Site icon Vistara News

ವಿಸ್ತಾರ ಸಂಪಾದಕೀಯ : ಮಾಲಿನ್ಯ ತಡೆದರೆ ಮಾತ್ರ ಮುಂದಿನ ಪೀಳಿಗೆಗೆ ಭವಿಷ್ಯ

Future generation only if pollution is stopped

#image_title

2022ರ ವಿಶ್ವದ ಅತ್ಯಂತ ಕಲುಷಿತ ನಗರಗಳ (Polluted City) ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿರುವ ವಿಶ್ವದ 50 ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳು ಇವೆ! ಸ್ವಿಡ್ಜರ್‌ಲ್ಯಾಂಡ್‌ನ ಐಕ್ಯು ಏರ್ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ ಭಾರತದ ಕಳಪೆ ವಾಯು ಗುಣಮಟ್ಟ ಬೆಳಕಿಗೆ ಬಂದಿದೆ. ಭಾರತವು 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ 8ನೇ ದೇಶವೆಂದು ಗುರುತಿಸಿಕೊಂಡಿರುವುದು ಆತಂಕದ ಸಂಗತಿ. ಇದಕ್ಕೂ ಹಿಂದಿನ ವರ್ಷ ಭಾರತ ಐದನೇ ಸ್ಥಾನದಲ್ಲಿತ್ತು. ಸದ್ಯ ಸ್ವಲ್ಪ ಸುಧಾರಣೆ ಕಂಡಿದೆ ಎಂಬುದು ನಿಜವಾದರೂ, ಅದೇನೂ ಭಾರೀ ಪ್ರಗತಿಯಲ್ಲ. 131 ದೇಶಗಳ 7,300ಕ್ಕೂ ಹೆಚ್ಚು ನಗರಗಳ ಪೈಕಿ ಮಾಲಿನ್ಯದ ವಿಚಾರದಲ್ಲಿ ಭಾರತದ ನಗರಗಳು ಮುಂಚೂಣಿಯಲ್ಲಿವೆ. ಅಗ್ರ 10 ಕಲುಷಿತ ನಗರಗಳ ಪೈಕಿ ಭಾರತದ 6 ನಗರಗಳಿವೆ. ಈ ಅಂಕಿ ಸಂಖ್ಯೆಗಳು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಅತ್ಯಂತ ಕಲುಷಿತ ನಗರಗಳಲ್ಲಿ ದೆಹಲಿ ಹಾಗೂ ಕೋಲ್ಕೊತಾ ಅತ್ಯಂತ ಮೇಲಿವೆ. ಜಾಗತಿಕ ನಗರಗಳ ಪೈಕಿ ಬೆಂಗಳೂರು 440ನೇ ಸ್ಥಾನದಲ್ಲಿರುವುದು ಸ್ವಲ್ಪ ಸಮಾಧಾನಕರ ಎನ್ನಬಹುದು. ಆದರೆ ನಾವೇ ನೋಡುತ್ತಿರುವಂತೆ, ಒಂದೆರಡು ದಶಕಗಳ ಹಿಂದೆ ಉದ್ಯಾನವನಗಳ ಪಟ್ಟಣವಾಗಿದ್ದ, ಕೆರೆಗಳ ನಗರಿಯಾಗಿದ್ದ, ನಿವೃತ್ತರ ಸ್ವರ್ಗವೆನಿಸಿದ್ದ, ಸಮಶೀತೋಷ್ಣ ವಾತಾವರಣ ಹೊಂದಿದ್ದ ಬೆಂಗಳೂರು ಇಂದು ಗಿಜಿಗುಟ್ಟುವ ಟ್ರಾಫಿಕ್‌, ಕೆರೆಗಳ ಒತ್ತುವರಿಯ, ವಿಲೇವಾರಿಯಾಗದ ಕಸದ ರಾಶಿಗಳನ್ನು ಹೊಂದಿದ, ಮುಗಿಯದ ರಸ್ತೆ ಕಾಮಗಾರಿಗಳಿಂದ ಸದಾ ಏಳುತ್ತಿರುವ ಧೂಳಿನ ಸ್ವರ್ಗವಾಗಿದೆ. ಹದತಪ್ಪಿದ ಅಧಿಕಾರಶಾಹಿ, ಅಂಕೆಯೇ ಇಲ್ಲದ ರಿಯಲ್‌ ಎಸ್ಟೇಟ್‌ ಮಾಫಿಯಾ, ಧನದಾಹದ ಜನಪ್ರತಿನಿಧಿಗಳಿಂದಾಗಿ ನರಕವಾಗುವತ್ತ ಧಾವಿಸುತ್ತಿದೆ. ಇದನ್ನು ತಡೆಯದಿದ್ದರೆ ಅಪಾಯ ಕಾದಿದೆ.

ಸಾರಿಗೆ ವಲಯ, ಕೈಗಾರಿಕಾ ಘಟಕಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು, ಕಸ, ತ್ಯಾಜ್ಯ ಸುಡುವುದು ಮುಂತಾದವು ಮಾಲಿನ್ಯದ ಮುಖ್ಯ ಮೂಲಗಳು. ವಿಶ್ವ ಆರೋಗ್ಯ ಸಂಸ್ಥೆ 2021ರಲ್ಲಿ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳ ಅನ್ವಯ, ನಾವು ಇರುವ ಪರಿಸರದ ಪ್ರತಿ ಕ್ಯುಬಿಕ್‌ ಮೀಟರ್‌ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಿಎಂ 2.5 ಸೂಕ್ಷ್ಮಾಣು ಕಣಗಳ ಪ್ರಮಾಣ 5 ಮೈಕ್ರೋಗ್ರಾಂಗಿಂತ ಹೆಚ್ಚಿಗೆ ಇರಬಾರದು. ಆದರೆ ಭಾರತದಲ್ಲಿ ಈ ಪ್ರಮಾಣ 56 ಮೈಕ್ರೋಗ್ರಾಂನಷ್ಟಿದೆ. ಅಂದರೆ ನಿಗದಿತ ಮಾನದಂಡಕ್ಕಿಂತ 11 ಪಟ್ಟು ಹೆಚ್ಚು. ದಿಲ್ಲಿಯಲ್ಲಿ ಈ ಪ್ರಮಾಣ 107 ಮೈಕ್ರೋಗ್ರಾಂನಷ್ಟು, ಅಂದರೆ ನಿಗದಿತ ಮಾನದಂಡಕ್ಕಿಂತ 21 ಪಟ್ಟು ಅಧಿಕವಿದೆ. ಭಾರತದ ಎಲ್ಲ 130 ಕೋಟಿ ಜನರೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಮಾಲಿನ್ಯ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡವನ್ನು ಪಾಲಿಸದೇ ಹೋದಲ್ಲಿ ಪ್ರತಿ ಭಾರತೀಯನ ಜೀವಿತಾವಧಿ 5 ವರ್ಷದಷ್ಟು ಇಳಿಕೆಯಾಗಲಿದೆ; ಅದರಲ್ಲೂ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಮಾಲಿನ್ಯ ಹೊಂದಿರುವ ನವದೆಹಲಿಯಲ್ಲಿ ಜನರ ಜೀವಿತಾವಧಿ 10 ವರ್ಷದಷ್ಟು ಇಳಿಕೆಯಾಗಲಿದೆ ಎಂದು ಷಿಕಾಗೋ ವಿಶ್ವವಿದ್ಯಾಲಯದ ‘ಇಂಧನ ನೀತಿ ಸಂಸ್ಥೆ’ ಕಳೆದ ವರ್ಷ ಬಿಡುಗಡೆ ಮಾಡಿದ್ದ ಸಂಶೋಧನಾ ವರದಿ ಗಂಭೀರ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಆಸ್ಕರ್‌ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ

ಮಾಲಿನ್ಯದ ಪರಿಣಾಮಗಳು ನಮಗೆ ಗೊತ್ತೇ ಇವೆ. ವಾಯುಮಾಲಿನ್ಯದಿಂದ ಪ್ರತಿ ವರ್ಷ ಜಗತ್ತಿನಲ್ಲಿ 24 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಡಬ್ಲ್ಯುಎಚ್‌ಒ ತಿಳಿಸಿತ್ತು. ಒಂದು ವರ್ಷದಲ್ಲಿ ವಿಶ್ವದಾದ್ಯಂತ ಸಂಭವಿಸುವ ಸಾವುಗಳಲ್ಲಿ, ರಸ್ತೆ ಅಪಘಾತಗಳಿಗಿಂತಲೂ ವಾಯುಮಾಲಿನ್ಯದಿಂದ ಆಗುವ ಸಾವುಗಳೇ ಹೆಚ್ಚಂತೆ. ಇನ್ನು ನೀರಿನ ಮಾಲಿನ್ಯ, ಆಹಾರ ಮಾಲಿನ್ಯ ಇತ್ಯಾದಿಗಳನ್ನೂ ಸೇರಿಸಿದರೆ ಮತ್ತಷ್ಟು ಸಂಖ್ಯೆ ಹೆಚ್ಚಬಹುದು. ನಾನಾ ಬಗಯೆ ಕ್ಯಾನ್ಸರ್‌ಗಳು, ಹೃದಯ ಕಾಯಿಲೆಗಳು, ಮಕ್ಕಳಿಗೂ ಕಾಡುವ ಅಸ್ತಮಾ ಇವೆಲ್ಲವೂ ಮಾಲಿನ್ಯದ ಕೊಡುಗೆಗಳೇ ಆಗಿವೆ. ಸರ್ಕಾರ ಮತ್ತು ನಾಗರಿಕ ಸಮಾಜ ಇವೆರಡೂ ಎಚ್ಚರಗೊಂಡರೆ ಮಾತ್ರ ಮಾಲಿನ್ಯ ತಗ್ಗಿಸಿ, ಮುಂದಿನ ತಲೆಮಾರನ್ನು ಅನಾರೋಗ್ಯದ ಕೂಪದಿಂದ ರಕ್ಷಿಸಲು ಸಾಧ್ಯ. ಇದಕ್ಕೆ ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕಿದೆ. ಪೆಟ್ರೋಲಿಯಂ ಬಳಕೆ ಕಡಿಮೆ ಮಾಡಿ ಶುದ್ಧ ಇಂಧನಕ್ಕೆ ಪರಿವರ್ತನೆ (ಜೈವಿಕ ಇಥೆನಾಲ್, ಜೈವಿಕ ಡೀಸೆಲ್ ಅಥವಾ ವಿದ್ಯುನ್ಮಾನ ವಾಹನಗಳ ಹೆಚ್ಚಳ), ಫ್ಯಾಕ್ಟರಿಗಳಿಂದ ಆಗುವ ಮಾಲಿನ್ಯ ತಡೆಗೆ ಕಟ್ಟುನಿಟ್ಟಾದ ಮಾರ್ಗಸೂಚಿ ಜಾರಿ, ಮರಗಿಡಗಳೂ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲಗಳ ಹೊಣೆಯರಿತ ಬಳಕೆ ಮತ್ತು ಅರಣ್ಯೀಕರಣ, ಜಲಮೂಲಗಳ ಸಂರಕ್ಷಣೆ- ಇಂಥ ಕಾರ್ಯಗಳು ಸಾಕಷ್ಟು ನಡೆದರೆ ಮಾತ್ರ ನಮ್ಮ ಭವಿಷ್ಯದ ತಲೆಮಾರು ಮಾಲಿನ್ಯದ ಅಪಾಯದಿಂದ ಪಾರಾಗಬಹುದು.

Exit mobile version