Site icon Vistara News

Farmers Protest: ಫೆ.29ರವರೆಗೆ ರೈತರ ನಡಿಗೆ ಸ್ತಬ್ಧ, ಗಡಿಯಲ್ಲಿ ಧರಣಿ ಮುಂದುವರಿಕೆ

farmers protest shabhu

ಹೊಸದಿಲ್ಲಿ: ರೈತ ಮುಖಂಡರು ಶುಕ್ರವಾರ ತಮ್ಮ ʼದೆಹಲಿ ಚಲೋ’ (Delhi Chalo) ಮೆರವಣಿಗೆಗೆ ಸಂಬಂಧಿಸಿದಂತೆ ಮುಂದಿನ ಕ್ರಮವನ್ನು ಫೆಬ್ರವರಿ 29ರಂದು ನಿರ್ಧರಿಸಲಾಗುವುದು ಎಂದು ಘೋಷಿಸಿದ್ದಾರೆ. ಗಡಿಯಲ್ಲಿ ಧರಣಿ ಪ್ರತಿಭಟನೆ (Farmers protest, Farmers march) ಮುಂದುವರಿಯಲಿದೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ದಿಲ್ಲಿಯತ್ತ ನಡಿಗೆ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಹೇಳಿವೆದೆ. ಮುಂದಿನ ವಾರದಲ್ಲಿ ಇತರ ಚಟುವಟಿಕೆಗಳನ್ನು ಯೋಜಿಸಲಾಗಿದ್ದು, ಅಲ್ಲಿಯವರೆಗೂ ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಎರಡು ಪ್ರತಿಭಟನಾ ಸ್ಥಳಗಳಲ್ಲಿ ತಳವೂರಿ ಪ್ರತಿಭಟನೆ ಮುಂದುವರಿಸಲು ರೈತರು ತೀರ್ಮಾನಿಸಿದ್ದಾರೆ.

ಇಂದು ಕ್ಯಾಂಡಲ್ ಪ್ರತಿಭಟನೆ, ನಾಳೆ ರೈತ ಸಂಬಂಧಿತ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಫೆಬ್ರವರಿ 26ರಂದು, ಪ್ರತಿಭಟನಾಕಾರರು ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ಕೇಂದ್ರದ ಪ್ರತಿಕೃತಿಗಳನ್ನು ದಹಿಸಲು ಉದ್ದೇಶಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವೇದಿಕೆಗಳ ಹಲವಾರು ಸಭೆಗಳನ್ನು ನಂತರದ ಎರಡು ದಿನಗಳಲ್ಲಿ ನಿಗದಿಪಡಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ಪ್ರತಿಭಟನಾ ನಿರತ ರೈತರು ಮಂಡಿಸಿದ ಬೇಡಿಕೆಗಳು ಕೇಂದ್ರದ ಜೊತೆಗಿನ ಚರ್ಚೆಯ ನಂತರವೂ ಬಗೆಹರಿಯದೆ ಉಳಿದಿವೆ.

ಬುಧವಾರ, ಖಾನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರರೊಬ್ಬರು ತಮ್ಮ ಪ್ರಾಣ ಕಳೆದುಕೊಂಡರು. ಒಂದು ಡಜನ್ ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಇದರಿಂದ ರೈತರು ತಮ್ಮ ಮೆರವಣಿಗೆಯನ್ನು ಎರಡು ದಿನಗಳವರೆಗೆ ಮುಂದೂಡಲು ನಿರ್ಧರಿಸಿದರು. ಘರ್ಷಣೆಯಲ್ಲಿ ಭಟಿಂಡಾ ಮೂಲದ ಶುಭಕರನ್ ಸಿಂಗ್ ಎಂಬ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಸಿಂಗ್ ಅವರ ಸಾವಿನ ಬಗ್ಗೆ ಎಫ್‌ಐಆರ್ ದಾಖಲಿಸಿರುವ ರೈತರು, ಪಂಜಾಬ್ ಸರ್ಕಾರದೊಂದಿಗೆ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಶವಸಂಸ್ಕಾರವನ್ನು ಮಾಡುವುದಿಲ್ಲ ಎಂದಿದ್ದಾರೆ.

ಸಿಂಗ್ ಸಾವಿಗೆ ಕಾರಣರಾದ ಹರಿಯಾಣದ ಭದ್ರತಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಪಂಜಾಬ್ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಟೀಕಿಸಿದ್ದಾರೆ. ಸಿಂಗ್ ಅವರಿಗೆ ನ್ಯಾಯ ಮಾತ್ರವಲ್ಲದೆ ʼಹುತಾತ್ಮ’ ಸ್ಥಾನಮಾನವನ್ನೂ ರೈತರು ಆಗ್ರಹಿಸುತ್ತಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ₹1 ಕೋಟಿ ಪರಿಹಾರ ಮತ್ತು ಸಿಂಗ್ ಅವರ ಸಹೋದರಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ. ಆದರೆ ರೈತನ ಸಾವಿಗೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಈ ಕ್ರಮ ವಿಫಲವಾಯಿತು.

ಇದಲ್ಲದೆ, ಖಾನೌರಿ ಗಡಿಯಲ್ಲಿ ಭಟಿಂಡಾದ ಅಮರ್‌ಗಢ ಗ್ರಾಮದ 62 ವರ್ಷದ ದರ್ಶನ್ ಸಿಂಗ್ ಎಂಬ ಇನ್ನೊಬ್ಬ ಪ್ರತಿಭಟನಾನಿರತ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದು ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಮಯದಲ್ಲಿ ಸಂಭವಿಸಿದ ನಾಲ್ಕನೇ ಸಾವು ಆಗಿದೆ.

ಇದನ್ನೂ ಓದಿ: Farmers protest: ʼದಿಲ್ಲಿ ಚಲೋʼದಲ್ಲಿ ಮೃತ ರೈತನ ಕುಟುಂಬಕ್ಕೆ 1 ಕೋಟಿ ಪರಿಹಾರ; ಪ್ರತಿಭಟನೆ ಪುನಾರಂಭ, ಇನ್ನೊಬ್ಬ ರೈತ ಸಾವು

Exit mobile version