Site icon Vistara News

HAL : ಎಚ್​ಎಎಲ್​ನಿಂದ 34 ಹೆಲಿಕಾಪ್ಟರ್​ ಖರೀದಿಸಿದ ರಕ್ಷಣಾ ಇಲಾಖೆ

HAL

ನವದೆಹಲಿ: ಭಾರತೀಯ ಸೇನೆ ಮತ್ತು ಕೋಸ್ಟ್ ಗಾರ್ಡ್​ಗಾಗಿ 34 ದೇಶೀಯ ಸುಧಾರಿತ ಲಘು ಹೆಲಿಕಾಪ್ಟರ್​ಗಳನ್ನು ಖರೀದಿಸಲು ಕೇಂದ್ರ ರಕ್ಷಣಾ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ 8,073 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. 34 ಧ್ರುವ್ ಎಂಕೆ 3 ಹೆಲಿಕಾಪ್ಟರ್​ಗಳ ಪೈಕಿ ಭಾರತೀಯ ಸೇನೆಗೆ 25 ಮತ್ತು ಕೋಸ್ಟ್ ಗಾರ್ಡ್​ಗೆ ಉಳಿದ 9 ಹೆಲಿಕಾಪ್ಟರ್​ಗಳು ಸಿಗಲಿವೆ.

ಎಎಲ್ಎಚ್ (ಸುಧಾರಿತ ಲಘು ಹೆಲಿಕಾಪ್ಟರ್) ಧ್ರುವ್ ಎಂಕೆ 3 ಯುಟಿ (ಯುಟಿಲಿಟಿ) ಎಂಬ ಭಾರತೀಯ ಸೇನೆಯ ಆವೃತ್ತಿಯ ಹೆಲಿಕಾಪ್ಟರ್​ಗಳನ್ನು ಸಿದ್ಧಪಡಿಸಿದೆ. ಅದು ಶೋಧ ಕಾರ್ಯ ಮತ್ತು ಸೈನಿಕರ ಸಾಗಣೆ, ಆಂತರಿಕ ಸರಕು ಸಾಗಣಿ, ಅಪಘಾತ ಸಂದರ್ಭದಲ್ಲಿ ಸ್ಥಳಾಂತರಂಥ ಕೆಲಸಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಿಯಾಚಿನ್ ಹಿಮನದಿ ಮತ್ತು ಲಡಾಖ್​ನಂಥ ಎತ್ತರದ ಪ್ರದೇಶಗಳಲ್ಲಿ ಇದು ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಕ್ಯಾಬಿನೆಟ್ ಸಮಿತಿಯ (ಸಿಸಿಎಸ್) ಅನುಮೋದನೆಯ ಪರಿಣಾಮವಾಗಿ, ರಕ್ಷಣಾ ಸಚಿವಾಲಯವು ಮಾರ್ಚ್ 13 ರಂದು ಎಚ್ಎಎಲ್​ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 34 ಸುಧಾರಿತ ಲಘು ಹೆಲಿಕಾಪ್ಟರ್​ಗಳು (ಎಎಲ್ಎಚ್) ಧ್ರುವ್ ಎಂಕೆ 3 ಮತ್ತು ಭಾರತೀಯ ಸೇನೆ ಆವೃತ್ತಿ (25 ಎಎಲ್ಎಚ್) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (09 ಎಎಲ್ಎಚ್) ಗಾಗಿ ಒಟ್ಟು 8073.17 ಕೋಟಿ ರೂ.ಗಳ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡು ಖರೀದಿ ಯೋಜನೆಗಳಿಗೆ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಕಳೆದ ವಾರ ಅನುಮೋದನೆ ನೀಡಿತ್ತು.

ರಕ್ಷಣಾ ಸಚಿವಾಲಯದ ಪ್ರಕಾರ, ಎಎಲ್ಎಚ್ ಎಂಕೆ 3 ಎಂಆರ್ (ಕಡಲ ತಡಿ) – ಕೋಸ್ಟ್ ಗಾರ್ಡ್ ಆವೃತ್ತಿ – ಕಡಲ ಕಣ್ಗಾವಲು ಮತ್ತು ಅಂತರ್​​ಸಂಪರ್ಕ, ಶೋಧ ಕಾರ್ಯ, ರಾಪೆಲ್ಲಿಂಗ್ ಕಾರ್ಯಾಚರಣೆಗಳು, ಸರಕು ಮತ್ತು ಸಿಬ್ಬಂದಿ ಸಾಗಣೆ, ಬಾಹ್ಯ ಸರಕು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸಮುದ್ರ ಮತ್ತು ಭೂಮಿಯ ಮೇಲಿನ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳನ್ನೂ ಮೀರಿ ಇದು ಕೆಲಸ ಮಾಡುತ್ತದೆ.

ಉದ್ಯೋಗ ಸೃಷ್ಟಿ

ಈ ಯೋಜನೆಯು ತನ್ನ ಅವಧಿಯಲ್ಲಿ ಅಂದಾಜು 190 ಲಕ್ಷ ಮಾನವ-ಗಂಟೆಗಳ ಉದ್ಯೋಗ ಸೃಷ್ಟಿಸುತ್ತದೆ. ಇದು 200 ಕ್ಕೂ ಹೆಚ್ಚು ಎಂಎಸ್ಎಂಇಗಳಿಂದ ಉಪಕರಣಗಳ ಪೂರೈಕೆಗೆ ನೆರವಾಗುತ್ತದೆ. ಇದು ಈ ವಲಯದಲ್ಲಿ ಉದ್ಯೋಗ ಸೃಷ್ಟಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Exit mobile version