Site icon Vistara News

Terrorists Attack: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ನಾಲ್ವರು ಯೋಧರು ಹುತಾತ್ಮ, 6 ಸೈನಿಕರಿಗೆ ಗಾಯ

Terrorist Attack

Four army personnel killed, six injured in ambush by terrorists in Jammu Kashmir's Kathua: Officials

ಶ್ರೀನಗರ: ಜಮ್ಮು-ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಯೋಧರು ಹಾಗೂ ಉಗ್ರರ ನಡುವೆ ಭಾರಿ ಪ್ರಮಾಣದ ಚಕಮಕಿ (Encounter) ನಡೆದಿದ್ದು, ಉಗ್ರರ ಗುಂಡಿಗೆ (Terrorists Attack) ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ, ಆರು ಯೋಧರು ಗಾಯಗೊಂಡಿದ್ದು, ಅವರನ್ನು ಸೇನೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಠುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ಸೋಮವಾರ (ಜುಲೈ 8) ಮಧ್ಯಾಹ್ನ ದಾಳಿ ನಡೆಸಿದ ಬಳಿಕ ಯೋಧರು ಕಾರ್ಯಾಚರಣೆ ಕೈಗೊಂಡಾಗ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಠುವಾ ಜಿಲ್ಲೆ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದರು. ಸೇನಾ ವಾಹನ ಬರುವುದನ್ನೇ ಕಾದು ಕುಳಿತಿದ್ದ ಹಲವು ಉಗ್ರರು, ವಾಹನದ ಮೇಲೆ ಗ್ರೆನೇಡ್‌ಗಳ ಮೂಲಕ ದಾಳಿ ನಡೆಸಿದ್ದರು. ಇದಾದ ಬಳಿಕ ಯೋಧರು ಕಾಡನ್ನು ಸುತ್ತುವರಿದು, ಉಗ್ರರಿಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ, ಕಾರ್ಯಾಚರಣೆ ವೇಳೆ ಉಗ್ರರು ಸತತವಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾದರು ಎಂದು ತಿಳಿದುಬಂದಿದೆ.

ಕಠುವಾ ಅರಣ್ಯ ಪ್ರದೇಶವನ್ನು ಸುತ್ತುವರಿದ ಯೋಧರು ಉಗ್ರರಿಗಾಗಿ ಶೋಧ ನಡೆಸುತ್ತಿದ್ದರು. ಇದೇ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಯೋಧರು ಹಾಗೂ ಉಗ್ರರ ಮಧ್ಯೆ ಸತತ ಗುಂಡಿನ ಚಕಮಕಿ ನಡೆದಿದೆ. ಆದರೆ, ಉಗ್ರರ ಗುಂಡಿಗೆ ಯೋಧರು ಹುತಾತ್ಮರಾದರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಆರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಭದ್ರತಾ ಸಿಬ್ಬಂದಿಯು ಆರು ಉಗ್ರರನ್ನು (Kashmir Encounter) ಹೊಡೆದುರುಳಿಸಿದ್ದಾರೆ. ಇನ್ನು ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಕುಲ್ಗಾಮ್‌ ಜಿಲ್ಲೆಯ ಫ್ರೈಸಲ್‌ ಚಿನ್ನಿಗಮ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆ ಕೈಗೊಳ್ಳುತ್ತಲೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಆಗ ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು ನಾಲ್ವರು ಉಗ್ರರನ್ನು ಹತ್ಯೆಗೈದಿದ್ದಾರೆ. ಆರು ಉಗ್ರರು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯವರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ನಾಲ್ವರು ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ

Exit mobile version