Site icon Vistara News

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

lok sabha election

ಬೆಂಗಳೂರು: ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ (Lok Sabha Election) ಶುಕ್ರವಾರ ಸಂಜೆ (ಏಪ್ರಿಲ್​ 26) 6 ಗಂಟೆಗೆ ಮುಕ್ತಾಯಗೊಂಡಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿತು. ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ಸಂಜೆ ಐದು ಗಂಟೆಯ ವೇಳೆಗೆ ಶೇ 63.90 ಮತದಾನ ದಾಖಲಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆಗೊಂಡಿದೆ. ಹೀಗಾಗಿ 6 ಗಂಟೆಗೆ ಇನ್ನಷ್ಟು ಮತದಾನವಾಗಿದ್ದು ಪ್ರಮಾಣ ಹೆಚ್ಚಾಗಲಿದೆ. ಮತದಾನ ಮುಕ್ತಾಯಗೊಂಡ ಬಳಿಕ ಒಟ್ಟು ಎಷ್ಟು ಪ್ರಮಾಣದಲ್ಲಿ ಮತ ಚಲಾವಣೆಗೊಂಡಿತು ಎಂಬುದರ ಅಂಕಿ ಅಂಶಗಳನ್ನು ಚುನಾವಣಾ ಅಧಿಕಾರಿಗಳು ಇನ್ನೊಂದಿಷ್ಟು ಹೊತ್ತಿನ ಬಳಿಕ ಬಿಡುಗಡೆ ಮಾಡಲಿದ್ದಾರೆ.

ಇವಿಎಂಗಳಿಗೆ ಸೀಲ್​

ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್​ ಮುಚ್ಚಿದ್ದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಲಿದೆ.

ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂಜಾನೆಯಿಂದಲೇ ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೇಸಿಗೆ ಬಿಸಿಲು ಹೆಚ್ಚಿರಬಹುದು ಎಂಬ ಕಾರಣಕ್ಕೆ ಮುಂಜಾನೆ ಅವಧಿಯಲ್ಲಿ ಮತಗಟ್ಟೆಗಳ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು. ಕೆಲವೊಂದು ಜನನಿಬಿಡ ಮತಗಟ್ಟೆಗಳಲ್ಲಿ 2 ಗಂಟೆಗಳಷ್ಟು ಕಾಲ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

ಇದನ್ನೂ ಓದಿ: Tejasvi Surya: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್‌

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ಸಂಜೆ 5 ಗಂಟೆವರೆಗೆ ಶೇ 63.90 ಮತದಾನ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್ ದಾಖಲಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಶೇ. 74.87, ಉಡುಪಿ-ಚಿಕ್ಕಮಗಳೂರು 72.13, ಹಾಸನ 72.13, ದಕ್ಷಿಣ ಕನ್ನಡ 71.83 ಬೆಂಗಳೂರು ಸೆಂಟ್ರಲ್‌ 48.61 ಮತದಾನವಾಗಿದೆ. ಇನ್ನು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಕೊನೆಯ ಕ್ಷಣದಲ್ಲಿ ಹಲವು ಕಡೆ ಮತದಾರರು ಓಡೋಡಿ ಬಂದಿದ್ದು ಕಡುಬಂದಿದೆ. ಆದರೆ, ಸಮಯ ಮುಗಿದ ಹಿನ್ನೆಲೆ ಮತದಾನಕ್ಕೆ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ. ಕೆಲವರು ಇನ್ನೂ ಸಮಯವಿತ್ತು ಆದರೂ ತಮ್ಮನ್ನು ಬಿಟ್ಟಿಲ್ಲ ಎಂದು ಆರೋಪಿಸಿರುವುದು ಕಂಡುಬಂದಿದೆ.

ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿತ್ತು. ದಕ್ಷಿಣ ಕನ್ನಡ – 58.76, ಉಡುಪಿ – 57.49, ಮಂಡ್ಯ – 57.44, ತುಮಕೂರು -56.62, ಹಾಸನ – 55.90 ಮತದಾನ ಆಗಿದ್ದು, ಈ ಕ್ಷೇತ್ರದಲ್ಲಿ ಶರವೇಗದಲ್ಲಿ ಮತದಾನ ಮಾಡಿದ್ದರು.

ಕೆಲವೆಡೆ ಬಹಿಷ್ಕಾರ

ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದ ಕಾರಣ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಅವರಿಗೆ ಎದುರಾಯಿತು.

ಸೆಲೆಬ್ರಿಟಿಗಳಿಂದ ಮತದಾನ

ಸಿನಿಮಾ, ಉದ್ಯಮ, ಐಟಿ ಸೇರಿದಂತೆ ನಾನಾ ಕ್ಷೇತ್ರಗಳ ಸೆಲೆಬ್ರಿಟಿಗಳು ಕರ್ನಾಟಕದ ನಾನಾ ಮತ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದಾರೆ. ಬಹುತೇಕ ಮಂದಿ ಬೆಂಗಳೂರಿನಲ್ಲಿಯೇ ನೆಲೆಸಿರುವ ಕಾರಣ ಹೆಚ್ಚಿನವರು ನಗರದ ಸುತ್ತಲಿನ ಮತಗಟ್ಟೆಗಳಲ್ಲಿ ಕಾಣಿಸಿಕೊಂಡರು. ಅವರೆಲ್ಲರೂ ಮತದಾನ ಮಾಡುವಂತೆ ಕೋರಿಕೊಂಡರು. ತಮ್ಮ ಹಕ್ಕನ್ನು ಚಲಾಯಿಸಲು ಇರುವ ಅದ್ಬುತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.

Exit mobile version