Site icon Vistara News

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Gold Rate

ಬೆಂಗಳೂರು: ದೇಶದ ವಿತ್ತೀಯ ಕೊರತೆ (ಸಿಎಡಿ) ಮೇಲೆ ಪರಿಣಾಮ ಬೀರುವಂಥ ಭಾರತದ ಚಿನ್ನದ (Gold Rate) ಆಮದು 2024-25ರ ಏಪ್ರಿಲ್-ಜುಲೈ ಅವಧಿಯಲ್ಲಿ 4.23% ರಷ್ಟು ಇಳಿದು 10 ಲಕ್ಷ ಕೋಟಿ ರೂಪಾಯಿಗೆ ನಿಂತಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. 2023ರ ಏಪ್ರಿಲ್-ಜುಲೈನಲ್ಲಿ ಆಮದು 11 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಜುಲೈನಲ್ಲಿ ಆಮದು ಪ್ರಮಾಣ ಶೇ.1.06ರಷ್ಟು ಇಳಿಕೆಯಾಗಿದ್ದು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಒಳಬರುವ ಚಿನ್ನದ ಪ್ರಮಾಣವು ಜೂನ್ (-38.66%) ಮತ್ತು ಮೇ (-9.76%) ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿತ್ತು. ಏಪ್ರಿಲ್​​ನಲ್ಲಿ ಆಮದು 61 ಸಾವಿರ ಕೋಟಿ ರೂಪಾಯಿಯಷ್ಟಿತ್ತು. ಇದು 2023 ರ ಏಪ್ರಿಲ್​​ನಲ್ಲಿ 86 ಸಾವಿರ ಕೋಟಿ ರೂಪಾಯಿ ಆಗಿತ್ತು.

ಆಭರಣ ವ್ಯಾಪಾರಿಯೊಬ್ಬರ ಪ್ರಕಾರ, ಬೆಲೆ ಏರಿಕೆಯು ಆಮದು ಕಡಿಮೆ ಮಾಡುತ್ತದೆ. ಆದರೆ ಭಾರತದಲ್ಲಿ ಹಬ್ಬದ ಋತುವು ಪ್ರಾರಂಭವಾಗುವುದರಿಂದ ಮತ್ತು ಆಮದು ಸುಂಕ ಕಡಿತದ ಪ್ರಯೋಜನವೂ ಇರುವುದರಿಂದ ಸೆಪ್ಟೆಂಬರ್ ನಿಂದ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಸಲಾಗಿದ್ದು ಇದರ ಪ್ರಯೋಜನ ಮಾರುಕಟ್ಟೆ ಮೇಲೆ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದು ಆಗಸ್ಟ್ 14ರಂದು ಡೆಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 300 ರೂ.ಏರಿಕೆಯಾಗಿದ್ದು ಒಟ್ಟು 73,150 ರೂಪಾಯಿಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಏರಿಕೆಯಾಗಿ 3.8 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಸ್ವಿಟ್ಜರ್ಲೆಂಡ್ ಚಿನ್ನದ ಆಮದಿನ ಅತಿದೊಡ್ಡ ಮೂಲವಾಗಿದ್ದು, ಸುಮಾರು 40% ಪಾಲನ್ನು ಹೊಂದಿದೆ. ನಂತರ ಯುಎಇ (16% ಕ್ಕಿಂತ ಹೆಚ್ಚು) ಮತ್ತು ದಕ್ಷಿಣ ಆಫ್ರಿಕಾ (ಸುಮಾರು 10%). ರಷ್ಟು ಚಿನ್ನವನ್ನು ಭಾರತಕ್ಕೆ ರಫ್ತು ಮಾಡುತ್ತದೆ. ದೇಶದ ಒಟ್ಟು ಆಮದಿನಲ್ಲಿ ಈ ಚಿನ್ನದ ಪಾಲು ಶೇ.5ರಷ್ಟಿದೆ.

ಚಿನ್ನದ ಆಮದಿನಲ್ಲಿ ಕುಸಿತದ ಹೊರತಾಗಿಯೂ, ದೇಶದ ವ್ಯಾಪಾರ ಕೊರತೆ (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) ಜುಲೈನಲ್ಲಿ 23.5 ಬಿಲಿಯನ್ ಡಾಲರ್ ಮತ್ತು ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 85.58 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಬಳಕೆದಾರ ರಾಷ್ಟ್ರವಾಗಿದೆ. ಆಮದುಗಳು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ನೋಡಿಕೊಳ್ಳುತ್ತವೆ.

ಇದನ್ನೂ ಓದಿ: Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

ಈ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ರತ್ನ ಮತ್ತು ಆಭರಣ ರಫ್ತು ಶೇಕಡಾ 7.45 ರಷ್ಟು ಕುಗ್ಗಿದ್ದು, 9.1 ಬಿಲಿಯನ್ ಡಾಲರ್​ಗೆ ತಲುಪಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಭಾರತವು 5.7 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ 0.6% ವಿತ್ತೀಯ ಕೊರತೆಯನ್ನು ದಾಖಲಿಸಿದೆ. 2024ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು 23.2 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ 0.7% ಕ್ಕೆ ಇಳಿದಿದೆ.

ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶವು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳು ಮತ್ತು ಇತರ ಪಾವತಿಗಳ ಮೌಲ್ಯವು ಸರಕು ಮತ್ತು ಸೇವೆಗಳ ರಫ್ತು ಮತ್ತು ಆಮದಿನ ಮೌಲ್ಯವನ್ನು ಮೀರಿದಾಗ ವಿತ್ತೀಯ ಕೊರತೆ ಉಂಟಾಗುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಬೆಳ್ಳಿ ಆಮದು 2024 ರ ಏಪ್ರಿಲ್-ಜುಲೈ ಅವಧಿಯಲ್ಲಿ 648.44 ಮಿಲಿಯನ್ ಡಾಲರ್​ಗೆ ಏರಿದೆ.

Exit mobile version