ಹೊಸದಿಲ್ಲಿ: ವಿವಿಧ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಇತರ ರೈತ ಗುಂಪುಗಳು ಇಂದು ‘ಗ್ರಾಮೀಣ ಭಾರತ ಬಂದ್’ಗೆ (Grameen Bharat Bandh) ಕರೆ ನೀಡಿದ್ದು, ರೈತ ಹೋರಾಟ (Delhi Farmers protest) ಜೋರಾಗಿರುವ ಹರಿಯಾಣ- ದಿಲ್ಲಿ ಗಡಿ ಪ್ರದೇಶದಲ್ಲಿ ನಿತ್ಯ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‌ಪಿ) ಕಾನೂನುಬದ್ಧಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಹಿನ್ನೆಲೆಯಲ್ಲಿ ಶುಕ್ರವಾರ, ಫೆಬ್ರವರಿ 16ರಂದು ಬಂದ್ ಅಥವಾ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವಂತೆ, ಗ್ರಾಮೀಣ ಭಾರತ್ ಬಂದ್‌ನಲ್ಲಿ ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಒಗ್ಗೂಡಿ ಭಾಗವಹಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.
ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಗ್ರಾಮೀಣ ಭಾರತ ಬಂದ್ ನಡೆಯಲಿದ್ದು, ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ʼಚಕ್ಕಾ ಜಾಮ್ʼನಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಗುರುವಾರ ತಡರಾತ್ರಿ ಚಂಡೀಗಢದಲ್ಲಿ ಮೂವರು ಕೇಂದ್ರ ಸಚಿವರು ಮತ್ತು ಪ್ರತಿಭಟನಾ ನಿರತ ರೈತ ಸಂಘಟನೆಗಳ ಮುಖಂಡರ ನಡುವಿನ ಮ್ಯಾರಥಾನ್ ಮಾತುಕತೆ ಯಾವುದೇ ನಿರ್ಣಯವಿಲ್ಲದೆ ಮುಕ್ತಾಯಗೊಂಡಿತು. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಚರ್ಚೆಯನ್ನು “ಸಕಾರಾತ್ಮಕ” ಎಂದು ಬಣ್ಣಿಸಿದರು. ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದರು. ಪಂಜಾಬ್ ಮತ್ತು ಹರಿಯಾಣದ ಎರಡು ಗಡಿಗಳಲ್ಲಿ ನಾವು ಮುಷ್ಕರ ಮುಂದುವರಿಸುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಹಿಟ್ ಆಂಡ್ ರನ್ ಕಾನೂನು ವಿರೋಧಿಸಿರುವ ಪಂಜಾಬ್ ರೋಡ್‌ವೇಸ್ ಮತ್ತು ಪಿಆರ್‌ಟಿಸಿಗೆ ಸಂಯೋಜಿತವಾಗಿರುವ ಚಾಲಕ ಮತ್ತು ಕಂಡಕ್ಟರ್ ಯೂನಿಯನ್‌ಗಳು ಭಾರತ್ ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ ಸುಮಾರು 3,000 ಸರ್ಕಾರಿ ಬಸ್‌ಗಳು ಶುಕ್ರವಾರ ರಸ್ತೆಯಿಂದ ಹೊರಗುಳಿಯಲಿವೆ. ಸೆಕ್ಷನ್ 106(2)BNS ಅಡಿಯಲ್ಲಿ ಹಿಟ್ ಮತ್ತು ರನ್ ಕಾನೂನು ಅಪಘಾತಗಳಲ್ಲಿ ಭಾಗಿಯಾಗಿರುವ ಚಾಲಕರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹ 7 ಲಕ್ಷ ದಂಡ ಸೇರಿದಂತೆ ಕಠಿಣ ದಂಡವನ್ನು ಪ್ರಸ್ತಾಪಿಸುತ್ತದೆ. ರಾಷ್ಟ್ರವ್ಯಾಪಿ ಭಾರತ್ ಬಂದ್ ಕರೆಗೆ ಬೆಂಬಲ ನೀಡುವುದರ ಜೊತೆಗೆ, ಪಂಜಾಬ್ ಸರ್ಕಾರಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಉತ್ತಮ ಭದ್ರತೆ ಮತ್ತು ಸೌಲಭ್ಯಗಳನ್ನು ಕೋರಿದ್ದಾರೆ.
ಭಾರತ ಬಂದ್ ಹಿನ್ನೆಲೆಯಲ್ಲಿ ದಿಲ್ಲಿಯ ಗೌತಮ್ ಬುದ್ಧ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಅನಧಿಕೃತ ಸಾರ್ವಜನಿಕ ಸಭೆಗಳನ್ನು ನಿಷೇಧಿಸುವುದು ಸೇರಿದಂತೆ ನಿರ್ಬಂಧಗಳನ್ನು ವಿಧಿಸಿದ್ದಾರೆ. ದೆಹಲಿಗೆ ಹೋಗುವ ಮತ್ತು ನೋಯ್ಡಾದ ಟ್ರಾಫಿಕ್‌ಗಳಿಂದ ಬರುವ ಪ್ರಯಾಣಿಕರಿಗೆ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದು, ಅನಾನುಕೂಲತೆಯನ್ನು ತಪ್ಪಿಸಲು ಸಾಧ್ಯವಾದಷ್ಟು ಮೆಟ್ರೋ ರೈಲು ಸೇವೆಯನ್ನು ಆರಿಸಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.
ಸಾರಿಗೆ, ಕೃಷಿ ಚಟುವಟಿಕೆಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MNREGA) ಗ್ರಾಮೀಣ ಕೆಲಸಗಳು, ಖಾಸಗಿ ಕಚೇರಿಗಳು, ಹಳ್ಳಿಗಳ ಅಂಗಡಿಗಳು ಮತ್ತು ಗ್ರಾಮೀಣ ಕೈಗಾರಿಕೆ ಮತ್ತು ಸೇವಾ ವಲಯದ ಸಂಸ್ಥೆಗಳು ಇಂದು ರೈತ ಸಂಘಗಳ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಮುಚ್ಚುವ ನಿರೀಕ್ಷೆಯಿದೆ. ರಸ್ತೆಗಳು ಮತ್ತು ಸಾರಿಗೆ ಅಸ್ತವ್ಯಸ್ತ ಆಗುವ ಸಾಧ್ಯತೆಯಿದೆ. ಸದ್ಯಕ್ಕೆ ಬ್ಯಾಂಕ್‌ಗಳು ಹಾಗೂ ಶಾಲೆಗಳಿಗೆ ರಜೆ ಘೋಷಿಸಿಲ್ಲ.
ಇದನ್ನೂ ಓದಿ: Delhi Farmers protest: ರೈತರಿಗೆ ಬೆಂಬಲ ಬೆಲೆ ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್ 2007ರಲ್ಲಿ ಏನು ಹೇಳಿತ್ತು ನೋಡಿ!