Site icon Vistara News

Amrit Mahotsav | ಪಾಲಿಸ್ಟರ್‌ ರಾಷ್ಟ್ರಧ್ವಜ: ಖಾದಿ ನೇಕಾರರ ಕೊರಳಿಗೆ ಸರ್ಕಾರದ ಉರುಳು

Amrit Mahotsav

ಕೇಂದ್ರ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ( Amrit Mahotsav ) ಧ್ವಜ ಸಂಹಿತೆ- ೨೦೦೨ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕಾರ್ಯಕ್ರಮದ ಪರಿಣಾಮ ರಾಷ್ಟ್ರಧ್ವಜ ಖರೀದಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರ ಯೋಜನೆಗನುಸಾರ ರಾಷ್ಟ್ರಧ್ವಜಗಳನ್ನು ಪೂರೈಸಲು ಸಾಧ್ಯವಾಗುವಂತೆ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವುದು ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯೋತ್ತರ ೭೫ನೆಯ ವರ್ಷಾಚರಣೆ ನಿಮಿತ್ತ ಆಗಸ್ಟ್ ೧೧ರಿಂದ ೧೭ರವರೆಗೆ ನಡೆಯಲಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೂಡಿದೆ. ಬರುವ ಸ್ವಾತಂತ್ರ್ಯೋತ್ಸವದಂದು ಕನಿಷ್ಠ ೨೦ ಕೋಟಿ ರಾಷ್ಟ್ರಧ್ವಜಗಳು ಹಾರಬೇಕೆಂಬ ನಿರೀಕ್ಷೆ ಸರ್ಕಾರದ್ದಾಗಿದೆ. ಭಾರತದ ರಾಷ್ಟ್ರಧ್ವಜ ಸಂಹಿತೆ ೨೦೦೨ರ ಪ್ರಕಾರ ಈ ಮೊದಲ ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿ ಬಟ್ಟೆಗಳಿಂದ ಮಾತ್ರ ರಾಷ್ಟ್ರಧ್ವಜಗಳನ್ನು ತಯಾರಿಸಲು ಅನುಮತಿ ಇತ್ತು. ೨೦೨೧ರ ಡಿಸೆಂಬರ್ ೩೦ರಂದು ಈ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ತರಲಾಯಿತು. ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜವನ್ನು ಮಾಡಬಹುದೆಂದು ಈ ತಿದ್ದುಪಡಿ ಹೇಳುತ್ತದೆ. ಆದರೆ ಈ ತಿದ್ದುಪಡಿಗೆ ಕೆಲವು ವಲಯಗಳಿಂದ ತೀವ್ರ ವಿರೋಧ ಸಹ ವ್ಯಕ್ತವಾಗಿದೆ.

ಭಾರತದ ಸ್ವಾತಂತ್ರ್ಯ್ಯದ ೭೫ನೇ ವರ್ಷವನ್ನು ಆಚರಿಸಲು ಮತ್ತು ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತಿರಂಗಾ) ಅಭಿಯಾನದ ಆರಂಭದ ಪೂರ್ವದಲ್ಲಿ ರಾಷ್ಟ್ರಧ್ವಜ ಸಂಹಿತೆಗೆ ಮಾಡಿದ ಬದಲಾವಣೆಯ ಪರಿಣಾಮವಾಗಿ ತ್ರಿವರ್ಣ ಧ್ವಜದ ವೆಚ್ಚವು ಕಡಿಮೆಯಾಗಬಹುದು ಎಂದು ಸರ್ಕಾರ ನಿರೀಕ್ಷಿಸುತ್ತದೆ. ಜನರು ರಾಷ್ಟ್ರಧ್ವಜವನ್ನು ಖರೀದಿಸುವುದರಿಂದ ಅವರಲ್ಲಿ ರಾಷ್ಟ್ರಾಭಿಮಾನ ಮೂಡುತ್ತದೆ ಎಂದು ಸರ್ಕಾರ ಹೇಳಿದೆ. ಇದೊಂದು ಕಾರ್ಯಕ್ರಮ ಪ್ರಸ್ತುತ ಶುಭ ಸಂದರ್ಭವನ್ನು ಸ್ಮರಣೀಯಗೊಳಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥ ಸಂದರ್ಭದಲ್ಲಿ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚುವದು ಮಾತ್ರವಲ್ಲದೇ ಅದು ಬೆಲೆ ಏರಿಕೆಗೆ ಕೂಡ ಕಾರಣವಾಗಬಹುದು. ಈ ಎಲ್ಲ ಕಾರಣಗಳಿಗಿಯೇ ಬಹುಶಃ ಪಾಲಿಯೆಸ್ಟರ್ ರಾಷ್ಟ್ರಧ್ವಜ ಬಳಕೆಗೂ ಕೇಂದ್ರ ಅನುಮತಿ ನೀಡಿದೆ. ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸದ ಕೇಂದ್ರ ಸರ್ಕಾರ ರಾಷ್ಟ್ರಧ್ವಜಗಳನ್ನು ಖರೀದಿಸಲು ಕೆಲವೇ ಕೌಂಟರ್‌ಗಳನ್ನು ಮಾತ್ರ ನಿಗದಿಪಡಿಸಿದೆ.

ಭಾರತದ ಧ್ವಜ ಸಂಹಿತೆ

ರಾಷ್ಟ್ರಧ್ವಜ ಸಂಹಿತೆಯು ಭಾರತದ ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಅನ್ವಯವಾಗುವ ಕಾನೂನುಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ಒಂದು ವಿವರಣೆ. ರಾಷ್ಟ್ರಧ್ವಜದ ಪ್ರದರ್ಶನವನ್ನು ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ, ೧೯೫೦(೧೯೫೦ ರ ನಂ. ೧೨) ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ, ೧೯೭೧(ನಂ. ೬೯ರ ನಿಬಂಧನೆಗಳು, ೧೯೭೧), ಭಾರತದ ಧ್ವಜ ಸಂಹಿತೆ, ೨೦೦೨ ಮುಂತಾದ ಕಾನೂನುಗಳು, ಆಚರಣೆಗಳು ಮತ್ತು ಸೂಚನೆಗಳ ಮೂಲಕ ನಿಯಂತ್ರಿಸಲಾಗಿತ್ತು.

ಈ ಧ್ವಜ ಸಂಹಿತೆಯನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ.
• ಮೊದಲ ಭಾಗದಲ್ಲಿ: ರಾಷ್ಟ್ರಧ್ವಜದ ಸಾಮಾನ್ಯ ವಿವರಣೆ.
• ಎರಡನೆ ಭಾಗದಲ್ಲಿ: ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಿಂದ ರಾಷ್ಟ್ರಧ್ವಜದ ಹಾರಾಟ.
• ಮೂರನೇ ಭಾಗದಲ್ಲಿ: ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಮತ್ತು ಅದರ ಸಂಸ್ಥೆಗಳು ಮತ್ತು ಏಜೆನ್ಸಿಗಳಿಂದ ರಾಷ್ಟ್ರಧ್ವಜದ ಪ್ರದರ್ಶನ.

ಭಾರತದ ರಾಷ್ಟ್ರಧ್ವಜದ ಘನತೆ ಮತ್ತು ಗೌರವವನ್ನು ಕಾಪಾಡಲು ಈ ಸಂಹಿತೆಗಳನ್ನು ರೂಪಿಸಲಾಗಿದೆ. ಸೂರ್ಯಾಸ್ತದ ಬಳಿಕ, ರಾತ್ರಿ ಹೊತಿನಲ್ಲಿ ರಾಷ್ಟ್ರಧ್ವಜ ಹಾರಾಟ ನಿರ್ಬಂಧಿಸಲಾಗಿದೆ. ಜತೆಗೆ, ಹರಿದ ಮತ್ತು ವಿಕೃತಗೊಂಡ ರಾಷ್ಟ್ರಧ್ವಜ ಬಳಕೆಗೆ ಅವಕಾಶ ಇಲ್ಲ. ಆದರೆ, ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಮತ್ತು ಕಟ್ಟಡಗಳ ಮೇಲೆ ಹಗಲು ಮತ್ತು ರಾತ್ರಿ ರಾಷ್ಟ್ರಧ್ವಜ ಹಾರಾಟಕ್ಕೆ ಕೇಂದ್ರ ಸರಕಾರದ ಗೃಹ ಸಚಿವಾಲಯ ೨೦೦೯ರಲ್ಲಿ ಒಪ್ಪಿಗೆ ನೀಡಿದೆ. ಭಾರತದ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದಂತೆ ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ಎಲ್ಲ ದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಉದ್ಘಾಟನೆ ಸಂದರ್ಭದಲ್ಲಿ ಅಥವಾ ನಿರಂತರವಾಗಿ ರಾಷ್ಟ್ರಧ್ವಜಾರೋಹಣ ಮಾಡಬಹುದು. ಧ್ವಜಾರೋಹಣಕ್ಕೆ ಪ್ರೇರಣೆ ನೀಡುವುದಕ್ಕಾಗಿ ತ್ರಿವರ್ಣ ಧ್ವಜ ಆರೋಹಣಕ್ಕೆ ಶಾಲೆ, ಕಾಲೇಜು, ಕ್ರೀಡಾ ಅವರಣ ಹಾಗೂ ಸ್ಕೌಟ್ ಕ್ಯಾಂಪಸ್‌ಗಳಲ್ಲಿ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

೧೯೫೦ ಹಾಗೂ ೧೯೭೧ರಲ್ಲಿ ತಂದ ಕೆಲ ತಿದ್ದುಪಡಿಗಳಿಗನುಸಾರ ರಾಷ್ಟ್ರ ಗೌರವಕ್ಕೆ ಅವಮಾನ ತಪ್ಪಿಸುವ ಉದ್ದೇಶದಿಂದ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ತ್ರಿವರ್ಣ ಧ್ವಜವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಹರಿದ ಅಥವಾ ಹೊಲಸಾದ ಧ್ವಜವನ್ನು ಉಪಯೋಗಿಸುವಂತಿಲ್ಲ. ಹಾಗೆಯೇ ತ್ರಿವರ್ಣ ಧ್ವಜವನ್ನು ಇತರ ಧ್ವಜಗಳೊಂದಿಗೆ ಏಕಕಾಲದಲ್ಲಿ ಹಾರಿಸುವಂತಿಲ್ಲ. ತ್ರಿವರ್ಣ ಧ್ವಜದ ಪಕ್ಕದಲ್ಲಿ ಒಂದೇ ಎತ್ತರದಲ್ಲಿ ಇನ್ನಿತರ ಯಾವುದೇ ವಸ್ತುಗಳು ಇರಬಾರದು. ಧ್ವಜವನ್ನು ಯಾವುದೇ ಉತ್ಸವಕ್ಕಾಗಿ ಅಥವಾ ಅಲಂಕಾರಕ್ಕಾಗಿ ಬಳಸುವಂತಿಲ್ಲ.

ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ, ಕ್ರೀಡಾಕೂಟಗಳೇ ಮುಂತಾದ ಸಂದಭಗಳಲ್ಲಿ ಪ್ಲಾಸ್ಟಿಕ್, ಪೇಪರ್ ತ್ರಿವರ್ಣ ಧ್ವಜಗಳನ್ನು ಹೇಗೆಂದರೆ ಹಾಗೆ ಬಿಸಾಡುವಂತಿಲ್ಲ. ಅಂಥ ಧ್ವಜಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಅದಿಕೃತ ಧ್ವಜಪ್ರದರ್ಶನಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ನಿಗದಿಪಡಿಸಿದ ನಿಯಮಗಳಿಗೆ ಅನುಗುಣವಾಗಿರುವ ಮತ್ತು ಅವುಗಳ ಗುರುತು ಹೊಂದಿರುವ ಧ್ವಜಗಳನ್ನು ಮಾತ್ರ ಬಳಸಬಹುದು. ೨೦೦೨ರ ಭಾರತ ಧ್ವಜ ಸಂಹಿತೆಯ ಕೆಲ ಸೆಕ್ಷನ್ಗಳ ಅನುಸಾರ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ವರ್ಣಗಳು ಹಾಗೂ ಅಶೋಕ ಚಕ್ರ ಹೊರತು ಬೇರೆ ಯಾವುದೇ ಬರಹವಿರಬಾರದು. ಹಾಗೆ ಬರೆದರೆ ಅದು ಅಪಮಾನವಾಗುತ್ತದೆ, ಅಲ್ಲದೇ ರಾಷ್ಟ್ರಧ್ವಜವನ್ನು ವಿರೂಪಗೊಳಿಸುವುದು, ಸುಡುವದು, ಹರಿದು ಹಾಕುವದು ಸೇರಿದಂತೆ ಯಾವುದೇ ರೂಪದಲ್ಲಿ ಅವಮಾನಗೊಳಿಸಿದರೆ ೨೦೦೩ ‘ಪ್ರಿವೆನ್ಷನ್ ಆಫ್ ಇನ್‌ಸಲ್ಟ್ ಟು ನ್ಯಾಷನಲ್ ಆನರ್ ಆಕ್ಟ್’ ಅನುಸಾರ ಮೂರು ವರ್ಷ ಜೈಲು ಶಿಕ್ಷೆಗೂ ಅವಕಾಶವಿದೆ.

flag

ಧ್ವಜ ಸಂಹಿತೆಗೆ ತಿದ್ದುಪಡಿ ಸರಿಯೇ?

ಕೇಂದ್ರ ಸರ್ಕಾರ ತನ್ನ ಅಭಿಯಾನದ ಉದ್ದೇಶಕ್ಕೆ ಪೂರಕವಾಗಿ ರಾಷ್ಟ್ರಧ್ವಜ ಸಂಹಿತೆಯ ನಿಯಮಗಳನ್ನು ಬದಲಿಸಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಭಾರತದ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ನಿಯಮಗಳನ್ನು ಆಗಾಗ ಬದಲಿಸಿರುವುದರಿಂದ ಅದಕ್ಕಿರುವ ಗೌರವ ಮತ್ತು ಘನತೆಯನ್ನು ತಗ್ಗಿಸಲಾಗಿದೆ ಎಂಬ ಆರೋಪ ವ್ಯಾಪಕವಾಗಿದೆ. ಕೇಂದ್ರ ಸರ್ಕಾರವು ತಾನು ಹಮ್ಮಿಕೊಂಡಿರುವ ಅಭಿಯಾನದ ಕುರಿತು ಸಾಕಷ್ಟು ಮೊದಲೇ ಘೋಷಣೆ ಮಾಡಿದ್ದರೆ ಧ್ವಜ ಉತ್ಪಾದಿಸುವ ಖಾದಿ ಕೇಂದ್ರಗಳು ಬೇಡಿಕೆಗೆ ತಕ್ಕಷ್ಟು ಉತ್ಪಾದಿಸಲು ಸಾಧ್ಯವಾಗುತ್ತಿತ್ತು. ಕೇಂದ್ರ ಸರ್ಕಾರದ ಮುಂದಾಲೋಚನೆಯ ಕೊರತೆಯಿಂದಾಗಿ ಮತ್ತು ಎಂಥದೇ ಪರಿಸ್ಥಿತಿಯಲ್ಲಿ ತನ್ನ ಅಭಿಯಾನವನ್ನು ಯಶಸ್ವಿಗೊಳಿಸುವುದಕ್ಕಾಗಿ ರಾಷ್ಟ್ರಧ್ವಜ ಸಂಹಿತೆಯ ನಿಯಮಗಳನ್ನು ಬದಲಿಸಿ ಪಾಲಿಯೆಸ್ಟರ್ ರಾಷ್ಟ್ರಧ್ವಜಗಳ ಬಳಕೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂಬ ವಾದ ಬಲವತ್ತರವಾಗಿದೆ. ಸಾಕಷ್ಟು ಕಠಿಣ ನಿಯಮಗಳಿದ್ದಾಗ್ಯೂ, ರಾಷ್ಟ್ರಧ್ವಜದ ಘನತೆಯನ್ನು ಕುಂದಿಸುವಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹಾಗಿರುವಾಗ ನಿಯಮಗಳನ್ನು ಸಡಿಲ ಮಾಡಿದ್ದರಿಂದ ಅಸಮರ್ಪಕ ಬಳಕೆಗೆ ರಹದಾರಿ ಮಾಡಿಕೊಟ್ಟಂತಾಗಿದೆ.

ಪಾಲಿಸ್ಟರ್ ಧ್ವಜಕ್ಕೆ ಜಿಎಸ್‌ಟಿ ಇಲ್ಲ

ಪಾಲಿಸ್ಟರ್‌ನಿಂದ ತಯಾರಿಸಿದ ರಾಷ್ಟ್ರಧ್ವಜ ಮಾರಾಟದ ಮೇಲೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಿದೆ. ಹತ್ತಿ, ರೇಷ್ಮೆ, ಉಣ್ಣೆ ಅಥವಾ ಖಾದಿಯಿಂದ ತಯಾರಾದ ರಾಷ್ಟ್ರಧ್ವಜಗಳು ಈಗಾಗಲೇ ತೆರಿಗೆಗಳ ವ್ಯಾಪ್ತಿಯಿಂದ ಹೊರಗಿದ್ದವು. ಡಿಸೆಂಬರ್ ೨೦೨೧ರಲ್ಲಿ ಮಾಡಲಾದ ತಿದ್ದುಪಡಿಗಳನ್ನು ಒಳಗೊಂಡಂತೆ ಧ್ವಜ ಸಂಹಿತೆ ೨೦೦೨ರಡಿಯಲ್ಲಿ ಭಾರತೀಯ ರಾಷ್ಟ್ರೀಯ ಧ್ವಜಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಶುಕ್ರವಾರ ಜ್ಞಾಪಕ ಪತ್ರದಲ್ಲಿ ತಿಳಿಸಿದೆ. ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟರ್ ಪೋಸ್ಟ್‌ಗೆ ಜ್ಞಾಪಕ ಪತ್ರ ಲಗತ್ತಿಸಿ ಸ್ಪಷ್ಟಪಡಿಸಿದ್ದಾರೆ.

ಅಭಿಯಾನದ ಭಾಗವಾಗಿ, ಅಗಸ್ಟ್ ೧೧-೧೭ರ ವರೆಗೆ ಒಂದು ವಾರದಲ್ಲಿ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಜನರ ಹೃದಯಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವದು ಈ ಉಪಕ್ರಮದ ಹಿಂದಿನ ಆಲೋಚನೆಯಾಗಿದೆ. ಪಾಲಿಸ್ಟರ್ ರಾಷ್ಟ್ರಧ್ವಜಗಳ ಮಾರಾಟವನ್ನು ಕೇಂದ್ರ ಸರ್ಕಾರ ಜಿಎಸ್‌ಟಿ ಮುಕ್ತಗೊಳಿಸಿದೆ. ಚರಕದಿಂದ ತಯಾರಿಸಲ್ಪಡುವ ಹತ್ತಿ ಬಟ್ಟೆ, ರೇಷ್ಮೆ, ಉಣ್ಣೆ ಮತ್ತು ಖಾದಿ ಧ್ವಜಗಳ ಮಾರಾಟವನ್ನು ಈಗಾಗಲೇ ಜಿಎಸ್‌ಟಿ ಮುಕ್ತಗೊಳಿಸಿದೆ.

ಮೈಸೂರಲ್ಲಿ ತಿದ್ದುಪಡಿಗೆ ನೇಕಾರರ ಪ್ರತಿಭಟನೆ

‘ರಾಷ್ಟ್ರಧ್ವಜ ಸಂಹಿತೆ’ ತಿದ್ದುಪಡಿ ಮಾಡಿರುವುದು ಗಾಂಧಿ ತತ್ವ ಮತ್ತು ಆಶಯಗಳಿಗೆ ವಿರುದ್ಧದ ನಡೆ. ಗ್ರಾಮೋದ್ಯೋಗವನ್ನು ನಾಶ ಮಾಡಲು ಅಧಿಕಾರ ವರ್ಗ ಹಾತೊರೆಯುತ್ತಿದೆ. ಗ್ರಾಮ ಸ್ವರಾಜ್ಯದ ಸಂಕೇತವಾದ ಖಾದಿಯನ್ನು ತ್ಯಜಿಸುವ ಮಾತೇ ಇಲ್ಲ ಎಂದು ಮೈಸೂರಿನ ರಂಗಕರ್ಮಿ ಪ್ರಸನ್ನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾದಿ ಬಟ್ಟೆಯ ಬದಲು ಪಾಲಿಯೆಸ್ಟರ್‌ನಿಂದ ತಯಾರಿಸಿದ ರಾಷ್ಟ್ರಧ್ವಜಗಳಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ‘ಮೈಸೂರು ಖಾದಿ ನೂಲುಗಾರರ ಬಳಗ’ ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೂಲು ನೇಯುವ ಕಾರ್ಯಾಗಾರ ಮತ್ತು ಮೌನ ಪ್ರತಿಭಟನೆಯ ಮೂಲಕ ಇತ್ತೀಚೆಗೆ ವಿಭಿನ್ನ ಪ್ರತಿರೋಧ ವ್ಯಕ್ತಪಡಿಸಿತು.

“ಖಾದಿಯಿಂದ ದೇಶದ ಆರ್ಥಿಕತೆಗೆ ಯಾವುದೇ ಲಾಭವಿಲ್ಲ. ನೀವು ಚರಕದಿಂದ ನೂತ ಖಾದಿ ನಮಗೆ ಬೇಕಿಲ್ಲವೆಂದು ಪರೋಕ್ಷವಾಗಿ ಸರ್ಕಾರ ಹೇಳಿದಂತಿದೆ. ಧ್ವಜದಿಂದಲೇ ಖಾದಿಯನ್ನು ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಹೀಗೇ ಮುಂದುವರಿದರೆ ಶಿವಪುರ ಸತ್ಯಾಗ್ರಹದ ಚಳವಳಿ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹದ ಚಳವಳಿ ಮಾಡುತ್ತೇವೆ” ಎಂದು ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ಖಾದಿ ಧ್ವಜ ನಿರ್ಮಾಣ ಸಂಸ್ಥೆಗೆ ಕುತ್ತು!

ಪ್ರಸ್ತುತ ತಿದ್ದುಪಡಿ ಕಾರಣದಿಂದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರವಾದ ಹುಬ್ಬಳ್ಳಿ ತಾಲೂಕಿನ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಈ ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು ೩ರಿಂದ ೩.೫ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿತ್ತು. ಅಂದರೆ ಸುಮಾರು ೭೦ ಸಾವಿರ ತ್ರಿವರ್ಣ ಧ್ವಜಗಳು ಮಾರಾಟವಾಗುತ್ತಿದ್ದವು. ಈ ಬಾರಿಯೂ ಅದೇ ಮಟ್ಟದ ವಹಿವಾಟು ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಈ ಸಂಸ್ಥೆಯವರ ಆಸೆ ಆಸೆಯಾಗಿಯೇ ಉಳಿಯುವ ಪ್ರಸಂಗ ಎದುರಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ತಮ್ಮ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಆದೇಶ ನೀಡಿತ್ತು. ಈ ಬಾರಿ ೫ ಕೋಟಿಗಿಂತಲೂ ಹೆಚ್ಚಿನ ಲಾಭವಾಗುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಸರ್ಕಾರ ತಂದಿರುವ ತಿದ್ದುಪಡಿಯಿಂದ ನಮ್ಮ ವಹಿವಾಟು ಸಂಪೂರ್ಣವಾಗಿ ಕುಸಿಯುತ್ತದೆ. ಇದನ್ನು ಪ್ರಜಾತಾಂತ್ರಿಕ ಮಾದರಿಯಲ್ಲಿ ವಿರೋಧಿಸಲಿದ್ದೇವೆ ಎಂದು ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದ್ದಾರೆ.

ಸತ್ಯಾಗ್ರಹ

ಪಾಲಿಸ್ಟರ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಆಮದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರದ ನಿರ್ಣಯ ವಿರೋಧಿಸಿ ಖಾದಿ ರಾಷ್ಟ್ರಧ್ವಜ ತಯಾರಿಕೆಗೆ ಖ್ಯಾತಿ ಪಡೆದ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಒಂದು ದಿನದ ಸತ್ಯಾಗ್ರಹ ನಡೆಸಿತು. ಪಾಲಿಯೆಸ್ಟರ್‌ ಧ್ವಜ ವಿರೋಧಿಸಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿಗಳು, ಸರ್ವೋದಯ ಕಾರ್ಯಕರ್ತರು, ಖಾದಿ ಪ್ರೇಮಿಗಳು, ರಾಜ್ಯದ ಖಾದಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಧ್ವಜ ತಯಾರಿಸುವ ಕೆಲಸಗಾರರು ಸತ್ಯಾಗ್ರಹದಲ್ಲಿ ಭಾಗವಹಿಸಿದರು.

ಹರ್ ಘರ್ ತಿರಂಗಾ ಯಶಸ್ಸಿಗೆ ಗೈಡ್‌ಲೈನ್

ಸ್ವಾತಂತ್ರ್ಯ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಘೋಷವಾಕ್ಯದೊಂದಿಗೆ ಆ. ೧೧ರಿಂದ ೧೭ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಿ ಪಂಚಾಯತ್‌ರಾಜ್ ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ.

ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್‌ರಾಜ್ ಸಂಸ್ಥೆಗಳು/ ಸ್ವಸಹಾಯ ಸಂಘಗಳು-ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ, ಸಹಕಾರಿ ಸಂಘಗಳು, ಉಪ ಅಂಚೆ ಕಚೇರಿಗಳಲ್ಲಿ, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜ್ಗಾರ್ ಸೇವಕರು, ಶಿಕ್ಷಕರನ್ನು ಉತ್ತೇಜಿಸಿ ರಾಷ್ಟ್ರಧ್ವಜ ಹಾರಿಸುವಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಹತ್ತಿ, ಪಾಲಿಯೆಸ್ಟರ್, ರೇಷ್ಮೆ, ಉಣ್ಣೆ ಮತ್ತು ಖಾದಿ ಬಟ್ಟೆಯಿಂದ ಕೈಯಲ್ಲಿ ಸಿದ್ದಪಡಿಸಿರುವ, ಯಂತ್ರದಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಬಳಸಬಹುದು. ಅಭಿಯಾನದ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಕರಪತ್ರ, ಬ್ಯಾನರ್ ಮೂಲಕ ಪ್ರಚಾರ ನೀಡಬೇಕು. ಗ್ರಾಮ ಪಂಚಾಯತಿಗಳು ರಾಷ್ಟ್ರಧ್ವಜವನ್ನು ಬೃಹತ್ ಮಟ್ಟದಲ್ಲಿ ಖರೀದಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಧ್ವಜಗಳ ಹಂಚಿಕೆ ಮತ್ತು ಮಾರಾಟ ಸ್ಥಳಗಳನ್ನು ಗುರುತಿಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ಧ್ವಜ ವಿತರಣೆ/ಮಾರಾಟದ ಕೇಂದ್ರವಾಗಿ ಬಳಸಬಹುದು.

ಖಾದಿ ಬಾವುಟಕ್ಕೆ ಪ್ರೋತ್ಸಾಹ ನೀಡಬೇಕಿತ್ತು

ಪ್ರತಿ ಮನೆಯ ಮೇಲೆ ಖಾದಿ ಬಾವುಟವನ್ನೇ ಹಾರಿಸಿದ್ದರೆ ಲಕ್ಷಾಂತರ ನೂಲು ಸುತ್ತುವ ಬಡ ಮಹಿಳೆಯರಿಗೆ ಕೆಲಸ ಒದಗಿಸಿದಂತಾಗುತ್ತಿರಲಿಲ್ಲವೇ? ಹಾಗೆ ಮಾಡಿದ್ದರೆ ಈ ಸರ್ಕಾರದ ತಲೆಯ ಮೇಲೊಂದು ಗರಿ ಮೂಡುತ್ತಿತ್ತಲ್ಲವೇ? ಆದರೆ, ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿಯೇ ಖಾದಿ ಬಾವುಟವನ್ನು ಅಧಿಕೃತವಾಗಿ ಕೆಳಗಿಳಿಸಲಾಗಿದೆ. ಹೀಗೆ ಮಾಡಿ, ದೇಶದ ಬಾವುಟ ಮತ್ತು ಗ್ರಾಮೀಣ ಕೈ ಉತ್ಪಾದಕರ ನಡುವೆ ಇದ್ದ ಖಾದಿ ಎಂಬ ಸಂಬಂಧವನ್ನು ಹರಿದು ಹಾಕಲಾಗಿದೆ. ಇದೊಂದು ದುರಂತವೇ ಸರಿ. ಈಗಾಗಲೇ ಖಾದಿ ಮತ್ತು ಗ್ರಾಮೀಣ ಕೈ ಉತ್ಪನ್ನಗಳು ಸತ್ತೇ ಹೋಗಿವೆ. ಆಧುನಿಕ ಸಂದರ್ಭದಲ್ಲಿ ವಾಸ್ತವವಾಗಿ ಆಗಿ ಹೋಗಿರುವ ಈ ದುರಂತವನ್ನು ಹೀಗೆ ಮಾಡುವ ಸರಕಾರವೇ ಸ್ಥಿರಗೊಳಿಸಿದಂತಾಗಲಿಲ್ಲವೇ? ‘ಹರ್ ಘರ್ ತಿರಂಗಾ’ ಯೋಜನೆ ರೂಪಿಸಿದ ಸಂದರ್ಭದಲ್ಲಿ ಬಾವುಟದ ಅಗತ್ಯತೆ ಕುರಿತು ಬೇಡಿಕೆ ಇಟ್ಟಿದ್ದರೆ, ಸಾಕಾಗುವಷ್ಟು ಉತ್ಪಾದಿಸಲು ಖಾದಿ ಸಂಸ್ಥೆಗಳು ಸಿದ್ಧವಿದ್ದವು. ಖಾದಿ ಗೋದಾಮಿನಲ್ಲಿ ಲಕ್ಷಾಂತರ ಮೀಟರ್ ಬಟ್ಟೆ ಖರ್ಚಾಗದೆ ಉಳಿದಿದೆ. ಅದನ್ನು ಯಾರು ಬಳಸುತ್ತಾರೆ? ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ. ಸರ್ಕಾರವೇ ಹೀಗೆ ಮಾಡಿದರೆ ನಾಳೆ ಖಾದಿ ಸಂಸ್ಕೃತಿಯನ್ನು ಕಾಪಾಡುವವರು ಯಾರು?

(ಲೇಖಕರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಗಾಂಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರು)

Exit mobile version