ಹೊಸದಿಲ್ಲಿ: ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ವಿವಾದಿತ ನೇರ ತೆರಿಗೆ ಪ್ರಕರಣಗಳಿಗೆ (disputed direct tax demand) ಗಣನೀಯ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Seetharaman) ಅವರು ಮಧ್ಯಂತರ ಬಜೆಟ್‌ನಲ್ಲಿ (Budget 2024) ಒದಗಿಸಿದ್ದಾರೆ.
ಸಂಪ್ರದಾಯಕ್ಕೆ ಅನುಗುಣವಾಗಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಸಚಿವರು ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ, ಬಾಕಿ ಉಳಿದಿರುವ ತೆರಿಗೆ ವಿವಾದಗಳಿಗೆ ಪರಿಹಾರವನ್ನು ನೀಡಿದರು. 2010ರವರೆಗೆ 25,000 ರೂ. ಮತ್ತು 2011- 2015ರ ಅವಧಿಯಲ್ಲಿ 10,000 ರೂ. ವರೆಗೆ ನೇರ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೀಡಲಾದ ನೋಟೀಸ್‌ಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್- 2024 (Budget 2024) ಭಾಷಣದಲ್ಲಿ ಹೇಳಿದರು. ಸುಮಾರು 1 ಕೋಟಿ ತೆರಿಗೆ ಗ್ರಾಹಕರು ಈ ವಿನಾಯಿತಿಯ ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ತಿಳಿಸಿದರು.
ಕಳೆದೆರಡು ವರ್ಷಗಳ ಹಿಂದೆ ಈ ವಿವಾದಿತ ತೆರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ʼವಿವಾದ್ ಸೆ ವಿಶ್ವಾಸ್ʼ ಎಂಬ ಉಪಕ್ರಮವನ್ನು ಜಾರಿಗೆ ತಂದಿತ್ತು. ಇದು ರಾಜಿಸಂಧಾನದ ಮೂಲಕ ತೆರಿಗೆ ವಿವಾದಗಳನ್ನು ಪರಿಹರಿಸುವ ಉಪಕ್ರಮ ಆಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 2023ರ ಮಾರ್ಚ್ 31ರವರೆಗೆ ಬಾಕಿ ಉಳಿದಿರುವ ತೆರಿಗೆ ಮೇಲ್ಮನವಿಗಳ ಸಂಖ್ಯೆ 5.16 ಲಕ್ಷಕ್ಕೂ ಅಧಿಕವಾಗಿದೆ.
ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಂಎಸ್‌ಎಂಇಗಳಿಗೆ ಸಮರ್ಪಕವಾಗಿ ಮತ್ತು ಸಮಯೋಚಿತ ಹಣಕಾಸು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಭಾರತೀಯ ಆರ್ಥಿಕತೆ ಕಳೆದ ಒಂದು ದಶಕದಲ್ಲಿ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ. 2014ರಿಂದ ಭಾರತ ದೈತ್ಯ ಸವಾಲುಗಳನ್ನು ಎದುರಿಸಿತ್ತು. ಆದರೆ ಸರ್ಕಾರ ಈ ಅಡೆತಡೆಗಳನ್ನು ನಿವಾರಿಸಿದೆ ಮತ್ತು ರಚನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸಿದೆ. ಜನಪರ ಸುಧಾರಣೆಗಳಿಗೆ ಒತ್ತು ನೀಡಲಾಗಿದೆ. ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆಗಳನ್ನು ಉತ್ತೇಜಿಸಲಾಗಿದೆ. ಅಭಿವೃದ್ಧಿ ಉಪಕ್ರಮಗಳು ಬೃಹತ್ ಪ್ರಮಾಣದಲ್ಲಿ ಜನರನ್ನು ತಲುಪಿವೆ ಎಂದು ನಿರ್ಮಲಾ ನುಡಿದರು.
ಅಂತರ್ಗತ ಅಭಿವೃದ್ಧಿ ಉಪಕ್ರಮಗಳು ವಸತಿ, ನೀರು, ವಿದ್ಯುತ್, ಅಡುಗೆ ಅನಿಲ ಮತ್ತು ಆರ್ಥಿಕ ಸೇರ್ಪಡೆಯಂತಹ ಅಗತ್ಯ ಸೇವೆಗಳೊಂದಿಗೆ ಮನೆಗಳು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿವೆ. 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಒದಗಿಸುವ ಮೂಲಕ ಆಹಾರ ಭದ್ರತೆಗೆ ಸಂಬಂಧಿಸಿದ ಕಳವಳವನ್ನು ನಿವಾರಿಸಲಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ.
ನಮ್ಮ ರಾಷ್ಟ್ರದ ಬೆನ್ನೆಲುಬಾಗಿರುವ ರೈತರಿಗೆ ಬೆಂಬಲವನ್ನು ಖಾತ್ರಿಪಡಿಸುವ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಕಾಲಕಾಲಕ್ಕೆ ಹೆಚ್ಚಿಸಲಾಗಿದೆ. ಮೂಲಭೂತ ಅವಶ್ಯಕತೆಗಳ ಪೂರೈಕೆಯು ಗ್ರಾಮೀಣ ಪ್ರದೇಶಗಳಲ್ಲಿ ನೈಜ ಆದಾಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ. ಸಮಾಜದ ಎಲ್ಲಾ ಜಾತಿಗಳು ಮತ್ತು ಸ್ತರಗಳನ್ನು ಒಳಗೊಳ್ಳುವ ಸಮಗ್ರ, ಅಂತರ್ಗತ ಮತ್ತು ವ್ಯಾಪಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಕಡೆಗೆ ಕೆಲಸ ಮಾಡುವುದು ನಮ್ಮ ಗುರಿ. ನಮ್ಮ ಪ್ರಯತ್ನಗಳು ಸಮಾಜದ ಪ್ರತಿಯೊಂದು ವಿಭಾಗವನ್ನೂ ಒಳಗೊಳ್ಳುವ ಸಮಗ್ರ ಪ್ರಗತಿಯತ್ತ ನಿರ್ದೇಶಿಸಲ್ಪಟ್ಟಿವೆ ಎಂದು ನಿರ್ಮಲಾ ಹೇಳಿದರು.