಯೋಗ ಆಗದಿರಲಿ

fact-check-section-is-welcome-to-prevent-fake-news-but-should-not-be-misused

#image_title

ನಕಲಿ ಸುದ್ದಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಅವುಗಳನ್ನು ಪತ್ತೆ ಹಚ್ಚಲು ನೂತನ ಫ್ಯಾಕ್ಟ್‌ ಚೆಕ್‌ ವಿಭಾಗವನ್ನು (Fact Check Body) ಘೋಷಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್‌ ಸುದ್ದಿಗಳನ್ನು ಎಲ್ಲ ವಿಭಾಗಗಳಲ್ಲಿ ಪರಿಶೀಲಿಸಲು, ಅವುಗಳ ಸತ್ಯಾಂಶವನ್ನು ಗಮನಿಸಲು ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಜನರಿಗೆ ಸರ್ಕಾರದ ಕುರಿತು ತಪ್ಪು ಮಾಹಿತಿ ಹೋಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವರು ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರವು 2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳನ್ನು ಬದಲಿಸಿದೆ. ಇದು ಒಂದು ದೃಷ್ಟಿಯಿಂದ ಸ್ವಾಗತಾರ್ಹ. ಇನ್ನೊಂದು ದೃಷ್ಟಿಯಿಂದ ಹೆಚ್ಚಿನ ವಿವೇಚನೆಯನ್ನೂ ಬಳಸಬೇಕಾದ ನಿರ್ಧಾರ.

ಸುದ್ದಿಯ ಪಡೆಯುವಿಕೆ ಇಂದು ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್‌ ಆಗಿದೆ. ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ನೆಲೆಯನ್ನು ಕುಂಠಿತಗೊಳಿಸಿಕೊಳ್ಳುತ್ತಿರುವಂತೆ ಡಿಜಿಟಲ್‌ ಹಾಗೂ ದೃಶ್ಯ ಮಾಧ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಪಡೆಯುತ್ತಿವೆ. ಸಾಂಪ್ರದಾಯಿಕ ಮಾಧ್ಯಮಗಳ ಗ್ರಾಹಕರು ಹೊಂದಿದ್ದ ಪ್ರಬುದ್ಧತೆಯನ್ನು ಹೊಸ ತಲೆಮಾರಿನ ಡಿಜಿಟಲ್‌ ಗ್ರಾಹಕರು ಹೊಂದಿಲ್ಲದಿರುವುದರಿಂದ, ನಿಖರ ಸುದ್ದಿಗಳ ಕೊರತೆ ಹಾಗೂ ನಕಲಿ ಸುದ್ದಿಗಳ ಹಾವಳಿ ಮಿತಿಮೀರಿದೆ. ಇದರಿಂದಾಗಿ ಡಿಜಿಟಲ್‌ ಹಾಗೂ ದೃಶ್ಯ ಮಾಧ್ಯಮಗಳ ಬಗ್ಗೆಯೇ ನೋಡುಗರು ಅನುಮಾನ ತಾಳುವಂತಾಗಿದೆ. ಮಾತ್ರವಲ್ಲ ಅನೇಕ ಸಲ ಗಲಭೆ, ಅಶಾಂತಿ, ಸಾಮಾಜಿಕ ಅಸ್ಥಿರತೆಯನ್ನೂ ಈ ನಕಲಿ ಸುದ್ದಿಗಳು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ fact check body ರಚನೆ ಸ್ವಾಗತಾರ್ಹ.

ಸೋಷಿಯಲ್​ ಮೀಡಿಯಾಗಳ ವ್ಯಾಪ್ತಿ ಹೆಚ್ಚಿ, ಅದರಲ್ಲಿ ನಕಲಿ/ಸುಳ್ಳು ಸುದ್ದಿಗಳೂ ಹರಡಲು ಪ್ರಾರಂಭವಾದ ನಂತರ ‘ಫ್ಯಾಕ್ಟ್​ಚೆಕ್​ (ಸತ್ಯಶೋಧನೆ-Fact Check)’ ಎಂಬುದು ಕೂಡ ಇಂದು ಒಂದು ಪೂರ್ಣಪ್ರಮಾಣದ ಮಾಧ್ಯಮವೇ ಆಗಿದೆ. ಯಾವುದೇ ಫೋಟೋ, ಟ್ವೀಟ್​ ಮತ್ತು ಇನ್ನಿತರ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು/ವಿಡಿಯೊಗಳು ತಪ್ಪಾದ ಮಾಹಿತಿಯನ್ನು ಬಿತ್ತರಿಸುತ್ತಿದ್ದರೆ, ಆ ಬಗ್ಗೆ ಸತ್ಯವನ್ನು ಶೋಧಿಸಿ ಜನರಿಗೆ ತಿಳಿಸುವ ಕೆಲಸವನ್ನು ಅನೇಕ ಮಾಧ್ಯಮಗಳು, ಸಂಸ್ಥೆಗಳು ಈ ಫ್ಯಾಕ್ಟ್​ ಚೆಕ್ ಮೂಲಕ ಮಾಡುತ್ತಿವೆ. ಈಗೀಗ ಫ್ಯಾಕ್ಟ್​ಚೆಕ್​ ಎಂಬ ಪದ ಹೆಚ್ಚೆಚ್ಚು ಬಳಕೆಗೆ ಬರುತ್ತಿದೆ. ಪ್ರತಿವರ್ಷ ಏಪ್ರಿಲ್​ 2ರಂದು ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ದಿನವನ್ನೂ ಆಚರಿಸಲಾಗುತ್ತದೆ. ಸತ್ಯಶೋಧನೆ ಎಂಬುದು ಇಂದು ಅಗತ್ಯವೇ ಆಗಿದೆ.

ಸರ್ಕಾರ ತಿಳಿಸಿರುವಂತೆ, ಇದು ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್‌ ಸುದ್ದಿಗಳನ್ನು ಪರಿಶೀಲಿಸಿ ಸತ್ಯಶೋಧನೆ ನಡೆಸಲು ಸೀಮಿತವಾಗಿದೆ. ಸರ್ಕಾರಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು, ಸುಳ್ಳುಸುದ್ದಿ ಹರಡುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗಬಲ್ಲದು. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು, ನಿಯಂತ್ರಿಸಲು ಕೇಂದ್ರ ಸರ್ಕಾರ ಒಂದು ತಂಡವನ್ನು ರಚಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳೇ ಇರಲಿದ್ದಾರೆ. ಇವರು ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಿ ಆ ಸುದ್ದಿಗಳನ್ನು ತೆಗೆಯುವಂತೆ ಆಯಾ ಸಂಸ್ಥೆಗಳಿಗೆ ಸೂಚಿಸುತ್ತಾರೆ. ತೆಗೆಯದಿದ್ದರೆ ಐಟಿ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಿಐಬಿ ಕೂಡ ಫ್ಯಾಕ್ಟ್‌ಚೆಕ್‌ ಮಾಡುವ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡುತ್ತಿತ್ತು. ಇದೀಗ ಸತ್ಯಶೋಧನೆ ಮಂಡಳಿಯ ಮೂಲಕ ಸರ್ಕಾರಕ್ಕೆ ಈ ವಿಭಾಗದಲ್ಲಿ ಇನ್ನಷ್ಟು ಹಿಡಿತ ಬರುತ್ತದೆ. ಆದರೆ, ಇದು ಕಾರ್ಯಾಚರಿಸುವ ವಿಧಾನದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಈ ಮಂಡಳಿ ನಿರ್ದಿಷ್ಟ ಸುದ್ದಿಗಳನ್ನು ನಕಲಿ ಎಂದು ಹೇಗೆ ತೀರ್ಮಾನಿಸುತ್ತದೆ? ಸರ್ಕಾರಕ್ಕೆ ಮುಜುಗರ ಉಂಟುಮಾಡುವ- ಆದರೆ ಸುಳ್ಳಲ್ಲದ ಸುದ್ದಿಗಳನ್ನು ಕೂಡ ಈ ವ್ಯವಸ್ಥೆ ಸುಳ್ಳು ಎಂದು ಬಿಂಬಿಸುವ ಸಾಧ್ಯತೆಯೂ ಇಲ್ಲವೇ? ಸರ್ಕಾರದ ಕೆಲವೇ ಕೆಲವರ ತಾಳಕ್ಕೆ ತಕ್ಕಂತೆ ಕುಣಿಯುವ ಸಾಧ್ಯತೆಯಿದೆಯಲ್ಲವೇ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ ಸ್ವಾಗತಾರ್ಹ

ಅಂದರೆ ಕೇಂದ್ರ ಸರ್ಕಾರ ತನ್ನನ್ನು ವಿಮರ್ಶಿಸುವ, ಟೀಕಿಸುವ ಸುದ್ದಿಗಳನ್ನು ದಮನಿಸಲು ಈ fact check ವಿಭಾಗವನ್ನು ಬಳಸುವಂತಾಗಬಾರದು. ಒಂದು ಸರ್ಕಾರ ಮನಸ್ಸು ಮಾಡಿದರೆ ಸ್ವತಂತ್ರ ಮಾಧ್ಯಮಗಳನ್ನು ದಮನಿಸುವ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಇದರ ಸಾಧ್ಯತೆ ಸೀಮಿತವಾಗಿರುತ್ತದೆ. ಸರ್ಕಾರ ಇಂಥ ಸಂಸ್ಥೆಗಳನ್ನು ರಚಿಸುತ್ತಾ, ಕಾನೂನುಗಳನ್ನು ಸೃಷ್ಟಿಸುತ್ತಾ ಹೋದಂತೆ ಸ್ವತಂತ್ರ ಮಾಧ್ಯಮಗಳ ಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ್ದು ಹಾಗೂ ಮಾಧ್ಯಮಗಳದ್ದೂ ಆಗಿದೆ.

Exit mobile version