Site icon Vistara News

ವಿಸ್ತಾರ ಸಂಪಾದಕೀಯ: ರೈಲು ದುರಂತದ ನಿಖರ ಕಾರಣ ಪತ್ತೆ ಮಾಡಿ; ಸುರಕ್ಷತೆ ಇನ್ನಷ್ಟು ಹೆಚ್ಚಾಗಲಿ

Train Accident

#image_title

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 288 ಪ್ರಯಾಣಿಕರು ಮೃತಪಟ್ಟು, 1000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ತ್ವರಿತವಾಗಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ರೈಲು ಅಪಘಾತ ಕುರಿತು ಈಗಾಗಲೇ ತನಿಖೆ ಆರಂಭಿಸಲಾಗಿದೆ. ವರದಿಯ ಬಳಿಕವಷ್ಟೇ, ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಲಿದೆ. ಹಾಗಿದ್ದೂ, ಮೇಲ್ನೋಟಕ್ಕೆ ಶಾಲಿಮರ್ ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದೇ ದುರಂತಕ್ಕೆ ಕಾರಣವಾಗಿದೆ. ಈ ಒಡಿಶಾ ರೈಲು ಅಪಘಾತವು ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ಅತ್ಯಂತ ಭೀಕರ ಅಪಘಾತ ಎಂದು ದಾಖಲಾಗಿದೆ. ಯಾಕೆಂದರೆ, ಕಳೆದ ಒಂದು ದಶಕದಿಂದ ಭಾರತದಲ್ಲಿ ದೊಡ್ಡ ಪ್ರಮಾಣದ ರೈಲು ದುರಂತಗಳೇ ನಡೆದಿಲ್ಲ. ಸಣ್ಣ ಪುಟ್ಟ ಹಳಿ ತಪ್ಪುವ ಘಟನೆಗಳನ್ನು ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಉಂಟಾಗಿಲ್ಲ. 2012ರಲ್ಲಿ ನಡೆದ ಹಂಪಿ ಎಕ್ಸ್​ಪ್ರೆಸ್​ ದುರ್ಘಟನೆಯೇ ಇತ್ತೀಚಿನ ಅತ್ಯಂದ ದೊಡ್ಡ ದುರಂತ ಎನಿಸಿಕೊಂಡಿತ್ತು. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ರೈಲ್ವೆ ಸುರಕ್ಷತೆ ಮತ್ತು ಸೇವೆಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆಯಾಗಿದೆ. ಇದರಿಂದ ರೈಲು ಅವಘಡಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಕೇಂದ್ರ ರೈಲ್ವೆ ಸಚಿವಾಲಯ ಈ ಸುಧಾರಣೆಗಳ ಬಗ್ಗೆ ಆಗಾಗ್ಗೆ ಮಾಹಿತಿ ನೀಡುತ್ತಿದೆ. ಅಲ್ಲದೆ, ಅಪಘಾತದ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂಬುದಾಗಿ ಬೆನ್ನುತಟ್ಟಿಕೊಂಡಿತ್ತು. ‘ಕವಚ್​​’ ಹೆಸರಿನ ಹೊಸ ಯೋಜನೆ ಮೂಲಕ ಅವಘಡಗಳ ಸಂಖ್ಯೆಯನ್ನು ಸಂಪೂರ್ಣ ಕಡಿಮೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಹೇಳುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ರೈಲು ಅಪಘಾತಗಳ ಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ. 2016-17ರಲ್ಲಿ 104 ರೈಲು ಅಪಘಾತಗಳು ಸಂಭವಿಸಿದ್ದರೆ, 2020-21ರಲ್ಲಿ ಈ ಸಂಖ್ಯೆ 22ಕ್ಕೆ ಇಳಿದಿದೆ. 2019-20 ರಿಂದ 2020-21 ರವರೆಗೆ ಸತತ ಎರಡು ವರ್ಷಗಳವರೆಗೆ, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಇಷ್ಟೆಲ್ಲ ಅತ್ಯಾಧುನಿಕ ಸುರಕ್ಷತಾ ಕ್ರಮಗಳ ಹೊರತಾಗಿಯೂ ಈ ಭೀಕರ ರೈಲು ಅಪಘಾತ ಸಂಭವಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ತಂತ್ರಜ್ಞಾನ ವೈಫಲ್ಯವೋ, ಮಾನವ ಪ್ರಮಾದವೋ ಎಂಬುದನ್ನು ಪತ್ತೆ ಹಚ್ಚಬೇಕಿದೆ.

ರೈಲ್ವೆ ಸುರಕ್ಷತೆಯ ವಿಷಯದಲ್ಲಿ ಭಾರತವು ಸಾಕಷ್ಟು ಗಾವುದ ಮುಂದೆ ಸಾಗಿದೆ. ಅವಧಿ ಮೀರಿದ ಪರಿಕರಗಳನ್ನು ಸಮಯೋಚಿತವಾಗಿ ಬದಲಾಯಿಸುವುದು, ಟ್ರ್ಯಾಕ್​​ನ ಉನ್ನತೀಕರಣ ಮತ್ತು ನಿರ್ವಹಣೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಇಂಟರ್‌ಲಾಕಿಂಗ್ ವ್ಯವಸ್ಥೆಗಳು, ಸುರಕ್ಷತಾ ಅಭಿಯಾನಗಳು, ಅಧಿಕಾರಿಗಳ ತರಬೇತಿಗೆ ಹೆಚ್ಚಿನ ಒತ್ತು ಮತ್ತು ಸುರಕ್ಷಿತ ಅಭ್ಯಾಸಗಳ ಪಾಲನೆಗಾಗಿ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಂಪೂರ್ಣ ಟ್ರ್ಯಾಕ್ ಸರ್ಕ್ಯೂಟಿಂಗ್, ಬ್ಲಾಕ್ ಪ್ರೂವಿಂಗ್ ಆಕ್ಸಲ್ ಕೌಂಟರ್ಸ್ (ಬಿಪಿಎಸಿ), ಆಕ್ಸಿಲರಿ ವಾರ್ನಿಂಗ್ ಸಿಸ್ಟಮ್ (ಎಡಬ್ಲ್ಯುಎಸ್), ಕಲರ್ ಲೈಟ್ ಎಲ್ಇಡಿ ಸಿಗ್ನಲ್​​ಗಳು, ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ (ವಿಸಿಡಿ), 60 ಕೆ.ಜಿ ಹಳಿಗಳು ಮತ್ತು ಪೂರ್ವ ಒತ್ತಡದ ಕಾಂಕ್ರೀಟ್ ಸ್ಲೀಪರ್​ಗಳ ಬಳಕೆ, ಉತ್ತಮ ವೆಲ್ಡಿಂಗ್ ತಂತ್ರಜ್ಞಾನ ಮತ್ತು ಲಿಂಕ್ ಹಾಫ್ಮನ್ ಬುಶ್ (ಎಲ್ಎಚ್​​ಬಿ) ರೈಲು ಸಂಚಾರದ ವೇಗ ವೃದ್ಧಿಗೆ ಸಹಾಯ ಮಾಡುವ ಜತೆಗೆ ಅಪಘಾತ ನಡೆಯದಂತೆ ನೋಡಿಕೊಳ್ಳುತ್ತವೆ. ಜತೆಗೆ 5ಜಿಯಂತಹ ಸಂವಹನ ಸಾಧನಗಳನ್ನೂ ಸಮಪರ್ಕವಾಗಿ ರೈಲ್ವೆ ಇಲಾಖೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ರೈಲು ಸುರಕ್ಷತೆಗೆ ಒತ್ತು ನೀಡುತ್ತಿರುವುದು ಜಗಜ್ಜಾಹೀರವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜ್ಯ ಸರ್ಕಾರ ಆರ್ಥಿಕ ಶಿಸ್ತಿನೊಂದಿಗೆ ಗ್ಯಾರಂಟಿಗಳನ್ನು ಜಾರಿ ಮಾಡಲಿ

ಈಗ ಸಂಭವಿಸಿರುವ ಅವಘಡವನ್ನು ಕೇಂದ್ರ ಸರ್ಕಾರವು ಇದೊಂದು ಪಾಠವೆಂದು ಎಂದು ಭಾವಿಸಿ, ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ, ಸರಿಪಡಿಸುವ ಕೆಲಸ ಮಾಡಬೇಕು. ಮತ್ತೆ ಆ ತಪ್ಪು ಮರುಕಳಿಸಿದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಮಾನವ ಪ್ರಮಾದವೇ ಆಗಿದ್ದು ಕಂಡಬಂದರೆ, ಅದು ಅಜ್ಞಾನದಿಂದ ಆಗಿದ್ದೇ, ಉದ್ದೇಶಪೂರ್ವಕವಾಗಿ ಮಾಡಿದ್ದೇ ಎಂಬುದನ್ನು ತನಿಖೆ ಮಾಡಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು. ಒಡಿಶಾ ರೈಲು ದುರಂತವು, ಸುರಕ್ಷತೆಯ ವಿಷಯದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗುವ ಸಂದೇಶವನ್ನು ನೀಡಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.

Exit mobile version