Site icon Vistara News

TJ Abraham : ಎಸ್ಎಂ ಕೃಷ್ಣರಿಂದ ಹಿಡಿದು ಸಿದ್ದರಾಮಯ್ಯವರೆಗೆ; ಕರ್ನಾಟಕ ರಾಜಕೀಯದ ದೊಡ್ಡ ಹುಲಿಗಳನ್ನೇ ಬೋನಿಗೆ ಬೀಳಿಸಿದ ಟಿ ಜೆ ಅಬ್ರಾಹಂ

TJ Abraham

ಬೆಂಗಳೂರು : ರಾಜ್ಯ ರಾಜ್ಯಕೀಯದಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಡಾ ಹಗರಣದ ಬಗ್ಗೆಯೇ ಚರ್ಚೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಮೈಸೂರಿನ ವಿಜಯನಗರದ ಬಡಾವಣೆಯಲ್ಲಿ 14 ಸೈಟ್​ಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದೇ ವಿವಾದದ ಮೂಲ. ಮೈಸೂರಿನ ಕೆಸರೆಯಲ್ಲಿ ಸ್ವಾಧೀನಪಡಿಸಿಕೊಂಡಿರುವ 3.16 ಗುಂಟೆ ಜಮೀನಿಗೆ ಪರ್ಯಾಯವಾಗಿ ವಿಜಯನಗರದಲ್ಲಿ ಹೆಚ್ಚು ಬೆಲೆಯ ಸೈಟ್​ಗಳನ್ನು ಆಗಿನ ಮುಡಾ ಆಯುಕ್ತ ನಟೇಶ್ ಅವರು ಕೊಟ್ಟಿದ್ದರು. ಅದಕ್ಕೆ ಸಿಎಂ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲಿಗೆ ಆರ್​ಟಿಐ ಕಾರ್ಯಕರ್ತರಾದ ಗಂಗರಾಜು ಅವರು ದೂರು ನೀಡಿದ್ದರು. ಬಳಿಕ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ ಅಬ್ರಾಹಂ (TJ Abraham) ಅವರು ದೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದರು. ಅಲ್ಲದೆ ಅವರು ಟಿ.ಜೆ ಅಬ್ರಾಹಂ, ಪ್ರದೀಪ್​ ಸೇರಿ ಮೂವರು ಸಿಎಂ ವಿರುದ್ಧ ಪ್ಯಾಸಿಕ್ಯೂಷನ್​ಗೆ ದೂರು ನೀಡಲು ಕರ್ನಾಟಕ ರಾಜ್ಯಪಾಲರ (Karnataka Governer) ಅನುಮತಿ ಕೋರಿದ್ದರು. ಶನಿವಾರ ರಾಜ್ಯಪಾಲರು ಅವರಿಗೆ ಕೊಟ್ಟಿ ನೋಟಿಸ್​ ಕೊಟ್ಟಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಟಿ.ಜೆ. ಅಬ್ರಹಾಂ ಕರ್ನಾಟಕದ ರಾಜಕೀಯ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹಾಲಿ ಮುಖ್ಯಮಂತ್ರಿಗಳು ಸೇರಿದಂತೆ ಪ್ರಬಲ ರಾಜಕಾರಣಿಗಳನ್ನು ಎದುರಿಸಲು ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ತನ್ನ ಆಯ್ಕೆಯ ಅಸ್ತ್ರವಾಗಿ ಬಳಸಲು ಹೆಸರುವಾಸಿಯಾಗಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಒಪ್ಪಿಗೆ ನೀಡಬೇಕು ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಆಗಿನ ರಾಜ್ಯಪಾಲರು ನೀಡಿದ್ದ ಅನುಮತಿಯ ಪ್ರಕರಣವನ್ನು ಅವರು ಉಲ್ಲೇಖಿಸಿದ್ದರು.

ಅಬ್ರಹಾಂ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 218 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 17ಎ ಮತ್ತು 19ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದರು.

ಯಾರೆಲ್ಲ ವಿರುದ್ಧ ದೂರು?

ಮುಡಾ ಹಗರಣದಲ್ಲಿ ರಾಜ್ಯದ ಬೊಕ್ಕಸಕ್ಕೆ 45 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಆರೋಪಿಸಿ ಅಬ್ರಹಾಂ ಅವರು ಜುಲೈ 18ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ವರುಣಾ ಶಾಸಕ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಎಸ್.ಯತೀಂದ್ರ, ಮುಡಾ ಆಯುಕ್ತ ಡಿ.ಬಿ.ನಟೇಶ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಬ್ರಾಹಂ ಹೋರಾಟ ಇದೇ ಮೊದಲಲ್ಲ

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಮತ್ತು ಧರಂ ಸಿಂಗ್ ಸೇರಿದಂತೆ ರಾಜ್ಯದ ಪ್ರಬಲ ರಾಜಕಾರಣಿಗಳ ವಿರುದ್ಧ ದೂರು ನೀಡುವ ಮುಲಕ ಅಬ್ರಾಹಂ ಹೆಸರುವಾಸಿಯಾಗಿದ್ದರು.

ರಾಮಲಿಂಗಂ ಕನ್​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಗೆ ವಸತಿ ಯೋಜನೆಯ ಗುತ್ತಿಗೆ ನೀಡಲು ಮಾಜಿ ಸಿಎಂ ಯಡಿಯೂರಪ್ಪ ಲಂಚ ಪಡೆದಿದ್ದು ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಅಬ್ರಾಹಂ 2021ರಲ್ಲಿ ದೂರು ನೀಡಿದ್ರು ಬಿಎಸ್ವೈ ಮತ್ತು ಐಎಎಸ್ ಅಧಿಕಾರಿ ಮತ್ತು ಅವರ ಹಲವಾರು ಹತ್ತಿರದ ಸಂಬಂಧಿಕರು ಸೇರಿದಂತೆ ಎಂಟು ಜನರ ವಿರುದ್ಧ ಅಬ್ರಹಾಂ 2021 ರಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಗುತ್ತಿಗೆ ಪಡೆಯಲು ಯಡಿಯೂರಪ್ಪ ಮತ್ತು ಅವರ ಕುಟುಂಬವು ರಾಮಲಿಂಗಂ ಕನ್​ಸ್ಟ್ರಕ್ಷನ್​ ಕಂಪನಿ ಹಾಗೂ ಇತರ ಕಂಪನಿಗಳಿಂದ ಲಂಚ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಕೋಲ್ಕತಾದ ಶೆಲ್ ಕಂಪನಿಗಳಿಂದ ಬಿಎಸ್​ವೈ ಮೊಮ್ಮಗ 5 ಕೋಟಿ ರೂ.ಗಳು ಸೇರಿದಂತೆ ಒಟ್ಟು 12 ಕೋಟಿ ರೂ.ಗೂ ಹೆಚ್ಚು ಲಂಚ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಬೇಕೆಂದು ಅವರು ಕೋರಿದ್ದರು.

ಬಿ.ವೈ.ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿ, ಅಳಿಯ ಸಂಜಯ್ ಶ್ರೀ, ಸಚಿವ ಎಸ್.ಟಿ.ಸೋಮಶೇಖರ್, ಆಗಿನ ಬಿಡಿಎ ಆಯುಕ್ತ ಮತ್ತು ಐಎಎಸ್ ಅಧಿಕಾರಿ ಜಿ.ಸಿ.ಪ್ರಕಾಶ್, ಚಂದ್ರಕಾಂತ್ ರಾಮಲಿಂಗಂ, ಆಗಿನ ಬಿಡಿಎ ಅಧ್ಯಕ್ಷ ಕೆ.ರವಿ, ಕೆ.ವಿರೂಪಾಕ್ಷಪ್ಪ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗಿನ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಅನುಮತಿ ಕೋರಿದ್ದರು. ಆದರೆ, ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರು.

ಎಸ್​ಎಂ ಕೃಷ್ಣ ವಿರುದ್ಧ ದೂರು

ಅಬ್ರಹಾಂ ಅವರು 2011ರಲ್ಲಿ ಆಗಿನ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅನೇಕ ಎಫ್ಐಆರ್​​ ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ, ಕರ್ನಾಟಕದ ವಿಶೇಷ ನ್ಯಾಯಾಲಯವು ಕೃಷ್ಣ ವಿರುದ್ಧ ತನಿಖೆಗೆ ಆದೇಶಿಸಿತ್ತು.

ಕೃಷ್ಣ ಅವರು 1999 ಮತ್ತು 2004ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿಯಾಗಿ ಅರಣ್ಯ ಪ್ರದೇಶಗಳನ್ನು ಡಿನೋಟಿಫೈ ಮಾಡುವ ನಿರ್ಧಾರ ಅಕ್ರಮ ಗಣಿಗಾರಿಕೆ ಹಗರಣದ ಆರಂಭ ಎಂದು ಆರೋಪಿಸಿದ್ದರು. ಕೃಷ್ಣ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಹಿಂದಿನ ಕ್ಯಾಬಿನೆಟ್ ಸಹೋದ್ಯೋಗಿಗಳ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇವೆಲ್ಲವನ್ನೂ ಆರ್ಟಿಐ ಅಡಿಯಲ್ಲಿ ಪಡೆದ ಮಾಹಿತಿ ಎನ್ನಲಾಗಿತ್ತು. ಎಸ್.ಎಂ.ಕೃಷ್ಣ ಅವರು ಇಲಾಖೆ ಕಾರ್ಯದರ್ಶಿಯ ಸಲಹೆ ಕಡೆಗಣಿಸಿ ಆದೇಶಿಸಿದ್ದಾರೆ. ಇದು ಅಕ್ರಮಗಳಿಗೆ ಕಾರಣವಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: CM Siddaramaiah : ತಮ್ಮ ಮೇಲೆ ತನಿಖೆಗೆ ಆದೇಶಿಸಿದ ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಿಎಂ

ಕೃಷ್ಣ ಅವರಲ್ಲದೆ, ಈಗ ಕೇಂದ್ರ ಸಚಿವರಾದ ಎಚ್​​. ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ಮತ್ತು 11 ಹಿರಿಯ ಅಧಿಕಾರಿಗಳ ವಿರುದ್ಧ ಅಬ್ರಹಾಂ ಅವರು ಪಿತೂರಿ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕೃಷಿ ಪಟ್ಟಾ ಭೂಮಿಯಿಂದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಸಾಗಿಸಲು ತಾತ್ಕಾಲಿಕ ಸಾರಿಗೆ ಪರವಾನಗಿಗಳನ್ನು ನೀಡಲು ಸಿಂಗ್ ಆದೇಶಿಸಿದ್ದಾರೆ, ಇದರಿಂದಾಗಿ ಸರ್ಕಾರಕ್ಕೆ 23.22 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಬ್ರಹಾಂ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಕುಮಾರಸ್ವಾಮಿ ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಹೆಸರಿನಲ್ಲಿ 550 ಎಕರೆ ಭೂಮಿಯನ್ನು ಅಕ್ರಮವಾಗಿ ಗಣಿಗಾರಿಕೆ ಗುತ್ತಿಗೆಗೆ ನೀಡಿದ್ದರು. ಜಂತ್ಕಲ್ ಮೈನಿಂಗ್ ಕಂಪನಿಯೊಂದಿಗೆ ಅಕ್ರಮ ಎಸಗಿದ್ದಾರೆ ಎಂದು ಅವರು ಆ ವೇಳೆ ಆರೋಪಿಸಿದ್ದರು.

Exit mobile version