ʼʼದೇವರು ತಾನು ಎಲ್ಲ ಕಡೆಯೂ ಇರಲಾಗೋಲ್ಲ ಎಂದು ತಾಯಿಯನ್ನು ಸೃಷ್ಟಿಸಿದʼʼ ಎಂಬುದು ಒಂದು ಜನಪ್ರಿಯ ನಾಣ್ಣುಡಿ. ಹಾಗಾದರೆ ತಂದೆ? ತಂದೆ ನಮ್ಮ ಜೀವನದ ಮೊದಲ ಸ್ನೇಹಿತ ಮತ್ತು ಪರಂಪರೆಗೆ ನಮ್ಮ ಕೊನೆಯ ಕೊಂಡಿ. ತಂದೆ ಕುಟುಂಬದ ಆತ್ಮ. ತಾಳ್ಮೆ, ದಯೆ ಮತ್ತು ಪ್ರೀತಿಯಿಂದ ಕೂಡಿರುವ ತಂದೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಸಿಗಬಹುದಾದ ದೊಡ್ಡ ಆಸ್ತಿ. ಯಾಕೆಂದರೆ ಅವರು ಜೀವನದಲ್ಲಿ ನೀವು ಸದಾ ಕಾಪಾಡುವ ಪ್ರೀತಿ, ಶಿಸ್ತು, ಕರುಣೆ ಮುಂತಾದ ಅಮೂಲ್ಯ ಗುಣಗಳನ್ನು ನಿಮ್ಮಲ್ಲಿ ತುಂಬಿಸಿ ಅವರು ಮರೆಗೆ ಸರಿದುಹೋಗುತ್ತಾರೆ.
ಇಂದು ತಂದೆಯ ದಿನ (Father’s day). ನಾವು ಜಗತ್ತಿಗೆ ಕಣ್ಣುಬಿಟ್ಟಾಗ ಕಾಣುವ ಮೊದಲ ಜೀವ ತಾಯಿಯಾದರೆ, ಆಕೆ ತೋರಿಸುವ ಮೊದಲ ಜೀವ ತಂದೆ. ಇಂಥ ತಂದೆಯ ಪ್ರೀತಿಯನ್ನು ನೆನೆಯುವ, ಹಂಚಿಕೊಳ್ಳುವ ದಿನ ಇಂದು.
ತಂದೆ ಅಂದರೆ ತನ್ನ ಮಕ್ಕಳು ನಿಂತಿರುವ ವೇದಿಕೆಯ ಆಧಾರಸ್ತಂಭ. ಪ್ರಪಂಚದ ನಿಮ್ಮ ಮೇಲಿಡುವ ಭರವಸೆ ಮತ್ತು ಕನಸುಗಳನ್ನು ತಮ್ಮ ಮಕ್ಕಳಲ್ಲಿ ಬೀಜವಾಗಿ ಬಿತ್ತುವ ಧೈರ್ಯ ಮಾಡುವವನು ತಂದೆ. ಪ್ರತಿ ತಂದೆಯೂ ತನ್ನ ಪ್ರೀತಿಯ ಮೌಲ್ಯವನ್ನು ತನ್ನ ಮಗಳು ಲೋಕಕ್ಕೆ ಎತ್ತಿ ತೋರಿಸುತ್ತಾಳೆ ಎಂದುಕೊಂಡು ಬದುಕುತ್ತಾನೆ. ಮಗ ನನ್ನ ಜಾಣ್ಮೆಯನ್ನು ವಿಸ್ತರಿಸುತ್ತಾನೆ ಎಂದು ಭಾವಿಸಿಕೊಂಡು ಬದುಕುತ್ತಾನೆ. ಮಕ್ಕಳು ಮುಂದೆ ಜೀವನದಲ್ಲಿ ಅದನ್ನು ಸಾಧಿಸಿದರೆ ಅಂಥ ಅಪ್ಪಂದಿರು ಅದೃಷ್ಟವಂತರು.
ನಮಗೇ ಗೊತ್ತಿಲ್ಲದೆ ನಾವು ನಮ್ಮ ತಂದೆ ತಾಯಿ ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುತ್ತೇವೆ. ಯಶಸ್ವೀ ವ್ಯಕ್ತಿಯ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂಬುದು ಹಳೇ ಮಾತು. ಯಶಸ್ವೀ ಹೆಣ್ಣಿನ ಹಿಂದೆ ಗಂಡೂ ಇರಬಹುದು. ಆದರೆ ಯಶಸ್ವೀ ವ್ಯಕ್ತಿಗಳ ಹಿಂದೆ ಅವರ ತಂದೆಯರು ಇರುವುದಂತೂ ನಿಜ. ನನ್ನನ್ನು ರೂಪಿಸಿದವರಲ್ಲಿ ನನ್ನ ತಂದೆ ಒಬ್ಬರು- ಎಂದು ಅನೇಕ ದೊಡ್ಡ ವ್ಯಕ್ತಿಗಳು ಹೇಳಿದ್ದಾರೆ. ಅಂಥ ಕೆಲವು ಮಹಾನ್ ವ್ಯಕ್ತಿಗಳು ತಮ್ಮ ತಂದೆಯ ಬಗೆಗೆ ಏನು ಹೇಳುತ್ತಾರೆ ಕೇಳೋಣವೆ?
ಮಾರ್ಕ್ ಝಕರ್ಬರ್ಗ್
ಒಂದೆರಡು ವರ್ಷ ಹಿಂದೆ ಫೇಸ್ಬುಕ್ ಸ್ಥಾಪಕ ಮಾರ್ಕ್ ಝುಕರ್ಬರ್ಗ್ ತಮ್ಮ ಕಂಪನಿ ಸಹೋದ್ಯೋಗಿಗಳಿಗೆ ಮಾಡಿದ ಒಂದು ಪೋಸ್ಟ್ನಲ್ಲಿ, ʼʼನೀವು ನಿಮ್ಮ ಪ್ರಾಜೆಕ್ಟ್ನಲ್ಲಿ ತೀವ್ರವಾಗಿ ಮಗ್ನವಾಗಿದ್ದಾಗ ಊಟ ತಿಂಡಿ ಮರೆತುಬಿಟ್ಟ ಅನುಭವವಿದೆಯೇ? ನಾನಂತೂ ಹೀಗೆ ಸುಮಾರು ತೂಕ ಕಳೆದುಕೊಂಡಿದ್ದೇನೆʼʼ ಎಂದು ಬರೆದುಕೊಂಡಿದ್ದರು. ಇದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಒಂದು ಅವರ ತಂದೆ ಎಡ್ವರ್ಡ್ ಝುಕರ್ಬರ್ಗ್ ಅವರದ್ದು- ʼʼನಾನು ಮತ್ತು ನಿನ್ನಮ್ಮ ನಿನಗೆ ಊಟ ತರಲೇ?ʼʼ ಎಂದು ಕೇಳಿದ್ದರು ಅವರು! ಇದೊಂದು ತಂದೆ- ಮಗನ ನಡುವಿನ ಕ್ಯೂಟ್ ಮೊಮೆಂಟ್. ಎಡ್ವರ್ಡ್ ದಂತವೈದ್ಯರಾಗಿದ್ದರು. ಮಗ ಹಾರ್ವರ್ಡ್ ವಿವಿ ಡ್ರಾಪೌಟ್ ಆದಾಗ ಕಳವಳಗೊಂಡಿದ್ದರು. ಆದರೆ ಮಗನ ಸಾಹಗಳಿಗೆ ಸದಾ ಬೆನ್ನೆಲುಬಾಗಿದ್ದರು. ʼʼಡ್ಯಾಡಿ, ನಾನು ನಿನ್ನ ಹಾಗೇ ಸಪೋರ್ಟಿವ್ ಆಗಿರುವ ಡ್ಯಾಡಿಯಾಗಿರಲು ಬಯಸುತ್ತೇನೆʼʼ ಎಂದು ಮಾರ್ಕ್ ಒಮ್ಮೆ ಬರೆದುಕೊಂಡಿದ್ದರು.
ಬಿಲ್ ಗೇಟ್ಸ್
“ನನ್ನ ತಂದೆ ನನ್ನ ಕೆರಿಯರ್ ಮುನ್ನಡೆಯ ಮೇಲೆ ಆಳವಾದ ಪ್ರಭಾವ ಹೊಂದಿದ್ದರು. ಗೇಟ್ಸ್ ಫೌಂಡೇಶನ್ನಲ್ಲಿ ಅವರು ಅದ್ಭುತವಾದ ಕೆಲಸದ ನೀತಿಯನ್ನು ರೂಪಿಸಿದರು. ಆಗ ಅವರು ಸಿಯಾಟಲ್ನಲ್ಲಿ ಅತ್ಯಂತ ಪರಿಶ್ರಮಿ ಮತ್ತು ಗೌರವಾನ್ವಿತ ವಕೀಲರಲ್ಲಿ ಒಬ್ಬರಾಗಿದ್ದರು. ಈ ದೇಶದ ಹೆಮ್ಮೆಯ ನಾಗರಿಕನಾಗಿದ್ದರು. ನನ್ನ ತಂದೆಯ ಪ್ರಭಾವ ನಮ್ಮ ಎಲ್ಲ ಕ್ರಿಯೆಗಳ ಮೇಲೆ ತುಂಬಾ ಗಾಢವಾಗಿತ್ತು. ಮಹಿಳೆಯರನ್ನು ಗೌರವಿಸುವುದು, ಖಾಸಗಿತನವನ್ನು ಗೌರವಿಸುವುದು, ಮಕ್ಕಳ ಆಯ್ಕೆಗಳನ್ನು ಪ್ರೀತಿ ಮತ್ತು ಗೌರವದಿಂದ ನೋಡಿ ಮಾರ್ಗದರ್ಶನ ಮಾಡುವುದು ನಾನು ನನ್ನ ತಂದೆಯಿಂದ ಕಲಿತದ್ದುʼʼ ಎಂದು ಬಹುಕೋಟಿ ಉದ್ಯಮಿ ಬಿಲ್ ಗೇಟ್ಸ್ ತಮ್ಮ ತಂದೆಗೆ ಬರೆದ ಚರಮಾಂಜಲಿಯಲ್ಲಿ ಬರೆದುಕೊಂಡಿದ್ದಾರೆ. ಅವರ ತಂದೆ ವಿಲಿಯಂ ಗೇಟ್ಸ್ ಪ್ರಭಾವಿ ವಕೀಲರಾಗಿದ್ದುರು. ಬಿಲ್ ತಮ್ಮ ಜೀವನ ರೂಪಿಸಿಕೊಳ್ಳಲು ಅವರು ಮಾಡಿದ ಮಾರ್ಗದರ್ಶನ ದೊಡ್ಡದಾಗಿತ್ತು.
ಇದನ್ನೂ ಓದಿ: ಅತ್ತೆ ಮನೆಗೆ ಹೊರಟು ನಿಂತ ಆ ಕ್ಷಣ ಅಪ್ಪ ಮಗುವಾಗುತ್ತಾನೆ, ಮಗಳು ಅಮ್ಮನಾಗ್ತಾಳೆ!
ಜೆಫ್ ಬೆಜೋಸ್
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಅವರ ತಂದೆ ಮೈಕ್, ಜೆಫ್ ಅವರ ಜೈವಿಕ ತಂದೆಯಲ್ಲ. ಆದರೆ ಜೆಫ್ಗೆ 4 ವರ್ಷವಿದ್ದಾಗ ಕ್ಯೂಬಾದಿಂದ ಬಂದವರು. ನಂತರ ಜೆಫ್ನ ತಾಯಿಯ ಜೊತೆ ಮದುವೆಯಾಗಿ, ಮಗನನ್ನು ಪ್ರೀತಿಯಿಂದ ಬೆಳೆಸಿದರು. ʼʼನನ್ನ ಅಪ್ಪ ಕನಸುಗಾರ ಆಗಿದ್ದರು. ಅವರು ಕ್ಯೂಬಾದಿಂದ ಅಮೆರಿಕಕ್ಕೆ ಬಂದಾಗ ಅವರಿಗೆ 16 ವರ್ಷ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಬದುಕಿಗೆ ಸುಲಭವಾದ ಮಾರ್ಗ ಅವರಿಗೆ ಇರಲಿಲ್ಲ. ಆದರೆ ಅವರು ಪರಿಶ್ರಮ, ದೃಢಸಂಕಲ್ಪ ಹೊಂದಿದ್ದು ಇಲ್ಲಿ ದುಡಿದು ನಮ್ಮನ್ನು ಬೆಳೆಸಿದರುʼʼ ಎಂದು ಜೆಫ್ ಬೆಜೋಸ್ ನೆನೆದುಕೊಂಡಿದ್ದರು.
ಸುಧಾ ಮೂರ್ತಿ
ಸುಧಾ ಮೂರ್ತಿಯವರ ತಂದೆ ಆರ್.ಎಚ್.ಕುಲಕರ್ಣಿ ಅವರು ಹುಬ್ಬಳ್ಳಿಯಲ್ಲಿ ವೈದ್ಯರಾಗಿದ್ದರು. ಅವರ ಮಧ್ಯಮ ವರ್ಗದ ಕುಟುಂಬ ಶಿಕ್ಷಣದತ್ತ ಹೆಚ್ಚಿನ ಒತ್ತಾಸೆ ನೀಡಿತ್ತು. ಇಂಜಿನಿಯರಿಂಗ್ ಮಾಡಬೇಕು ಎಂಬ ಮಗಳ ಆಸೆಗೆ ಪೂರಕವಾಗಿದ್ದರು ತಂದೆ. ಎಪ್ಪತ್ತರ ದಶಕದಲ್ಲಿ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಸುಧಾ ಮೂರ್ತಿ ಕಲಿಯತೊಡಗಿದಾಗ, 150 ಹುಡುಗರ ನಡುವೆ ಇವರು ಏಕೈಕ ವಿದ್ಯಾರ್ಥಿನಿ ಆಗಿದ್ದಳು. ಹುಡುಗರ ಕಾಟ, ಕೀಟಲೆ ಸದಾ ಇದ್ದೇ ಇರುತ್ತಿತ್ತು. ಆದರೆ ನನ್ನ ದೃಢಸಂಕಲ್ಪಕ್ಕೆ ತಂದೆ ಸದಾ ಬೆಂಬಲವಾಗಿ ನಿಂತಿದ್ದರು. ಅದರಿಂದಾಗಿ ನಾನು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸುಧಾ ಮೂರ್ತಿ ನೆನೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ