Site icon Vistara News

France Election: ಫ್ರಾನ್ಸ್ ಚುನಾವಣೆ: ಎಡ ಪಕ್ಷಗಳ ಒಕ್ಕೂಟದ ಮೇಲುಗೈ; ಅತಂತ್ರ ಫಲಿತಾಂಶ

France Election

France Election 2024: Left leads, far-right rises, no majority secured

ಪ್ಯಾರಿಸ್:‌ ಐರೋಪ್ಯ ಒಕ್ಕೂಟದ ದ್ವಿತೀಯ ಬೃಹತ್‌ ಆರ್ಥಿಕತೆ ಹೊಂದಿರುವ ರಾಷ್ಟ್ರವಾದ, ಕೆಲವೇ ದಿನಗಳಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಾಕ್ಷಿಯಾಗುವ ಫ್ರಾನ್ಸ್‌ ಸಾರ್ವತ್ರಿಕ ಚುನಾವಣೆ ಫಲಿತಾಂಶ (France Election) ಪ್ರಕಟವಾಗಿದ್ದು, ಎಡಪಕ್ಷಗಳ ಒಕ್ಕೂಟವೇ ಪಾರಮ್ಯ ಸಾಧಿಸಿದೆ. ಇದರೊಂದಿಗೆ ಆಡಳಿತಾರೂಢ ಇಮ್ಯಾನುಯೆಲ್‌ ಮ್ಯಾಕ್ರನ್‌ (Emmanuel Macron) ನೇತೃತ್ವದ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಆದರೆ, ಯಾವುದೇ ಒಕ್ಕೂಟಕ್ಕೆ ಬಹುಮತ ಸಿಕ್ಕಿಲ್ಲ ಎಂಬುದು ಗಮನಾರ್ಹವಾಗಿದೆ. ಇಷ್ಟಾದರೂ ಎಡಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸಲು ಮುಂದಾಗಿವೆ.

ಫ್ರಾನ್ಸ್‌ ನ್ಯಾಷನಲ್‌ ಅಸೆಂಬ್ಲಿಯ ಒಟ್ಟು 577 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶದ ನಿಖರ ಮಾಹಿತಿಯು ಸೋಮವಾರ (ಜುಲೈ 8) ಲಭ್ಯವಾಗಿದೆ. ನ್ಯೂ ಪಾಪುಲರ್‌ ಫ್ರಂಟ್‌ ನೇತೃತ್ವದ, ಎಡಪಕ್ಷಗಳ ಒಕ್ಕೂಟವು 180 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಲಿ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ನೇತೃತ್ವದ ಒಕ್ಕೂಟವು 160 ಕ್ಷೇತ್ರ ಹಾಗೂ ಮರೀನ್‌ ಲೆ ಪೆನ್‌ ನೇತೃತ್ವದ ನ್ಯಾಷನಲ್‌ ರ‍್ಯಾಲಿ ಪಕ್ಷದ ಮುಂಚೂಣಿಯ ಒಕ್ಕೂಟವು 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ, ಯಾವೊಂದು ಒಕ್ಕೂಟವೂ 289ರ ಮ್ಯಾಜಿಕ್‌ ನಂಬರ್‌ ದಾಟುವಲ್ಲಿ ವಿಫಲವಾಗಿವೆ. ಆದರೆ, ಸರ್ಕಾರ ರಚಿಸಲು ಎಡಪಕ್ಷಗಳಿಗೆ ಹೆಚ್ಚು ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ.

ಎಡಪಂಥೀಯ ಪಕ್ಷಗಳ ಸಂಭ್ರಮಾಚರಣೆ

ಪ್ರಧಾನಿ ಆಯ್ಕೆಗೆ ಎಡಪಕ್ಷಗಳ ಕಸರತ್ತು

ಫ್ರಾನ್ಸ್‌ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಎಡಪಕ್ಷಗಳ ಒಕ್ಕೂಟವು ಕಸರತ್ತು ನಡೆಸುತ್ತಿವೆ. “ಶೀಘ್ರದಲ್ಲೇ ನ್ಯಾಷನಲ್‌ ಪಾಪುಲರ್‌ ಫ್ರಂಟ್‌ ನೇತೃತ್ವದ ಒಕ್ಕೂಟದ ಸಭೆ ನಡೆಸಿ, ನೂತನ ಪ್ರಧಾನಿಯನ್ನು ಒಮ್ಮತದಿಂದ ಆಯ್ಕೆ ಮಾಡುತ್ತೇವೆ” ಎಂದು ಒಕ್ಕೂಟದ ಭಾಗವಾಗಿರುವ ಸೋಷಿಯಲಿಸ್ಟ್‌ ಪಕ್ಷದ ನಾಯಕ ಒಲಿವರ್‌ ಫಾರ್‌ ಅವರು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಬೇರೆ ಪಕ್ಷಗಳೊಂದಿಗೆ ಒಕ್ಕೂಟದ ನಾಯಕರು ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಡಪಕ್ಷಗಳದ್ದೇ ಸರ್ಕಾರ?

ಇಮ್ಯಾನುಯೆಲ್‌ ಮ್ಯಾಕ್ರನ್‌ ನೇತೃತ್ವದ ಒಕ್ಕೂಟವು 160 ಕ್ಷೇತ್ರಗಳನ್ನು ಗೆದ್ದರೂ ಬಹುಮತ ಸಾಧಿಸಲು ಹಲವು ಪಕ್ಷಗಳ ಬೆಂಬಲ ಪಡೆಯಬೇಕಾಗುತ್ತದೆ. ನ್ಯಾಷನಲ್‌ ಪಾಪುಲರ್‌ ಫ್ರಂಟ್‌ ತೀವ್ರತರವಾದ ಎಡಪಂಥೀಯವಾದದಲ್ಲಿ ನಂಬಿಕೆ ಇರಿಸುವ ಪಕ್ಷವಾಗಿದ್ದು, ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರಿಗೆ ಸೋಷಿಯಲಿಸ್ಟ್‌ ಪಕ್ಷದ ಬೆಂಬಲವು ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಎಡಪಕ್ಷಗಳ ನೇತೃತ್ವದ ಸರ್ಕಾರವೇ ಅಸ್ತಿತ್ವಕ್ಕೆ ಬರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಬ್ರಿಟನ್‌ನಲ್ಲಿ ಬಲಪಂಥೀಯ ಸರ್ಕಾರ ಪತನಗೊಂಡು, ಎಡಪಕ್ಷ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲೇ, ಫ್ರಾನ್ಸ್‌ನಲ್ಲೂ ಎಡಪಕ್ಷಗಳೇ ಪಾರಮ್ಯ ಸಾಧಿಸುವ ಲಕ್ಷಣಗಳು ದಟ್ಟವಾಗಿವೆ.

ಇದನ್ನೂ ಓದಿ: Kamala Harris: ಅಮೆರಿಕ ಚುನಾವಣೆ; ಟ್ರಂಪ್‌ಗೆ ಪೈಪೋಟಿ ನೀಡಲು ಬೈಡನ್‌ಗಿಂತ ಕಮಲಾ ಹ್ಯಾರಿಸ್‌ ಸಮರ್ಥ ಎನ್ನುತ್ತವೆ ಸಮೀಕ್ಷೆ!

Exit mobile version