Site icon Vistara News

ವಿಸ್ತಾರ ಸಂಪಾದಕೀಯ: ಮಹಿಳಾ ಪ್ರೀಮಿಯರ್‌ ಲೀಗ್‌ ಆಟಗಾರ್ತಿಯರಿಗೆ ಧನಬಲ!

WPL

#image_title

ಮಹಿಳಾ ಪ್ರೀಮಿಯರ್‌ ಲೀಗ್‌ನ (ಡಬ್ಲ್ಯುಪಿಎಲ್‌) ಮೊದಲ ಆವೃತ್ತಿಯ ಪಂದ್ಯಾಟಗಳು ಮಾರ್ಚ್‌ 4ರಿಂದ 24ರವರೆಗೆ ಮುಂಬೈಯಲ್ಲಿ ನಡೆಯಲಿವೆ. ಈ ಪಂದ್ಯಾಟದ ಕಾವು ಹೆಚ್ಚಾಗುತ್ತಿದ್ದು, ಇದಕ್ಕೆ ಹಿನ್ನೆಲೆಯಾಗಿ ಮುಂಬೈಯಲ್ಲಿ ಬಿಸಿಸಿಐ ಆಯೋಜಿಸಿದ್ದ ಆಟಗಾರ್ತಿಯರ (WPL 2023) ಹರಾಜು ಪ್ರಕ್ರಿಯೆ ಅದ್ಧೂರಿಯಾಗಿ ನಡೆದಿದೆ. ಮಹತ್ವಾಕಾಂಕ್ಷೆಯ ಮಹಿಳಾ ಐಪಿಎಲ್‌ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಐದು ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಹರಾಜು ಪಟ್ಟಿಯಲ್ಲಿ ಒಟ್ಟಾರೆ 409 ಆಟಗಾರ್ತಿಯರ ಹೆಸರಿದ್ದುದು ಈ ಕ್ಷೇತ್ರದಲ್ಲಿ ಹರಿಯುತ್ತಿರುವ ಪ್ರತಿಭೆಯ ಮಹಾಪೂರಕ್ಕೆ ಒಂದು ನಿದರ್ಶನ. ಇದರಲ್ಲಿ 87 ಆಟಗಾರ್ತಿಯರು ವಿವಿಧ ತಂಡಗಳಲ್ಲಿ ಸ್ಥಾನ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ಹರಾಜಿಗೆ ಕಿಚ್ಚು ಹಚ್ಚಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸ್ಟಾರ್‌ ಓಪನರ್‌ ಸ್ಮೃತಿ ಮಂಧಾನಾ ಅವರನ್ನು ಬರೋಬ್ಬರಿ 3.4 ಕೋಟಿ ರೂ.ಗಳ ಭಾರಿ ಬೆಲೆಯೊಂದಿಗೆ ಖರೀದಿಸಿದೆ. ಅವರು ಆರ್‌ಸಿಬಿ ತಂಡದ ಕ್ಯಾಪ್ಟನ್‌ ಆಗಿ ಕೂಡ ಹೊರಹೊಮ್ಮಿದ್ದಾರೆ. ಆಶ್ಲೇ ಗಾರ್ಡನರ್‌ (3.2 ಕೋಟಿ ರೂ.), ನತಾಲೀ ಸಿವರ್‌ (3.2 ಕೋಟಿ ರೂ.), ದೀಪ್ತಿ ಶರ್ಮಾ (2.6 ಕೋಟಿ ರೂ.), ಜೆಮಿಮಾ ರೋಡ್ರಿಗಸ್‌ (2.2 ಕೋಟಿ ರೂ.) ಮುಂತಾದವರೂ ಗಣನೀಯ ಮೊತ್ತ ಪಡೆದಿದ್ದಾರೆ.

ಡಬ್ಲ್ಯುಪಿಎಲ್‌ ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಒಂದು ದಿಟ್ಟ ಹೆಜ್ಜೆಯೇ ಸರಿ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ದೇಶದಲ್ಲಿ ಮಹಿಳಾ ಕ್ರಿಕೆಟ್‌ ಅಭಿವೃದ್ಧಿಯನ್ನು ಗಂಭೀರವಾಗಿಯೇ ತೆಗೆದುಕೊಂಡಿದೆ ಎಂಬುದಕ್ಕೆ ಇದು ನಿದರ್ಶನ. ಹಲವು ವರ್ಷಗಳಿಂದ ನನೆಗುದಿಯಲ್ಲಿದ್ದ ಡಬ್ಲ್ಯುಪಿಎಲ್‌ ಈ ಬಾರಿ ನನಸಾಗುತ್ತಿದೆ. ಕ್ರಿಕೆಟ್‌ ಎಂಬುದೇ ಒಂದು ಕಾಲದಲ್ಲಿ ಪುರುಷರ, ಅದರಲ್ಲೂ ಶ್ವೇತವರ್ಣೀಯರ ಆಟವಾಗಿತ್ತು. ಅದರಲ್ಲಿ ಬಳಿಕ ಭಾರತೀಯರು ಪಾರಮ್ಯ ಸಾಧಿಸಿದ್ದಾರೆ. ಇಲ್ಲೂ ಅದು ಪುರುಷರ ಆಟವಾಗಿತ್ತು. ನಿಧಾನವಾಗಿ ಮಹಿಳೆಯರು ಅಲ್ಲೂ ತಮ್ಮ ಛಾಪು ತೋರಿಸಿದರು. ನಂತರ ಟಿ-ಟ್ವೆಂಟಿ ಬಂತು. ಸ್ತ್ರೀಯರು ಅಲ್ಲೂ ಸಮಾನತೆ ಸಾಧಿಸಿದರು. ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕೂಡ ಮಹಿಳೆಯರ ಪಾಲಿಗೆ ಬಂದಿದೆ. ಪುರುಷ ಕ್ರಿಕೆಟ್‌ಗೆ ಯಾವುದರಲ್ಲೂ ಮಹಿಳಾ ಕ್ರಿಕೆಟ್‌ ಕಡಿಮೆಯಿಲ್ಲ ಎಂಬುದನ್ನು ಖಚಿತಪಡಿಸಲು ಇದು ಇನ್ನೊಂದು ಸಾಕ್ಷ್ಯ. ಇದರಲ್ಲಿ ಇರುವ ಹಣಕಾಸಿನ ಪ್ರಮಾಣವೂ ಹೀಗಾಗಲು ಒಂದು ಕಾರಣ ಎಂಬುದು ನಿಜವೇ ಆದರೂ, ಎಲ್ಲ ಕ್ರೀಡೆಗಳಂತೆ ಸ್ತ್ರೀಯರೂ ಇಲ್ಲಿ ತಮ್ಮ ಗುರುತು ಮೂಡಿಸುತ್ತಿದ್ದಾರೆ, ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ ಎಂಬುದು ಮುಖ್ಯ.

ಕ್ರೀಡೆ ಒಂದು ರೀತಿಯಲ್ಲಿ ಸಮಾನತೆ ಸಾಧಿಸುವ, ಸಾಮಾಜಿಕ ನ್ಯಾಯ ಮೆರೆಯುವ ಕ್ಷೇತ್ರ. ಇಲ್ಲಿ ದೈಹಿಕ ಚಾಕಚಕ್ಯತೆ, ಕೌಶಲ್ಯ, ಪ್ರತಿಭೆಗಳಿಗೇ ಮಣೆ. ಬೇರೆ ಯಾವ ವಶೀಲಿಬಾಜಿಗಳೂ ಇಲ್ಲಿ ನಡೆಯುವುದಿಲ್ಲ. ಅದಕ್ಕೆ ತಕ್ಕಂತೆ ಅವಕಾಶಗಳೂ ಸೃಷ್ಟಿಯಾಗಬೇಕು. ಹೀಗಾಗಿಯೇ ಕಳೆದ ಒಂದು ದಶಕದಲ್ಲಿ ಇಲ್ಲಿ ಮಿಥಾಲಿ ರಾಜ್‌, ಸ್ಮೃತಿ ಮಂಧಾನಾ ಅವರಂಥ ಅದ್ಭುತ ಪ್ರತಿಭೆಗಳು ಬರಲು ಸಾಧ್ಯವಾಯಿತು. ಇವರ ಆಟವನ್ನು ನೋಡುತ್ತ ನೋಡುತ್ತಾ ಇನ್ನೊಂಷ್ಟು ಆಟಗಾರ್ತಿಯರು ಸೃಷ್ಟಿಯಾದರು, ಆಗುತ್ತಿದ್ದಾರೆ. ಈ ಹಿಂದೆ ಬ್ಯಾಡ್ಮಿಂಟನ್‌ ಮತ್ತು ಟೆನ್ನಿಸ್‌ ಕ್ಷೇತ್ರಗಳೂ ಇದೇ ಮಾದರಿಯಲ್ಲಿ ಭಾರತದಲ್ಲಿ ಮರುಹುಟ್ಟು ಪಡೆದುದನ್ನು ನಾವು ಗಮನಿಸಬಹುದು. ಸಾಕಷ್ಟು ಹಿಂದಿನಿಂದಲೇ ಇಲ್ಲಿ ಮಹಿಳೆಯರು ಆಡುತ್ತಿದ್ದರೂ, ಕೆಲವು ಮಹಾನ್‌ ಪ್ರತಿಭೆಗಳ ಆಗಮನ ಆಗುವವರೆಗೂ ಇದು ಬೇರು ಮಟ್ಟದಲ್ಲಿ ಜನಪ್ರಿಯವಾಗಿರಲಿಲ್ಲ. ಟೆನ್ನಿಸ್‌ ಕ್ಷೇತ್ರದಲ್ಲಿ ಒಬ್ಬ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಮುಂತಾದ ಆಟಗಾರರು ಸೃಷ್ಟಿಸಿದ ಸಂಚಲನ ದೊಡ್ಡದು. ಇವರಿಂದ ಸ್ಫೂರ್ತಿ ಪಡೆದ ಅನೇಕ ಹೊಸ ಆಟಗಾರ್ತಿಯರು ಇಂದು ಒಲಿಂಪಿಕ್ಸ್‌, ಏಷ್ಯಾಡ್‌ ಮುಂತಾದ ಕಡೆ ಭಾಗವಹಿಸಿ ಪದಕಗಳನ್ನು ಗೆಲ್ಲುವುದು ಸಾಧ್ಯವಾಗುತ್ತಿದೆ.

ಸಂಪಾದಕೀಯ : ವಿಸ್ತಾರ ಸಂಪಾದಕೀಯ: ಸರ್ವಸ್ಪರ್ಶಿ ಬಜೆಟ್; ಆದರೆ ಯೋಜನೆ ಜಾರಿಯೇ ಸವಾಲು

ಹಾಗೆಯೇ ಇಂಥ ಪ್ರತಿಭೆಗಳು ತಳಮಟ್ಟದಿಂದ ಮೇಲೆ ಆಗಮಿಸಲು ಅವಕಾಶಗಳ ಸೃಷ್ಟಿಯಾಗುವುದು ಅತಿಮುಖ್ಯ. ಟೆನ್ನಿಸ್‌, ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ದೇಶದಲ್ಲಿ ಸೄಷ್ಟಿಯಾದ ವ್ಯಾಪಕ ಪಂದ್ಯಾಟಗಳು, ಕೋಚಿಂಗ್‌ ನೆಲೆಗಳು ಆಯಾ ಆಟಗಳಲ್ಲಿ ಹೊಸ ಪ್ರತಿಭೆಗಳು ಆಗಮಿಸಲು, ಪಾರಮ್ಯ ಸಾಧಿಸಲು ಸಾಧ್ಯ ಮಾಡಿದವು. ಹಾಗೆಯೇ ಟಿ- ಟ್ವೆಂಟಿ ಪಂದ್ಯಾಟಗಳಲ್ಲಿ ಇನ್ನಷ್ಟು ಸಾಧಕಿಯರು ಹುಟ್ಟಿಕೊಳ್ಳಲು, ತಮ್ಮ ಪರಾಕ್ರಮ ಮೆರೆಯಲು ಡಬ್ಲ್ಯುಪಿಎಲ್‌ ಕಾರಣವಾಗಬಹುದು. ಹಾಗೆಯೇ ಇದು ಹೊಸದೊಂದು ಉದ್ಯಮದ ಸೃಷ್ಟಿಗೂ ಮೂಲ. ಮಹಿಳಾ ಕ್ರಿಕೆಟರ್‌ಗಳ ಸ್ವಾಭಿಮಾನ- ಸಮಾನತೆ ಆಶಯಕ್ಕೂ ಉತ್ತೇಜನ. ಹೀಗಾಗಿ ಇಂಥ ಉಪಕ್ರಮಗಳನ್ನು ಸ್ವಾಗತಿಸೋಣ.

Exit mobile version