Site icon Vistara News

ಸಂಪಾದಕೀಯ | ರೋಮಾಂಚಕ ಫುಟ್‌ಬಾಲ್‌, ನಾವು ವಿಶ್ವಕಪ್ ಆಡುವುದು ಯಾವಾಗ?

Indian Football Team

ವಿಶ್ವಕಪ್ ಫುಟ್‌ಬಾಲ್ ಪಂದ್ಯಾಟಗಳು ಮುಗಿದಿವೆ. ಜಗತ್ತಿನಾದ್ಯಂತ ಫುಟ್‌ಬಾಲ್‌ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿದ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿಶ್ವಕಪ್‌ ಗೆದ್ದುಕೊಂಡಿದೆ. 3-3 ಗೋಲುಗಳ ಸಮಬಲದ ಪಂದ್ಯಾಟದ ಬಳಿಕ 4-2 ಪೆನಾಲ್ಟಿ ಗೋಲುಗಳ ಮೂಲಕ ಅರ್ಜೆಂಟೀನಾ ವಿಜಯೋತ್ಸವ ಆಚರಿಸಿತು. 36 ವರ್ಷಗಳ ಬಳಿಕ ಅರ್ಜೆಂಟೀನಾ ಕಪ್‌ ಗೆಲ್ಲುತ್ತಿರುವುದು ಅದರ ಕ್ರೀಡಾ ಛಲಕ್ಕೆ ಸಾಕ್ಷಿಯಾಗಿದೆ. ಅದಕ್ಕೆ ಎದುರಾಳಿಯಾಗಿದ್ದ ಫ್ರಾನ್ಸ್‌ ಕೂಡ ಸಮಬಲದ ಹೋರಾಟ ನೀಡಿದ್ದು ಫೈನಲ್‌ ಪಂದ್ಯವನ್ನು ಅವಿಸ್ಮರಣೀಯಗೊಳಿಸಿತು. ಕ್ರಿಕೆಟನ್ನೇ ದೇವರೆಂದು ಬಗೆದಿರುವ ಭಾರತದಲ್ಲಿ ಕೂಡ ಈ ಬಾರಿಯ ಫುಟ್‌ಬಾಲ್‌ ವಿಶ್ವಕಪ್‌ ಸಾಕಷ್ಟು ಕ್ರೇಜ್‌ ಮೂಡಿಸಿದ್ದಲ್ಲದೆ, ಫೈನಲ್‌ ಪಂದ್ಯಾಟ ಮತ್ತಷ್ಟು ರೋಚಕತೆ ಸೃಷ್ಟಿಸಿತ್ತು. ಫುಟ್‌ಬಾಲ್‌ ದಂತಕಥೆಗಳಲ್ಲಿ ಒಬ್ಬನಾದ ಲಯೊನೆಲ್‌ ಮೆಸ್ಸಿಯ ಕೊನೆಯ ಆಟ ಎಂಬ ಭಾವನೆಯಿಂದ ಇದಕ್ಕೊಂದು ಭಾವನಾತ್ಮಕ ಆಯಾಮವೂ ಪ್ರಾಪ್ತವಾಗಿತ್ತು. ಮೆಸ್ಸಿ ಸಾಕಷ್ಟು ಉತ್ತಮವಾಗಿಯೇ ಆಡಿ ಅಭಿಮಾನಿಗಳ ಮನರಂಜಿಸಿದರು. ಫ್ರಾನ್ಸ್‌ನ ಕ್ಯಾಪ್ಟನ್‌ ಕೈಲಿಯಾನ್‌ ಎಂಬಾಪೆ ಕೂಡ ದಿಟ್ಟವಾಗಿ ಹೋರಾಡಿ ನೋಡುಗರ ಮನಗೆದ್ದರು. ಕ್ರೀಡೆಯ ರೋಮಾಂಚನವನ್ನು ಸವಿಯುವ ಮನಸ್ಸುಗಳಿಗೆ ಕ್ರೀಡಾಸ್ಫೂರ್ತಿಯೇ ಮುಖ್ಯವಾಗುತ್ತದೆ.

ವಿಶೇಷವೆಂಬಂತೆ, ಭಾರತದಲ್ಲಿ ಈ ಬಾರಿ ಫುಟ್‌ಬಾಲ್‌ ಆಸಕ್ತಿ ಕ್ರಿಕೆಟನ್ನು ಮೀರಿಸುವಂತೆ ಕಾಣಿಸಿಕೊಂಡಿದೆ. ಫುಟ್‌ಬಾಲ್‌ ಕ್ಷಣಕ್ಷಣಕ್ಕೂ ರೋಮಾಂಚನ ಮೂಡಿಸುವ, ಕ್ರೀಡಾಂಗಣವಿಡೀ ಓಡಾಡುವ ಚೆಂಡನ್ನು ಅಷ್ಟೂ ಕ್ರೀಡಾಳುಗಳು ಬೆನ್ನು ಹತ್ತುವ ಹಾಗೂ ಹೋರಾಡುವ, ಮನುಷ್ಯನ ದೈಹಿಕ ಸಾಮರ್ಥ್ಯದ ಅಸೀಮ ಸಾಧ್ಯತೆಯನ್ನು ಉತ್ತುಂಗಕ್ಕೆ ಒಯ್ಯುವ ಆಟ. ಹೀಗಾಗಿಯೇ ಕ್ರಿಕೆಟ್‌ಗಿಂತ ಎಷ್ಟೋ ಪಟ್ಟು ಹೆಚ್ಚು ಅಭಿಮಾನಿಗಳು ಜಾಗತಿಕವಾಗಿ ಫುಟ್ಬಾಲ್‌ಗೆ ಇದ್ದಾರೆ. ಈ ಸಲದ ವಿಶ್ವಕಪ್‌ನಲ್ಲಿ 32 ದೇಶಗಳು ಭಾಗವಹಿಸಿದ್ದವು. ಇದು ಶ್ರೀಮಂತ ಕ್ರೀಡೆ ಕೂಡ. ಭಾರತದಲ್ಲೂ ಕೋಟ್ಯಂತರ ಫುಟ್‌ಬಾಲ್‌ ಪ್ರಿಯರಿದ್ದಾರೆ, ಆಸಕ್ತ ಆಟಗಾರರಿದ್ದಾರೆ. ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ, ಗೋವಾ ರಾಜ್ಯಗಳಲ್ಲಿ ಫುಟ್‌ಬಾಲ್‌ ಮುಖ್ಯ ಕ್ರೀಡೆಯಾಗಿದೆ. ಕೇರಳದಲ್ಲಂತೂ ಪೀಲೆ, ಮರಡೋನಾ ಮುಂತಾದವರ ಪ್ರತಿಮೆಗಳನ್ನೇ ನಿಲ್ಲಿಸಿರುವುದೂ ಉಂಟು. ಈ ಸಲವೂ ಕೇರಳದ ಬೀದಿಬೀದಿಗಳಲ್ಲಿ ಮೆಸ್ಸಿಯ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ ಎಂದರೆ ಅಲ್ಲಿನವರ ಫುಟ್‌ಬಾಲ್‌ ಪ್ರೀತಿ ಎಷ್ಟೆಂದು ಊಹಿಸಬಹುದು.

ಹೋಲಿಸಿದರೆ ಅರ್ಜೆಂಟೀನಾ ಭಾರತಕ್ಕಿಂತ ಎಷ್ಟೋ ಸಣ್ಣ ದೇಶ; ಭಾರತದಷ್ಟು ಜಿಡಿಪಿಯೂ ಅದಕ್ಕಿಲ್ಲ. ಆದರೆ ಫುಟ್‌ಬಾಲ್‌ನಲ್ಲಿ ಅದು ವಿಶ್ವವನ್ನೇ ರೋಮಾಂಚನಗೊಳಿಸುತ್ತದೆ. ಶ್ರೀಮಂತವಲ್ಲದ ಎಷ್ಟೋ ಪುಟ್ಟ ಪುಟ್ಟ ದೇಶಗಳು ಈ ಸಲದ ವಿಶ್ವಕಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿವೆ. ಹಾಗಾದರೆ ಭಾರತ ಮಾತ್ರ ಯಾಕೆ ಈ ಅರ್ಹತೆಯನ್ನು ಕಳೆದುಕೊಂಡಿದೆ? 1956ರಲ್ಲಿ ನಮ್ಮ ದೇಶಕ್ಕೆ FIFA 9ನೇ ರ‍್ಯಾಂಕಿಂಗ್‌ ನೀಡಿತ್ತು. ಇಂದು ನಮ್ಮ ರ‍್ಯಾಂಕಿಂಗ್‌ 211 ದೇಶಗಳಲ್ಲಿ 106ನೆಯದು! ಈ ಬಾರಿ ಫುಟ್‌ಬಾಲ್‌ ವಿಶ್ವಕಪ್‌ ಆಯೋಜಿಸಿದ್ದ ಕತಾರ್‌ ಭಾರತಕ್ಕೆ ಹೋಲಿಸಿದರೆ ಬಹು ಸಣ್ಣ ದೇಶ. ನಮ್ಮಲ್ಲಿ ಏನಾಗಿದೆ ಎಂದರೆ, ಕ್ರೀಡೆಯ ಹೆಸರಿನಲ್ಲಿ ಕ್ರಿಕೆಟ್‌ಗೆ ಮಾತ್ರವೇ ಹೆಚ್ಚಿನ ಮಹತ್ವ ಕಲ್ಪಿಸಿದ್ದೇವೆ. ನಮ್ಮಲ್ಲಿ ಕ್ರಿಕೆಟ್‌ ಕ್ರೀಡಾಳುಗಳು ಮಾತ್ರವೇ ಜನರ ಗಮನವನ್ನು ಸೆಳೆಯುತ್ತಾರೆ; ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಂತ ಯುವಜನತೆಯಲ್ಲಿ ಇತರ ಕ್ರೀಡೆಗಳ ಬಗ್ಗೆ ಆಸಕ್ತಿ ಇಲ್ಲವೇ ಎಂದು ಕೇಳಿದರೆ, ಖಂಡಿತವಾಗಿಯೂ ಇದೆ. ಆದರೆ ಸರ್ಕಾರ ಹಾಗೂ ಸಂಘಸಂಸ್ಥೆಗಳು ನೀಡುತ್ತಿರುವ ಉತ್ತೇಜನ ಸಾಲದು. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಳುಗಳು ರಾಶಿ ರಾಶಿ ಪದಕಗಳನ್ನು ಬಾಚಿಕೊಂಡು ಬಂದರು. ಅಥ್ಲೆಟಿಕ್ಸ್‌, ಕುಸ್ತಿ, ಜಾವೆಲಿನ್‌, ಶೂಟಿಂಗ್‌, ಎಲ್ಲದರಲ್ಲೂ ನಮ್ಮವರು ಪ್ರತಿಭೆ ಪ್ರದರ್ಶಿಸಿದರು. ಹಾಕಿಯಲ್ಲೂ ಸೆಮಿಫೈನಲ್‌ವರೆಗೆ ತೆರಳಿದರು. ಒಂದು ಕಾಲದಲ್ಲಿ ಹಾಕಿಯಲ್ಲಿ ಪಾರಮ್ಯವನ್ನು ಮೆರೆದಿದ್ದ ಭಾರತ ಇಂದು ಮತ್ತೆ ಅರ್ಹತಾ ಸುತ್ತಿನಲ್ಲಿ ತನ್ನನ್ನು ಸಾಬೀತುಪಡಿಸಿಕೊಳ್ಳುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ಕಾರಣ ಕ್ರಿಕೆಟ್‌ನಿಂದ ಆಚೆಗೆ ನೋಡದ ನಮ್ಮ ಸೀಮಿತ ದೃಷ್ಟಿಕೋನ.

ಕತಾರ್‌ನಂಥ ಸಣ್ಣ ದೇಶವೇ ವಿಶ್ವಕಪ್ ಆಯೋಜಿಸಿರುವಾಗ ಭಾರತಕ್ಕೆ ಇದು ಅಸಾಧ್ಯವಲ್ಲ. ಭಾರತದಲ್ಲೂ ವಿಶ್ವಕಪ್ ಪಂದ್ಯಾವಳಿ ಆಯೋಜಿಸುವಂತಾಗಬೇಕು ಎಂದು ಪ್ರಧಾನಿ ಮೋದಿ ಹಿಂದೆ ಹೇಳಿದ್ದರು. ಈಗಲೇ ಇಚ್ಛಾಶಕ್ತಿ ಪ್ರದರ್ಶಿಸಿ ಮುಂದಡಿಯಿಟ್ಟರೆ ಇನ್ನು ಒಂದೆರಡು ದಶಕಗಳಲ್ಲಿ ಇದು ಸಾಧ್ಯವಾಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ, ಪಟ್ಟಭದ್ರ ರಾಜಕಾರಣಿಗಳ ಆಡುಂಬೊಲವಾಗಿರುವ ಇಂಡಿಯನ್‌ ಫುಟ್‌ಬಾಲ್‌ ಫೆಡರೇಷನ್ ಅನ್ನು ಮುಕ್ತಗೊಳಿಸಬೇಕು. ಇದನ್ನು ದಶಕಗಳಿಂದ ರಾಜಕಾರಣಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಕ್ರೀಡಾಳುಗಳ ನೇಮಕದಿಂದ ಹಿಡಿದು ಅವರ ಶೂಗಳ ಆಯ್ಕೆಯವರೆಗೂ ಎಲ್ಲವೂ ಇವರ ಹಿಡಿತದಲ್ಲಿತ್ತು. ಹೀಗಾಗಿಯೇ ಭಾರಿ ಭ್ರಷ್ಟಾಚಾರವೂ ಇದರಲ್ಲಿತ್ತು. ಈ ಕಾರಣಕ್ಕಾಗಿಯೇ ಭಾರತೀಯ ಫುಟ್‌ಬಾಲ್‌ ಫೆಡರೇಷನ್ ಅನ್ನು FIFA ಬ್ಯಾನ್ ಮಾಡಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ, ಹದಿನಾಲ್ಕು ವರ್ಷಗಳಿಂದ ಅಲ್ಲಿ ಬೇರುಬಿಟ್ಟಿದ್ದ ರಾಜಕಾರಣಿಯನ್ನು ವಜಾ ಮಾಡಿ ಚುನಾವಣೆ ನಡೆಸಲು ನಿರ್ದೇಶಿಸಬೇಕಾಯಿತು. ಇಂಥ ಸ್ಥಿತಿಯಲ್ಲಿ ಕ್ರೀಡಾಳುಗಳಲ್ಲಿ ಕ್ರೀಡಾಸ್ಫೂರ್ತಿಯನ್ನಾಗಲೀ ಸಾಧನೆಯನ್ನಾಗಲೀ ನಿರೀಕ್ಷಿಸಲು ಸಾಧ್ಯವಿಲ್ಲ. ಸಾಂಸ್ಥಿಕ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ಫುಟ್‌ಬಾಲ್‌ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಈಗಿನಿಂದಲೇ ನಾವು ಆರಂಭಿಸಬೇಕಿದೆ.

ಇದನ್ನೂ ಓದಿ | FIFA World Cup | ವಿಶ್ವ ಕಪ್​ ಫೈನಲ್​ನಲ್ಲಿ ಸೋಲು, ಫ್ರಾನ್ಸ್​ನಲ್ಲಿ ಫುಟ್ಬಾಲ್​ ಅಭಿಮಾನಿಗಳಿಂದ ದೊಂಬಿ

Exit mobile version