ಭಾರತವು 2023ರ ಸಾಲಿನ ‘ಜಿ20 ಶೃಂಗಸಭೆಯ ಅಧ್ಯಕ್ಷತೆ’ಯನ್ನು ವಹಿಸಿಕೊಂಡಿದ್ದು, ಅದರ ಭಾಗವಾಗಿ ದೇಶದ ವಿವಿಧೆಡೆ ಹಲವು ಸಭೆಗಳು ನಡೆಯುತ್ತಿವೆ. ಜಿ 20 ರಾಷ್ಟ್ರಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮೂರನೇ ಸಭೆ ಮೇ 22, ಸೋಮವಾರದಿಂದ ಮೇ 24, ಬುಧವಾರದವರೆಗೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿದೆ. ಸದಸ್ಯ ರಾಷ್ಟ್ರಗಳ 60 ಗಣ್ಯರು ಈ ಐತಿಹಾಸಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರವಾಸೋದ್ಯಮಕ್ಕೆ ಭವಿಷ್ಯದ ದಿಕ್ಸೂಚಿ ಮತ್ತು ಜಿ20 ಪ್ರವಾಸೋದ್ಯಮ ಸಚಿವರ ಘೋಷಣೆ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳಾಗಲಿವೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಸಭೆಗಳು ನಡೆಯಲಿವೆ. ಈಗಾಗಲೇ ಗುಜರಾತ್‌ನ ಕಛ್ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಎರಡು ಸಭೆ ನಡೆದಿದ್ದು, ಕೊನೆಯ ಸಭೆಯು ಗೋವಾದಲ್ಲಿ ಜೂನ್ ತಿಂಗಳಲ್ಲಿ ನಡೆಯಲಿದೆ. ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ ಮೂರನೇ ಸಭೆ ನಡೆಯುತ್ತಿರುವುದು ಭಾರತದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ, ಈ ಅಂತಾರಾಷ್ಟ್ರೀಯ ಸಭೆಯ ಮೂಲಕ ಭಾರತವು ನೆರೆಯ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ದೇಶದ ಮುಕುಟ. ಆದರೆ, ನೆರೆಯ ಪಾಕಿಸ್ತಾನ ಮಾತ್ರ ಭಾರತದ ಸಾರ್ವಭೌಮತದ್ವ ನೆಲವನ್ನು ವಿವಾದಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಇದಕ್ಕೆ ಪಕ್ಕದ ನೆರೆಯ ಚೀನಾ ಕುಮ್ಮಕ್ಕು ಇದ್ದೇ ಇದೆ. ಕಣಿವೆ ರಾಜ್ಯದಲ್ಲಿ ಜಿ20 ಸಭೆಯನ್ನು ವಿಫಲಗೊಳಿಸುವ ಪ್ರಯತ್ನಗಳನ್ನು ಪಾಕಿಸ್ತಾನ ಮಾಡುತ್ತಲೇ ಬಂದಿದೆ. ಆದರೆ, ಈವರೆಗೂ ಅದು ಯಶಸ್ವಿಯಾಗಿಲ್ಲ. ಜಿ20 ಗ್ರೂಪ್‌ನ ಪ್ರಮುಖ ರಾಷ್ಟ್ರವಾಗಿ ಚೀನಾ ಕೂಡ ಕ್ಯಾತೆ ತೆಗೆದಿದೆ. ‘ಕಾಶ್ಮೀರವು ವಿವಾದಿತ ಪ್ರದೇಶ’ವಾಗಿರುವುದರಿಂದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಪಾಕಿಸ್ತಾನದ ಕುತಂತ್ರದ ಪ್ರಯತ್ನವಾಗಿ ಇಸ್ಲಾಮಿಕ್ ರಾಷ್ಟ್ರ ಸಂಘಟನೆ(OIC)ಯ ಕೆಲವು ರಾಷ್ಟ್ರಗಳು ಕೂಡ ಇದೇ ಹಾದಿ ತುಳಿದಿವೆ. ಸೌದಿ ಅರೇಬಿಯಾ ಹಾಗೂ ಟರ್ಕಿ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ನೋಂದಣಿ ಮಾಡಿಕೊಂಡಿಲ್ಲ.
ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರವಾಗಿ ಭಾರತವು ತನ್ನ ದೇಶದ ಯಾವುದೇ ಭಾಗದಲ್ಲಿ ಸಭೆಗಳನ್ನು ನಡೆಸುವ ಪರಮಾಧಿಕಾರವನ್ನು ಹೊಂದಿರುತ್ತದೆ. ಹಾಗಿದ್ದೂ, ಚೀನಾ, ಟರ್ಕಿ ಮತ್ತು ಸೌದಿ ಅರೆಬಿಯಾ ರಾಷ್ಟ್ರಗಳು ಈ ವಿಷಯವನ್ನು ವಿವಾದಗೊಳಿಸುತ್ತಿರುವುದರ ಮೇಲ್ನೋಟಕ್ಕೆ ರಾಜತಾಂತ್ರಿಕ ಹಿನ್ನಡೆ ಎನಿಸಬಹುದು. ಆದರೆ, ಅದರಿಂದ ಅಂಥ ವ್ಯತ್ಯಾಸವೇನೂ ಆಗಲಾರದು. ಯಾಕೆಂದರೆ, ಅದೇ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಬಾಂಗ್ಲಾದೇಶ, ಯುಎಇನಂಥ ಇತರ ರಾಷ್ಟ್ರಗಳು ಭಾಗವಹಿಸುತ್ತಿವೆ. ಮೇಲಾಗಿ, ಯುಎಇಯಂತೂ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದು ಭಾರತದ ನಿರ್ಣಾಯಕ ನಾಯಕತ್ವಕ್ಕೆ ಸಂದ ಜಯವೂ ಹೌದು.
ಸದಾ ಉಗ್ರ ಚಟುವಟಿಕೆಗಳ ತಾಣವೇ ಆಗಿದ್ದ ಜಮ್ಮು-ಕಾಶ್ಮೀರವು ಭಾರತದ ಇತರ ರಾಜ್ಯಗಳಂತೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಅಡ್ಡಿಯಾಗಿದ್ದ, ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸಿ, ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಮರು ಪ್ರತಿಷ್ಠಾಪಿಸಲಾಗಿದೆ. ಜತೆಗೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ಗಳಲ್ಲಿ ರಾಜ್ಯವನ್ನು ವಿಭಜಿಸಿ, ಆಡಳಿತಾತ್ಮಕವಾಗಿ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರದ ನಿಗಾದಲ್ಲಿ ಆಡಳಿತ ನಡೆಯುತ್ತಿದೆ. ಪರಿಣಾಮ ಉಗ್ರ ಚಟುವಟಿಕೆಗಳು ಮತ್ತು ಉಗ್ರರ ಸಂಖ್ಯೆಯ ಗಣನೀಯವಾಗಿ ಕಡಿಮೆಯಾಗಿದೆ. ಕೈಯಲ್ಲಿ ಬಂದೂಕು, ಬಾಂಬ್ ಹಿಡಿಯುತ್ತಿದ್ದ ಸ್ಥಳೀಯ ಯುವಕರು, ಆ ಮನಸ್ಥಿತಿಯಿಂದ ಹೊರ ಬಂದು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ಭಾರತದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ.
ಇದನ್ನೂ ಓದಿ: G20 Meeting: ಕಾಶ್ಮೀರದಲ್ಲಿ ಸೋಮವಾರದಿಂದ ಜಿ20 ಸಭೆ; ಹೇಗಿದೆ ಸಿದ್ಧತೆ? ಹೇಗಿದೆ ಭದ್ರತೆ?
ಪ್ರವಾಸೋದ್ಯಮದ ಪ್ರಮುಖ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಸಭೆಯನ್ನು ಆಯೋಜಿಸುವ ಮೂಲಕ ಭಾರತವು ತನ್ನ ಹಕ್ಕುದಾರಿಕೆಯನ್ನು ಪ್ರತಿಷ್ಠಾಪಿಸಿದೆ. ಚೀನಾ ಸೇರಿ ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೂ, ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತವು ಈ ಕುರಿತು ಹೆಚ್ಚು ವಿಚಲಿತವಾಗಬೇಕಾದ ಅಗತ್ಯವೂ ಇಲ್ಲ. ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಆ ಕೆಲಸವನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವುದರತ್ತ ಮಾತ್ರವೇ ಗಮನಹರಿಸಿದರೂ ಸಾಕು. ಇಡೀ ಜಗತ್ತಿನ ಮುಂದೆ ಭಾರತದ ಶಕ್ತಿ, ಸಂಸ್ಕೃತಿ ಪರಿಚಯಿಸುವ ಗುರಿ ತಲುಪಿದಂತಾಗುತ್ತದೆ.