ನವದೆಹಲಿ: ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುವ ಪ್ರತಿ ಪಕ್ಷದ ನಾಯಕರು ತಮ್ಮ ಪತ್ನಿಯರು ಮನೆಯಲ್ಲಿ ಪೆಟ್ಟಿಗೆಯಲ್ಲಿರುವ ಮೇಡ್ ಇನ್ ಇಂಡಿಯಾ ಸೀರೆಗಳನ್ನು (Made in India Saree) ಮೊದಲು ಸುಟ್ಟು ಹಾಕಬೇಕು ಎಂದು ‘ಇಂಡಿಯಾ ಔಟ್’ (India-Out) ಅಭಿಯಾನ ನಡೆಸುತ್ತಿರುವ ವಿರೋಧ ಪಕ್ಷಗಳ ನಾಯಕರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಟಾಂಗ್ ಕೊಟ್ಟಿದ್ದಾರೆ. ಭಾರತ ವಿರೋಧಿ ಅಭಿಯಾನ ನಡೆಸುತ್ತಿರುವ ಅವರ ಕ್ರಮವನ್ನು ಖಂಡಿಸಿದ್ದಾರೆ.
'First Burn Your Wives' Indian Sarees, Then Boycott…': #Bangladesh PM Stands Up For #India . #unitedstates #pakistan #china wanted to kill people of #bangladesh in 1971 they should remember it was #india #russia who saved them who gave them arms https://t.co/W60hL0ieTI
— naashonomics (@naashonomics) March 31, 2024
ತಾವು ಅಧ್ಯಕ್ಷರಾಗಿರುವ ಆಡಳಿತಾರೂಢ ಅವಾಮಿ ಲೀಗ್ನ (Awami League) ಸಭೆಯನ್ನುದ್ದೇಶಿಸಿ ಮಾತನಾಡಿದ ಹಸೀನಾ, ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ನಾಯಕರನ್ನು ತರಾಟೆಗೆ ತೆಗೆದುಕೊಂಡರು. “ನನ್ನ ಪ್ರಶ್ನೆಯೆಂದರೆ, ನಿಮ್ಮ ಹೆಂಡತಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿಲ್ಲ? ಮೊದಲು ನಿಮ್ಮ ನಿಮ್ಮ ಹೆಂಡತಿಯರಿಂದ ಸೀರೆಗಳನ್ನು ತೆಗೆದುಕೊಂಡು ಅದನ್ನು ಸುಟ್ಟು ಹಾಕಿ. ಬಳಿಕ ಉಳಿದ ಅಭಿಯಾನ ನಡೆಸಿ ಎಂದು ಹಸಿನಾ ಸವಾಲೆಸೆದರು.
ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಅಧಿಕಾರ ಪಡೆದ ಬಾಂಗ್ಲಾದೇಶದ ಪ್ರಧಾನಿ ಹಸೀನಾ, ಇಂಡಿಯಾ ಔಟ್ ಅಭಿಯಾನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎನ್ಪಿ ಅಧಿಕಾರದಲ್ಲಿದ್ದಾಗ, ಸಚಿವರು ಮತ್ತು ಅವರ ಪತ್ನಿಯರು ಭಾರತ ಪ್ರವಾಸ ಮಾಡುತ್ತಿದ್ದರು ಈ ವೇಳೆ ಅಲ್ಲಿ ಸೀರೆಗಳನ್ನು ಖರೀದಿಸಿ ಬಾಂಗ್ಲಾದೇಶದಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಇನ್ನು ಕೆಲವರು ಸೀರೆಗಳನ್ನು ಕೂಡಿಟ್ಟಿದ್ದಾರೆ. ಇದೀಗ ಎಲ್ಲರೂ ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಭಾರತದ ಈರುಳ್ಳಿ, ಬೆಳ್ಳುಳ್ಳಿ ತರಬೇಡಿ!
ವಿರೋಧ ಪಕ್ಷಗಳ ನಾಯಕರನ್ನು ಇನ್ನಷ್ಟು ಟೀಕಿಸಿ ಶೇಖ್ ಹಸೀನಾ; ಬಾಂಗ್ಲಾದೇಶ ಭಾರತೀಯ ಮಸಾಲೆಗಳಿಗೆ ಅವಲಂಬಿತವಾಗಿರುವ ಸಂಗತಿಯನ್ನೂ ಬಹಿರಂಗಪಡಿಸಿದರು. ಭಾರತವನ್ನು ವಿರೋಧ ಮಾಡುವ ನಾಯಕರು ಭಾರತದಿಂದ ಬರುವ ಗರಂ ಮಸಾಲಾ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿದಂತೆ ಮಸಾಲೆ ಪದಾರ್ಥಗಳನ್ನು ತಮ್ಮ ಮನೆಗೆ ತರಬಾರದು. ಅವರ ಮನೆಯ ಅಡುಗೆ ಮನೆಯಲ್ಲಿ ಇವುಗಳಿಗೆ ಸ್ಥಾನ ಕೊಡಬಾರದು ಎಂದು ಕರೆ ಕೊಟ್ಟರು.
ಬಾಂಗ್ಲಾದಲ್ಲಿ ಭಾರತದ ಉತ್ಪನ್ನಗಳಿಗೆ ವಿರೋಧ
ಭಾರತೀಯ ಉತ್ಪನ್ನಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಎನ್ ಪಿ ನಾಯಕ ರುಹುಲ್ ಕಬೀರ್ ರಿಜ್ವಿ ತಮ್ಮ ಕಾಶ್ಮೀರಿ ಶಾಲನ್ನು ರಸ್ತೆಗೆ ಎಸೆದ ಬಳಿಕ ಪ್ರಧಾನಿ ಈ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: Call Forwarding Service : ನಾಳೆಯಿಂದ ಯುಎಸ್ಎಸ್ಡಿ ಆಧಾರಿತ ಕಾಲ್ ಫಾರ್ವರ್ಡಿಂಗ್ ಸೇವೆ ಬಂದ್
ಬಾಂಗ್ಲಾದೇಶದಲ್ಲಿ ‘ಇಂಡಿಯಾ-ಔಟ್’ ಅಭಿಯಾನದ ಹಿನ್ನೆಲೆಯಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಕೆಲವು ಕಾರ್ಯಕರ್ತರು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ಗಳು ಈ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿಭಟನೆಯ ಅಂಗವಾಗಿ ಆಡಳಿತಾರೂಢ ಅವಾಮಿ ಲೀಗ್ ಮೇಲೆಯೂ ಮಾತಿನ ದಾಳಿ ನಡೆಸಲಾಗುತ್ತಿದೆ .
ತನ್ನ ಹಿತಾಸಕ್ತಿಗಳಿಗೆ ಸರಿಹೊಂದುವುದರಿಂದ ಶೇಖ್ ಹಸೀನಾ ಅವರು ಅಧಿಕಾರದಲ್ಲಿ ಮುಂದುವರಿಯುವುದನ್ನು ಭಾರತ ಬಯಸುತ್ತಿದೆ ಎಂದು ಅಭಿಯಾನದಲ್ಲಿ ಭಾಗಿಯಾಗಿರುವವರು ಹೇಳಿಕೆ ನೀಡಿದ್ದಾರೆ.
ರಿಜ್ವಿ ಅವರಂತಹ ಕೆಲವು ಬಿಎನ್ ಪಿ ನಾಯಕರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ, ಪಕ್ಷವು ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಬಹಿಷ್ಕಾರದ ಕರೆ ಕುರಿತು ಪಕ್ಷದ ನಿಲುವಿನ ಬಗ್ಗೆ ಕೆಲವು ನಾಯಕರಿಗೆ ಸ್ಪಷ್ಟತೆ ಇಲ್ಲ. ಇಲ್ಲಿಯವರೆಗೆ ನಮ್ಮ ಪಕ್ಷವು ಈ ಬಗ್ಗೆ ಯಾವುದೇ ಅಧಿಕೃತ ನಿಲುವನ್ನು ಹೊಂದಿಲ್ಲ. ಆದರೆ ಇದು ಜನರ ಕರೆ ಮತ್ತು ನಮ್ಮ ಕೆಲವು ನಾಯಕರು ಇದನ್ನು ಬೆಂಬಲಿಸುತ್ತಿದ್ದಾರೆ” ಎಂದು ಬಿಎನ್ಪಿಯ ಮಾಧ್ಯಮ ಘಟಕದ ಸದಸ್ಯ ಸೈರುಲ್ ಕಬೀರ್ ಖಾನ್ ಹೇಳಿದ್ದಾರೆ.