ಬೆಂಗಳೂರು: 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶಗಳು (PUC Results 2024) ಇಂದು (ಮಾರ್ಚ್ 30) ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯ (KSEAB) ವೆಬ್‌ಸೈಟ್ karresults.nic.inನಲ್ಲಿ ಫಲಿತಾಂಶಗಳು ಇಂದು ಬೆಳಿಗ್ಗೆ 9ರಿಂದ 11ರೊಳಗೆ ಪ್ರಕಟವಾಗಲಿವೆ.
ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ರೋಲ್ ನಂಬರ್ ಆಧರಿಸಿ ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಈ ಬಾರಿಯ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಫೆಬ್ರವರಿ 12ರಿಂದ 27ರವರೆಗೆ ನಡೆಸಿತ್ತು. ಕರ್ನಾಟಕದಲ್ಲಿ ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು.
ಈ ಪರೀಕ್ಷೆಗಳ ಮೌಲ್ಯಮಾಪನ ಇದೀಗ ಮುಗಿದಿದ್ದು, ಫಲಿತಾಂಶವನ್ನು ಈ ಬಾರಿ ಬೇಗನೇ ಪ್ರಕಟಿಸಲು ಮಂಡಳಿ ಮುಂದಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಫಲಿತಾಂಶಗಳು ಲಭ್ಯವಾಗಲಿವೆ. ಮಾರ್ಚ್ 30ರಂದು ಮೊಬೈಲ್ ಮೂಲಕ ಮನೆಯಲ್ಲಿಯೇ ಕುಳಿತು ಅಥವಾ ಇಂಟರ್ನೆಟ್ ಸೆಂಟರ್‌ಗಳಲ್ಲಿ ವೀಕ್ಷಿಸಲು ಅವಕಾಶವಿದೆ. ಅದೇ ದಿನ ಕಾಲೇಜುಗಳಲ್ಲಿಯೂ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.
ಪ್ರತಿ ವರ್ಷ ಪ್ರಥಮ ಪಿಯುಸಿಯ ವಾರ್ಷಿಕ/ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಕ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಆಯೋಜಿಸುತ್ತಾ ಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಬಹುತೇಕ ವಿಷಯಗಳ ಪರೀಕ್ಷೆಗಳು ನಡೆದಿವೆ. ಕೆಲವು ಪರೀಕ್ಷೆಗಳು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 12.30ರವರೆಗೆ ನಡೆದಿವೆ.
ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಪರೀಕ್ಷೆಯನ್ನು ಬರೆಯಲಾಗದವರಿಗೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಇದರ ವೇಳಾಪಟ್ಟಿಯನ್ನು
ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಶುಲ್ಕ ತುಂಬಲು ಏಪ್ರಿಲ್ 20ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಆಯಾ ಜಿಲ್ಲಾ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸಪ್ಲಿಮೆಂಟರಿ ಪರೀಕ್ಷೆ ವಿವರ ಪ್ರಕಟಿಸುವಂತೆ ಸೂಚಿಸಲಾಗಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ತುಂಬಿ ಪರೀಕ್ಷೆ ಎದುರಿಸಲು ಬೇಕಾದ ಸಹಕಾರ ನೀಡುವಂತೆಯೂ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ : Bengaluru News: ಸಿಎಸ್‌ಆರ್ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ