Site icon Vistara News

Fraud Case : ಪೊಲೀಸ್ ಅಧಿಕಾರಿ ಸೋಗಿನಲ್ಲಿ ಹಲವರಿಗೆ ವಂಚಿಸಿದ್ದ ಯುವತಿ ಸೆರೆ; ಚಿನ್ನಾಭರಣ ವಶ

Cheating News

ಹಾಸನ: ಪೊಲೀಸ್ ಅಧಿಕಾರಿ ಎಂದು ಹೇಳಿ ಚಿನ್ನಾಭರಣ, ಹಣ ಪಡೆದು ಹಲವರಿಗೆ ವಂಚಿಸಿರುವ (Fraud Case) ಪ್ರಕರಣ ವರದಿಯಾಗಿದೆ. ಇಲ್ಲಿನ ವಿಜಯನಗರ ಬಡಾವಣೆ (Hasan Vijayanagara Layout) ಎರಡನೇ ಹಂತದಲ್ಲಿ ಘಟನೆ ನಡೆದಿದೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಲಕ್ಕನಹಳ್ಳಿ ಗ್ರಾಮದ ನಿವೇದಿತಾ. ಎಂ ವಂಚಕಿಯಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಆರೋಪಿ ನಿವೇದಿತಾ ಪೊಲೀಸ್ ಅಧಿಕಾರಿಯೆಂದು ಬೆದರಿಸಿ ಕವನ ಎಂಬುವರಿಂದ ಚಿನ್ನ ಹಾಗೂ ಹಣವನ್ನು ವಸೂಲಿ ಮಾಡಿದ್ದಳು. ಅನುಮಾನ ಬಂದ ಅವರು ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆಯ ವಂಚನೆ ಬಯಲಾಗಿದೆ. ನಿವೇದಿತಾ ಇದೇ ರೀತಿ ಇನ್ನೂ ಹಲವಾರು ಮಂದಿಗೆ ಮೋಸ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೇಗೆ ಮೋಸ?

ಮೋಸಕ್ಕೆ ಒಳಗಾದ ಕವನ ಅವರು ನಾಲ್ಕು ತಿಂಗಳ ಹಿಂದೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವವರೊಂದಿಗೆ ಮದುವೆಯಾಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ತವರು ಮನೆಗೆ ಬಂದು ವಾಸವಿದ್ದರು. ಈ ವೇಳೆ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ವಂಚಕಿ ನಿವೇದಿತಾ ಬಳಿಕ ಸುನೀಲ್ ಹೋಗಿದ್ದರು. ಆಕೆ ಪೊಲೀಸ್ ಎಂದು ನಂಬಿ ನೆರವು ಕೋರಿದ್ದರು.

ಸುನೀಲ್​ ಸಂಸಾರದ ಸಮಸ್ಯೆ ತಿಳಿದುಕೊಂಡ ನಿವೇದಿತಾ ಪೊಲೀಸ್ ಯೂನಿಫಾರ್ಮ್​ನಲ್ಲಿ ಕವನ ಅವರ ಮನೆಗೆ ದಾಳಿ ಮಾಡಿದ್ದಳು. ತಾನು ಎಸ್‌ಪಿ ಹುದ್ದೆಯಲ್ಲಿದ್ದು ವಿಚಾರಣೆಗಾಗಿ ಬಂದಿದ್ದೇನೆ ಎಂದು ಕವನ ಅವರ ಮನೆಯವರಿಗೆ ಬೆದರಿಕೆ ಹಾಕಿದ್ದಳು.

ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೇಸು ಹಾಕುತ್ತೇನೆ ಎಂದು ಕವನ ಅವರನ್ನು ಹೆದರಿಸಿ ಮೊಬೈಲ್ ಪೋನ್ ಕಿತ್ತುಕೊಂಡಿದ್ದಳು. ಅದೇ ರೀತಿ ಸುನೀಲ್‌ನನ್ನು ಕವನ ಅವರ ಮನೆಗೆ ಕರೆದುಕೊಂಡು ಬಂದು ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದಳು. ತಕ್ಷಣವೇ ಡಿವೋರ್ಸ್​ ಕೊಡುವಂತೆ ಬೆದರಿಕೆ ಒಡ್ಡಿದ್ದಳು. ಹೆದರಿದ್ದ ಕವನ 20 ಗ್ರಾಂ ಚಿನ್ನದ ನಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ನಗದು ನೀಡಿದ್ದರು.

ಇದನ್ನೂ ಓದಿ: Naxals in Karnataka : ಕುಕ್ಕೆ ಸುಬ್ರಹ್ಮಣ್ಯ ಸಮೀಪ ಮತ್ತೆ ಕಾಣಿಸಿಕೊಂಡ ನಕ್ಸಲರು

ಮೋಸಗಾರ್ತಿ ಹೋದ ಮೇಲೆ ಅನುಮಾನಗೊಂಡ ಕವನ ಅವರ ಕುಟುಂಬಸ್ಥರು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಬಂಧಿಸಿದಾಗ ಆಕೆಯ ವಂಚನೆಯ ಹವ್ಯಾಸ ಬೆಳಕಿಗೆ ಬಂದಿದೆ.

ಶಾಲೆಗಳಿಗೂ ಹೋಗಿದ್ದ ನಿವೇದಿತಾ

ನಿವೇದಿತಾ ಬಂಧಿಸಿ ತನಿಖೆ ನಡೆಸಿದಾಗ ಆಕೆಯ ವಂಚನೆಯ ಹಲವಾರು ಮುಖಗಳು ಬಹಿರಂಗಗೊಂಡಿವೆ. ತಾನು ಪೊಲೀಸ್ ಅಧಿಕಾರಿ ಎಂದು ಹಲವರಿಗೆ ನಿವೇದಿತಾ ವಂಚಿಸಿದ್ದಳು. ನಿವೇದಿತಾ ಪೊಲೀಸ್ ಅಧಿಕಾರಿ ಎಂದು ನಂಬಿದ್ದ ಹಲವಾರು ಶಾಲೆಗಳ ಆಡಳಿತ ಮಂಡಳಿಗಳು ಅವರನ್ನು ತಮ್ಮಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅಂಥ ಶಾಲೆಗಳಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೆ ತೆರಳಿ ಭಾಷಣ ಮಾಡಿದ್ದಳು ವಂಚಕಿ ನಿವೇದಿತಾ.

Exit mobile version