Site icon Vistara News

ವಿಸ್ತಾರ ಸಂಪಾದಕೀಯ: ಬಲವಂತದ ಮತಾಂತರದಿಂದ ದೇಶದ ಭದ್ರತೆಗೆ ಅಪಾಯ

Supreme Court

ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್‌, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಿದೆ ಎಂದು ಎಚ್ಚರಿಸಿದೆ.
ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು. ಬಲವಂತದ ಮತಾಂತರ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಹೇಳಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಬಲವಂತದ ಮತಾಂತರ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನವೆಂಬರ್‌ 22ರ ಒಳಗೆ ಅಫಿಡವಿಟ್‌ ಸಲ್ಲಿಸಲು ಸೂಚಿಸಿದೆ. ಬಲವಂತದ ಮತಾಂತರ ಅತ್ಯಂತ ಗಂಭೀರ ಸಮಸ್ಯೆ, ಇದು ಕೇವಲ ದೇಶದ ಭದ್ರತೆಗೆ ಸಂಚಕಾರವಲ್ಲ, ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಕೂಡ ಧಕ್ಕೆ ಉಂಟು ಮಾಡಲಿದೆ ಎಂದಿರುವುದು ಗಮನಾರ್ಹ.

ಇತ್ತೀಚಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಮಂಡಿಸಿದ್ದ ವರದಿಯ ಒಂದು ಅಂಶವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಹಿಂದು ಧರ್ಮದಲ್ಲಿರುವ ದಲಿತರು ಇಸ್ಲಾಂ, ಕ್ರೈಸ್ತ ಮತಕ್ಕೆ ಮತಾಂತರಗೊಂಡ ಬಳಿಕವೂ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕೊಟ್ಟು, ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​​ಗೆ ತಿಳಿಸಿತ್ತು. ಇಸ್ಲಾಂ ಮತ್ತು ಕ್ರಿಶ್ಚಿಯನ್​​ ಧರ್ಮಗಳಲ್ಲಿ ಹಿಂದುಳಿದ ವರ್ಗವಾಗಲೀ, ದಬ್ಬಾಳಿಕೆಗೆ ಒಳಪಟ್ಟ ವರ್ಗವಾಗಲಿ ಇಲ್ಲ ಎಂಬುದು ಸ್ಪಷ್ಟವಾಗಿದ್ದು, ಅದರ ಆಧಾರದ ಮೇಲೆಯೇ ಸಂವಿಧಾನದ 1950ನೇ ಆದೇಶ ಹೊರಬಿದ್ದಿದೆ. ಹಿಂದು ಧರ್ಮದಿಂದ ದಲಿತರು ಇಸ್ಲಾಂ-ಕ್ರಿಶ್ಚಿಯನ್​ ಧರ್ಮಕ್ಕೆ ಸೇರುವುದೇ ಇಲ್ಲಿರುವ ಅಸ್ಪೃಶ್ಯತೆ ಮತ್ತು ದಬ್ಬಾಳಿಕೆಯಿಂದ ಮುಕ್ತಿಪಡೆಯಲು ಎಂಬುದೂ ಅಧ್ಯಯನದಿಂದ ಗೊತ್ತಾಗಿರುವುದರಿಂದ, ಅಲ್ಲಿಗೆ ಹೋದ ಬಳಿಕ ಅವರಿಗೆ ಮೀಸಲಾತಿಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದು ಮನನೀಯ.

ಇದೆಲ್ಲದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಟಿಪ್ಪಣಿ ಗಮನಾರ್ಹವಾಗಿದೆ. ಈ ಟಿಪ್ಪಣಿಯನ್ನು ಸಮರ್ಥಿಸಲು ಹಲವು ನಿದರ್ಶನಗಳು ಸಿಕ್ಕುತ್ತವೆ. ದೇಶದಲ್ಲಿ ಮತಾಂತರ ಹಲವು ಬಗೆಯಲ್ಲಿ ನಡೆಯುತ್ತಿದೆ- ಬಲವಂತದಿಂದ, ಬೆದರಿಕೆಯೊಡ್ಡಿ ಹಾಗೂ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಉತ್ತಮ ಬದುಕು, ಉದ್ಯೋಗ, ಆಹಾರ ಹಾಗೂ ವೈವಾಹಿಕ ಸಂಗಾತಿಯ ಆಮಿಷವನ್ನೂ ಒಡ್ಡಲಾಗುತ್ತಿದೆ. ಆದರೆ ಮತಾಂತರದ ಬಳಿಕ ವಾಸ್ತವಿಕ ಸತ್ಯದ ಅನಾವರಣವಾಗಿ ಭ್ರಮನಿರಸನಗೊಂಡವರಿದ್ದಾರೆ. ಕೇರಳದಲ್ಲಿ ನಡೆದ ಹಲವಾರು ಮತಾಂತರಗಳು ಅಂತಿಮವಾಗಿ ಭಯೋತ್ಪಾದನೆಯತ್ತ ಚಾಚಿಕೊಂಡದ್ದನ್ನು ಗಮನಿಸಬಹುದಾಗಿದೆ. ಕರ್ನಾಟಕಕ್ಕೂ ವ್ಯಾಪಿಸಿದ ಒಂದು ಪ್ರಕರಣದಲ್ಲಿ, ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಯುವತಿಯೊಬ್ಬಳು ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಸಂಘಟನೆಗೆ ಭಾರತದಿಂದ ಯುವ ಉಗ್ರರನ್ನು ರಿಕ್ರ್ಯೂಟ್‌ ಮಾಡುವವಳಾಗಿ ಬದಲಾಗಿದ್ದುದನ್ನು ಗಮನಿಸಬಹುದಾಗಿದೆ. ಕೇರಳ ಹಾಗೂ ತೆಲಂಗಾಣದಿಂದ ಹಲವು ಮುಸ್ಲಿಂ ಯುವಕರನ್ನು ಐಸಿಸ್‌ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಬಂಧಿಸಿ ತನಿಖೆಗೆ ಒಳಪಡಿಸಿದಾಗ, ಭಾರತದಿಂದ ಉಗ್ರರನ್ನು ನೇಮಕ ಮಾಡುವ ಜತೆಗೆ ಹಿಂದು ಯುವತಿಯರನ್ನು ಮತಾಂತರಿಸುವ ಟಾರ್ಗೆಟ್‌ ಕೂಡ ನೀಡಲಾಗಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿತ್ತು. ಇದು ದೇಶದ ಭದ್ರತೆ, ಸಾರ್ವಭೌಮತೆ, ಸಾಮಾಜಿಕ ಸೌಹಾರ್ದ ಎಲ್ಲದಕ್ಕೂ ಧಕ್ಕೆಯುಂಟುಮಾಡುವಂಥದು.

ನಮ್ಮ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇಲ್ಲಿ ಯಾರು ಬೇಕಿದ್ದರೂ ತಮ್ಮ ಧರ್ಮವನ್ನು ಆಚರಿಸಬಹುದು, ಸಾರ್ವಜನಿಕವಾಗಿ ಅದರ ಬಗ್ಗೆ ಒಲವು ವ್ಯಕ್ತಪಡಿಸಬಹುದು, ತಮ್ಮ ಧರ್ಮದ ಶ್ರೇಷ್ಠತೆಯ ಬಗ್ಗೆ ಸಾರಿಕೊಳ್ಳಬಹುದು. ಇದ್ಯಾವುದೂ ಅಪರಾಧವಲ್ಲ. ಆದರೆ ಬೆದರಿಕೆಯೊಡ್ಡಿ ಅಥವಾ ಆಮಿಷವೊಡ್ಡಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವುದು ಮಾತ್ರ ಅಪರಾಧ. ಕೆಲವು ರಾಜ್ಯಗಳು ಇನ್ನೂ ಈ ಬಗ್ಗೆ ಕಾನೂನು ಮಾಡಿಲ್ಲ. ಕರ್ನಾಟಕ ಈ ವರ್ಷ ಈ ಬಗ್ಗೆ ಕಠಿಣ ಕಾನೂನು ರೂಪಿಸಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಮತಾಂತರ ತಡೆಗೆ ಸೂಕ್ತ ನೀತಿ, ಕಠಿಣ ಕಾಯಿದೆಯಿಲ್ಲದ ಹಿನ್ನೆಲೆಯಲ್ಲಿ ಎಗ್ಗಿಲ್ಲದೆ ನಡೆದ ಮಿಷನರಿಗಳ ಮತಾಂತರ ಚಕ್ರದಿಂದಾಗಿ ಪರಿಣಾಮ ಇಂದು ಹಿಂದುಗಳು ಅಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ನಮ್ಮೀ ದೇಶ ಮತಾಂತರದ ಹಾವಳಿಯನ್ನು ಹಲವು ಶತಮಾನಗಳಿಂದ ಉಂಡು ಬಳಲಿದೆ. ಗೋವಾದಲ್ಲಿ ಮತಾಂತರಕ್ಕಾಗಿ ನಡೆದ ಇಂಕ್ವಿಸಿಷನ್‌ಗಳು, ಮೊಘಲರ ಕಾಲದ ಮತಾಂತರಗಳು ಭಯಾನಕವಾಗಿದ್ದವು. ಇಂದು ಮತಾಂತರ ಮಾಡುವುದಕ್ಕಾಗಿಯೇ ಹಿಂದು ಧರ್ಮವನ್ನು ಭಯಾನಕ, ದೌರ್ಜನ್ಯಕಾರಕ ಎಂದು ಬಿಂಬಿಸುವ ಪ್ರಯತ್ನವನ್ನೂ ಹಲವರು ಮಾಡುತ್ತಿದ್ದಾರೆ.

ಹಿಂದು ಧರ್ಮದಿಂದ ಆಚೆ ಹೋದರೆ ಸಮಾನತೆ ಸಿಗುತ್ತದೆ ಎಂದು ಕೆಲವರು ಹೇಳಬಹುದು. ಹಿಂದು ಧರ್ಮದಲ್ಲಿ ಅಸ್ಪೃಶ್ಯತೆ ಮುಂತಾದ ಹೀನ ಸಂಗತಿಗಳು ಇರುವುದು ನಿಜ. ಆದರೆ ಸಮಾಜ ಬದಲಾಗುತ್ತಿದೆ; ಒಂದೆರಡು ದಶಕಗಳ ಹಿಂದೆ ಇದ್ದಂತೆ ಕೂಡ ಈಗಿಲ್ಲ. ಸಂವಿಧಾನ ನೀಡಿದ ಹಕ್ಕುಗಳು, ಬಿಗಿ ಕಾಯಿದೆಗಳು, ಶಿಕ್ಷಣದಿಂದಾಗಿ ಉಂಟಾಗಿರುವ ಅರಿವು, ತಳವರ್ಗಗಳಲ್ಲಿ ಎದ್ದಿರುವ ಸ್ವಾಭಿಮಾನ- ಇವೆಲ್ಲವೂ ಇಂದು ಹಿಂದು ಧರ್ಮದ ಸಾಮಾಜಿಕ ಅನಿಷ್ಠಗಳನ್ನು ಬಹುತೇಕ ತೊಡೆದುಹಾಕಿವೆ. ಅಳಿದುಳಿದದ್ದು ಸಹ ಕೆಲವೇ ವರ್ಷಗಳಲ್ಲಿ ಇಲ್ಲವಾಗಬಹುದು. ಹೀಗಾಗಿ ಅಸಮಾನತೆ ಮತಾಂತರಕ್ಕೆ ಕಾರಣ ಎಂಬ ವಾದ ಬಿದ್ದುಹೋಗುತ್ತದೆ. ಇನ್ನುಳಿದಿರುವುದು ಆಮಿಷ ಹಾಗೂ ಬೆದರಿಕೆ. ಇವೆರಡೂ ಸಮಾಜವಿರೋಧಿ, ಕಾನೂನು ವಿರೋಧಿಯಾಗಿರುವುದರಿಂದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ದೇಶದ ಪ್ರಧಾನಿ ಆಗಿದ್ದವರನ್ನು ಕೊಂದವರ ಬಿಡುಗಡೆ ಸಮರ್ಥನೀಯವೇ?

Exit mobile version