Site icon Vistara News

G7 Summit : ನಿಮ್ಮ ಭೇಟಿಯಿಂದ ಸಂತೋಷವಾಗಿದೆ; ಅಮೆರಿಕ ಅಧ್ಯಕ್ಷ ಬೈಡೆನ್​ ಭೇಟಿ ಬಗ್ಗೆ ಮೋದಿ ಉತ್ಸಾಹ

G7 Summit

ಅಪುಲಿಯಾ: ಜಿ 7 ಶೃಂಗಸಭೆಯ (G7 Summit) ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ಇಟಲಿಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಅನೌಪಚಾರಿಕವಾಗಿ ಭೇಟಿಯಾದರು. ಭಾರತ ಮತ್ತು ಯುಎಸ್ “ಜಾಗತಿಕ ಒಳಿತನ್ನು ಮತ್ತಷ್ಟು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತವೆ” ಈ ಭೇಟಿಯ ಬಳಿಕ ಮೋದಿ ಹೇಳಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಿಎಂ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಯುಎಸ್ ಅಧ್ಯಕ್ಷರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷವಾಗಿದೆ ಎಂದು ಬರೆದಿದ್ದಾರೆ.

ಜೋ ಬೈಡೆನ್​, ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದ ಸಂಗತಿ. ಜಾಗತಿಕ ಒಳಿತಿಗಾಗಿ ಭಾರತ ಮತ್ತು ಯುಎಸ್ಎ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ” ಎಂದು ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ತಮ್ಮ ಸಭೆಯಲ್ಲಿ, ಪಿಎಂ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸುವ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ರಕ್ಷಣಾ ಸಹಯೋಗವು ಚರ್ಚೆಯಲ್ಲಿ ಪ್ರಮುಖ ವಿಷಯವಾಗಿತ್ತು. ಉಭಯ ನಾಯಕರು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಚರ್ಚೆಯ ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳ ವೃದ್ಧಿಗೂ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

ಜಿ 7 ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆವು. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಅನ್ನು ಒಂದುಗೂಡಿಸುವ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಅವರಲ್ಲಿ ಅತ್ಯುತ್ಸಾಹವಿದೆ. ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು ವರ್ಷದಲ್ಲಿ ನಾಲ್ಕನೇ ಭೇಟಿ

ಒಂದು ವರ್ಷದಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿಯವರ ನಾಲ್ಕನೇ ಸಭೆ ಇದಾಗಿದೆ. ಯುವಕರಲ್ಲಿ ಸಂಶೋಧನಾ ಜಾಯಮಾನ ಉತ್ತೇಜಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದ್ದಾರೆ.

ಜಿ 7 ಶೃಂಗಸಭೆಯ ಹೊರತಾಗಿ ಪ್ರಧಾನಿ ಮೋದಿ ಅವರು ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಭೇಟಿಯಾದರು. ವಿಶೇಷವೆಂದರೆ, ಭಾರತವು ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ವಿದೇಶಿ ಆಹ್ವಾನಿತ ದೇಶವಾಗಿ ಭಾಗವಹಿಸಿದೆ.

ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್​​ನಲ್ಲಿ ಶೃಂಗಸಭೆ ನಡೆದಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Exit mobile version