ಬೆಂಗಳೂರು: ಒಂದು ಮೊಟ್ಟೆಗೆ ಕೇವಲ ಒಂದು ರೂಪಾಯಿ (Egg for one rupees) ಎನ್ನುವ ಜಾಹೀರಾತಿಗೆ ಮರುಳಾಗಿ ಮಹಿಳೆಯೊಬ್ಬರು 48,199 ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bangalore News) ನಡೆದಿದೆ. ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು (Advertisements in Social media) ನಂಬಿ ಮೋಸ ಹೋಗಬೇಡಿ ಎನ್ನುವ ಎಚ್ಚರಿಕೆಯ ಕರೆಗಂಟೆಯೂ ಇದಾಗಿದೆ. ಸೈಬರ್ ವಂಚಕರು (Fraud Case) ಹೆಣೆದ ಬಲೆಯಲ್ಲಿ ಬಿದ್ದು ಹಣ ಕಳೆದುಕೊಂಡ ಘಟನೆ ಇದಾಗಿದೆ.
ಬೆಂಗಳೂರಿನ ವಸಂತ ನಗರದ 38 ವರ್ಷದ ಮಹಿಳೆಯೊಬ್ಬರಿಗೆ ಇ-ಮೇಲ್‌ನಲ್ಲಿ ಒಂದು ಜಾಹೀರಾತು ಬಂದಿತ್ತು. ಆ ಇ – ಮೇಲ್ ಬಂದಿದ್ದು ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆಯಿಂದ. ಸಹಜ ಕುತೂಹಲವೆಂಬಂತೆ ಅವರು ಲಿಂಕ್ ಅನ್ನು ಕ್ಲಿಕ್ ಮಾಡಿದದಾರೆ. ಆಗ ಅವರಿಗೆ ಉತ್ಕೃಷ್ಟ ಗುಣಮಟ್ಟದ ಮೊಟ್ಟೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವ ಜಾಹೀರಾತು ಅದರಲ್ಲಿತ್ತು. ಜಾಹೀರಾತಿನಲ್ಲಿ ಮೊಟ್ಟೆಗಳ ವಿಚಾರದಲ್ಲಿ ಆಕರ್ಷಕ ಮಾಹಿತಿಯನ್ನು ನೀಡಿಲಾಗಿತ್ತು.
ಇದರಲ್ಲಿ ಎರಡು ಆಫರ್ ಇತ್ತು
ಒಂದು ಆಫರ್ ಏನೆಂದರೆ ಕೇವಲ 99 ರೂ. ಪಾವತಿಸಿದರೆ 8 ಡಜನ್ ಮೊಟ್ಟೆಗಳನ್ನು ಮನೆಗೆ ತಲುಪಿಸುವುದಾಗಿ ಅದರಲ್ಲಿ ತಿಳಿಸಲಾಗಿತ್ತು. ಅಚ್ಚರಿ ಎಂದರೆ ಅದಕ್ಕೆ ಹೋಮ್ ಡೆಲಿವರಿ ಚಾರ್ಜಸ್ ಕೂಡಾ ಇರಲಿಲ್ಲ. ಅಂದರೆ ಇಲ್ಲಿ ಒಂದು ರೂಪಾಯಿಗೆ ಒಂದು ಮೊಟ್ಟೆ ಸಿಕ್ಕಿದಂತಾಗುತ್ತಿತ್ತು.
ಇನ್ನೊಂದು ಆಫರ್ ಏನೆಂದರೆ ನಮಗೆ 8 ಡಜನ್ ಮೊಟ್ಟೆ ಬೇಡ, ನಾಲ್ಕು ಡಜನ್ ಸಾಕು ಎಂದಾಗಿದ್ದರೆ ಅದು ಕೇವಲ 49 ರೂ.ಗೆ ಸಿಗುತ್ತದೆ ಎಂದು ತಿಳಿಸಲಾಗಿತ್ತು. ಮಹಿಳೆ ಎರಡನೇ ಆಫರನ್ನು ಸ್ವೀಕರಿಸಲು ಮುಂದಾದರು.
ಹಣ ಪಾವತಿಸುವುದಕ್ಕಾಗಿ ಕ್ಲಿಕ್ ಮಾಡಿದಾಗ ಕ್ರೆಡಿಟ್ ಕಾರ್ಡ್ ಮಾಹಿತಿ ತುಂಬುವ ಕಿಂಡಿಗಳು ತೆರೆದುಕೊಂಡವು. ಮಹಿಳೆ ಅತ್ಯುತ್ಸಾಹದಿಂದ ಅದರಲ್ಲಿ ಸೂಚಿಸಿದಂತೆ ಕ್ರೆಡಿಟ್ ಕಾರ್ಡ್‌ನ ಸಿವಿವಿ ಮತ್ತು ಎಕ್ಸ್‌ಪೈರಿ ಡೇಟನ್ನು ತುಂಬಿದರು. ಆಗ ಒಂದು ಒಟಿಪಿ ಬಂತು. ಅದನ್ನೂ ತುಂಬಿದರು.
ಮುಂದಿನ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 48,199 ರೂ. ಕಡಿತಗೊಂಡಿರುವುದಾಗಿ ಮೆಸೇಜ್ ಬಂತು. ಆಗ ಮಹಿಳೆಗೆ ತಾವು ಮೋಸ ಹೋಗಿರುವುದಾಗಿ ತಿಳಿಯಿತು. ಅವರಿಗೆ ಆತಂಕವಾಗಿದ್ದು 48 ಸಾವಿರ ರೂ. ಹೋಗಿದ್ದಕ್ಕಷ್ಟೇ ಅಲ್ಲ. ಅವರ ಅಕೌಂಟ್‌ನಲ್ಲಿ 3.7 ಲಕ್ಷ ರೂ.ಗಳಿದ್ದವು. ವಂಚಕರು ಅದನ್ನೂ ಕಬಳಿಸಬಹುದು ಎಂಬ ಭಯ ಶುರುವಾಯಿತು.
ಅಷ್ಟು ಹೊತ್ತಿಗೆ ದೇವರಂತೆ ಒಂದು ಕರೆ ಬಂತು. ಅದು ಬ್ಯಾಂಕ್‌ನಿಂದ ಬಂದ ಕರೆ. ನಿಮ್ಮ ಖಾತೆಯಿಂದ 48,199 ರೂ. ಡ್ರಾ ಮಾಡಲಾಗಿದೆ. ಇದು ನೀವೇ ಮಾಡಿದ್ದು ಹೌದಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ನವರು ಕರೆ ಮಾಡಿದ್ದರು.
ಆಗ ಮಹಿಳೆ ತಮಗಾದ ಮೋಸವನ್ನು ಬ್ಯಾಂಕ್‌ನ ಗಮನಕ್ಕೆ ತಂದರು. ಬ್ಯಾಂಕ್ ಸಿಬ್ಬಂದಿ ಕೂಡಲೇ ಅವರ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದರು. ಮಹಿಳೆ ಮುಂದೆ ಸೈಬರ್ ಕ್ರೈಮ್ ಸಹಾಯವಾಣಿ (1930)ಗೆ ಕರೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದನ್ನೂ ಓದಿ : Fraud Case: ವರ್ಕ್ ಫ್ರಂ ಹೋಮ್ ಆಮಿಷ, ಐಟಿ ಉದ್ಯೋಗಿಗೆ 4.33 ಲಕ್ಷ ರೂ. ವಂಚನೆ
ಇದೀಗ ಪೊಲೀಸರು ಯಾವ ಖಾತೆಗೆ ಈ ಹಣ ಹೋಗಿದೆ ಎಂಬುದನ್ನು ಪತ್ತೆ ಹಚ್ಚಿ ಆ ಖಾತೆಯನ್ನು ಫ್ರೀಜ್ ಮಾಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಯಾವುದೇ ಕಾರಣಕ್ಕೂ ನೋಂದಾಯಿತವಲ್ಲದ, ವಿಶ್ವಾಸಾರ್ಹವಲ್ಲದ ಆನ್‌ಲೈನ್ ಮಾರ್ಕೆಟಿಂಗ್ ಕಂಪನಿಗಳ ಜತೆಗೆ ವ್ಯವಹಾರ ನಡೆಸಬಾರದು ಎಂದು ಆಗಾಗ ಎಚ್ಚರಿಕೆ ನೀಡಲಾಗುತ್ತಿದೆ.