ತೂಕ ಇಳಿಸುವ ಪಯಣದಲ್ಲಿ ಬಹಳ ಸಾರಿ ಭ್ರಮನಿರಸನಕ್ಕೀಡಾಗುವುದೇ ಹೆಚ್ಚು. ಟಿವಿಯಲ್ಲಿ, ಸಿನಿಮಾದಲ್ಲಿ, ಬಳುಕವ ಬಳ್ಳಿಯಂತೆ ಫಿಟ್ ಆಗಿರುವ ನಟ ನಟಿಯರನ್ನು ನೋಡುತ್ತಲೇ, ನಮಗ್ಯಾಕೆ ಹಾಗೆ ಸಾಧ್ಯವಾಗುವುದಿಲ್ಲ ಅನಿಸುವುದು ಸಹಜ. ಆದರೆ, ಥಳುಕು ಬಳುಕಿನ ಆ ಜಗತ್ತಿನ ಹಿಂದೆಯೂ ಶ್ರಮದ ದಿನಗಳಿವೆ. ಅನೇಕರು, ನಮ್ಮ ನಿಮ್ಮಂತೆ ತೂಕಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದ್ದವರು ಸವಾಲಾಗಿ ತೆಗೆದುಕೊಂಡು ಬದಲಾದ ಮನುಷ್ಯರಾಗಿ ಶಿಸ್ತಿನ ಹಾದಿಯಲ್ಲಿ ನಡೆದಿದ್ದಾರೆ. ಅಂಥ ಕೆಲವು ಉದಾಹರಣೆಗಳ ಸ್ಪೂರ್ತಿ ಕತೆಗಳು ಇಲ್ಲಿವೆ.
೧. ಸಾರಾ ಅಲಿ ಖಾನ್: ಸೈಫ್ ಅಲಿ ಖಾನ್ ಪುತ್ರಿ ಸಾರಾ, ಇತ್ತೀಚೆಗೆ ಬಾಲಿವುಡ್‌ಗೆ ಬಂದ ಹೊಸಬರ ಪೈಕಿ ಮಿಂಚುತ್ತಿರುವ ಪ್ರತಿಭೆ. ತನ್ನ ಹಾಸ್ಯಪ್ರಜ್ಞೆ, ಸದಾ ಹಸನ್ಮುಖಿಯಾಗಿರುವ ಹಾಗೂ ಬೇಕಾಬಿಟ್ಟಿ ಪ್ರಶ್ನೆಗಳಿಗೆ ಚುರುಕಾಗಿ ಉತ್ತರಿಸುವ ಸಾಮರ್ಥ್ಯಕ್ಕೆ ಯಾವಾಗಲೂ ಹೊಗಳಿಕೆಗೆ ಪಾಥ್ರವಾಗುವ ಸಾರಾ ಕೂಡಾ ಒಂದು ಕಾಲದಲ್ಲಿ ಬಹಳ ತೂಕ ಹೊಂದಿದವರೇ ಆಗಿದ್ದರು. ಸಿನಿಮಾ ಜರ್ನಿ ಶುರು ಮಾಡಲಿಕ್ಕಾಗಿ ಸುಮಾರು ೩೦ ಕಿಲೋ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಿ ಸದ್ಯ ಚಾಲ್ತಿಯಲ್ಲಿರುವ ಹೊಸ ಮುಖಗಳ ಪೈಕಿ ಮುಂಚೂಣಿಯವರು.
೨. ಸೋನಂ ಕಪೂರ್: ಸೋನಂ ಕಪೂರ್ ಎಂದರೆ ಬಾಲಿವುಡ್‌ನ ಫ್ಯಾಷನ್ ಐಕಾನ್! ಅಭಿನಯಕ್ಕಿಂತಲೂ ಆಕೆಯ ಫ್ಯಾಷನ್ ಸದಾ ಸುದ್ದಿಯಲ್ಲಿರುತ್ತದೆ. ಇಂಥ ಸೋನಂ ಕಪೂರ್ ಒಂದು ಕಾಲದಲ್ಲಿ ತನ್ನ ಮೊದಲ ಸಿನಿಮಾ ಸಹಿ ಮಾಡುವುದಕ್ಕೂ ಮೊದಲು ೮೬ ಕೆಜಿ ತೂಕ ಹೊಂದಿದ್ದರಂತೆ. ನಂತರ ೩೦ ಕೆಜಿ ತೂಕ ಇಳಿಸಿಕೊಂಡು ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಾಕೆ. ಅತಿಯಾದ ಜಂಕ್ ತಿಂದು ದೇಹ ಬೆಳೆಸಿಕೊಂಡಿದ್ದ ಈಕೆ ಆರೋಗ್ಯಕರ ಆಹಾರದತ್ತ ಮುಖ ಮಾಡಿ, ಇಂದಿಗೂ ತನ್ನ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ.
೩. ಸೋನಾಕ್ಷಿ ಸಿನ್ಹಾ: ದಬಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ ೯೦ ಕೆಜಿಗೂ ಹೆಚ್ಚು ತೂಕ ಹೊಂದಿದ್ದರಂತೆ. ದಬಾಂಗ್ ಸಿನಿಮಾ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಲು ಆಕೆ ಇಳಿಸಿದ ತೂಕ ೩೦ ಕೆಜಿ. ವಿಶೇಷವೆಂದರೆ, ಈ ಸಿನಿಮಾ ನಂತರವೂ ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ಈಕೆ ನಟಿಸಿದರೂ ಸೈಜ್ ಝೀರೋ ಅಥವಾ ತುಂಬ ತೆಳ್ಳಗಾಗುವ ಪ್ರಯತ್ನವನ್ನೆಲ್ಲ ಈಕೆ ಮಾಡಲಿಲ್ಲ. ಸಹಜವಾಗಿಯೇ, ಇರಲು ಬಯಸುವ ಈಕೆ ಬಾಲಿವುಡ್ ಸದಾ ಬಯಸುವ ಬಳುಕುವ ಬಳ್ಳಿಯಂತಾಗಲು ಹೊರಡಲಿಲ್ಲ ಎಂಬುದೇ ಈಕೆಯ ವಿಶೇಷ.
ಇದನ್ನೂ ಓದಿ | Bollywood Stars Fashion | ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ತಾರೆಯರ ಹೈ ಫ್ಯಾಷನ್
೪. ಭೂಮಿ ಫಡ್ನೇಕರ್: ಭೂಮಿಯ ಕತೆ ಎಲ್ಲರಂತಲ್ಲ. ಎಲ್ಲರೂ ತೂಕ ಇಳಿಸಿಕೊಂಡರೆ, ಈಕೆ ತನ್ನ ಪಾತ್ರಕ್ಕೆಂದು ತಿಂದು ತಿಂದು ದಪ್ಪಗಾಗಿ ೭೨ ಕಿಲೋ ತೂಕಕ್ಕೇರಿದ್ದರಂತೆ. ಎಲ್ಲ ನಟಿಯರೂ ತೆಳ್ಳಗಾಗಿ ಗ್ಲಾಮರಸ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೆ, ಈಕೆ ಎಲ್ಲರ ಹುಬ್ಬೂ ಮೇಲೇರುವಂತೆ, ಚಿತ್ರಕ್ಕಾಗಿ ದಪ್ಪಗಾಗಿದ್ದಳು. ʻದಮ್ ಲಗಾ ಕೆ ಹೈಶಾʼ ಚಿತ್ರದ ಕತೆಗಾಗಿ ಆಕೆ ಸ್ವೀಕರಿಸಿದ ಸವಾಲೇ ಅಂಥದ್ದಾಗಿತ್ತು. ಚಿತ್ರ ಮುಗಿದ ಮೇಲೆ ಮತ್ತೆ ತನ್ನ ಎಂದಿನ ಆಹಾರಭ್ಯಾಸ ಹಾಗೂ ದೈಹಿಕ ಕಸರತ್ತುಗಳ ಮೂಲಕ ಮತ್ತೆ ೨೭ ಕಿಲೋ ಕಡಿಮೆ ಮಾಡಿಕೊಂಡು ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ನೆಲೆಯೂರಿದ್ದಾರೆ.
೪. ಪರಿಣೀತಿ ಛೋಪ್ರಾ ಹಾಗೂ ಅರ್ಜುನ್ ಕಪೂರ್: ಒಂದೇ ಸಿನಿಮಾದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದ ಈ ಇಬ್ಬರೂ ಬರೋಬ್ಬರಿ ತೂಕ ಹೊಂದಿದ್ದರು. ಅರ್ಜುನ್ ಕಪೂರ್ ೧೨೦ ಕಿಲೋ ತೂಗುತ್ತಿದ್ದು, ಸಿನಿಮಾಕ್ಕೆ ೧೨೦ರಿಂದ ೬೮ಕ್ಕೆ ಇಳಿಸಿದರು. ಪರಿಣೀತಿ ಸೈಜ್ ೩೮ರಿಂದ ೩೦ಕ್ಕೆ ಇಳಿದರು. ಇದಾದ ನಂತರ ಇಬ್ಬರೂ ಇದೇ ಫಿಟ್‌ನೆಸ್ ಕಾಯ್ದುಕೊಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ | Deepika Padukone | ಫುಟ್ಬಾಲ್ ವಿಶ್ವ ಕಪ್ ಅನಾವರಣ ಮಾಡಲಿದ್ದಾರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ