ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು (GST Collection) 2024 ರ ಜನವರಿಯಲ್ಲಿ 10.4% ಏರಿಕೆಯಾಗಿದ್ದು ಒಟ್ಟು 1.72 ಲಕ್ಷ ಕೋಟಿ ರೂ.ಗೆ ತಲುಪಿದೆ. ಈ ಲೆಕ್ಕಾಚಾರವು ಜನವರಿ 31, 2024 ರ ಸಂಜೆ 5 ಗಂಟೆಯವರೆಗಿನದ್ದಾಗಿದೆ. ಹೀಗಾಗಿ ಅಂತಿಮ ಸಂಖ್ಯೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಅಂಕಿ ಅಂಶಗಳು ಮುಂದಿನ ಕೆಲವು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
1,72,129 ಕೋಟಿ ರೂ.ಗಳೊಂದಿಗೆ, ಜಿಎಸ್ಟಿ ಸಂಗ್ರಹವು (GST Collection) ಎರಡನೇ ಅತಿ ಹೆಚ್ಚು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ 1.7 ಲಕ್ಷ ಕೋಟಿ ರೂಪಾಯಿಗಳನ್ನು (GST Collection) ದಾಟಿದೆ. 2023ರ ಜನವರಿಯಲ್ಲಿ ಜಿಎಸ್ಟಿ ಸಂಗ್ರಹವು 155,922 ಕೋಟಿ ರೂಪಾಯಿ ಆಗಿತ್ತು. ಒಟ್ಟು ಜಿಎಸ್ಟಿಯಲ್ಲಿ ಸಿಜಿಎಸ್ಟಿ 43,552 ಕೋಟಿ ರೂಪಾಯಿ ಮತ್ತು ಎಸ್ಜಿಎಸ್ಟಿ 37,257 ಕೋಟಿ ರೂಪಾಯಿಯಾಗಿದೆ.
ಏಪ್ರಿಲ್ 2023-ಜನವರಿ 2024ರ ಅವಧಿಯಲ್ಲಿ, ಒಟ್ಟು ಜಿಎಸ್ಟಿ ಸಂಗ್ರಹವು ವರ್ಷದಿಂದ ವರ್ಷಕ್ಕೆ 11.6% ಬೆಳವಣಿಗೆಯನ್ನು ಕಂಡಿದೆ (31.01.2024 ರ ಸಂಜೆ 05:00 ರವರೆಗೆ), ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್ 2022-ಜನವರಿ 2023) ಸಂಗ್ರಹಿಸಿದ 14.96 ಲಕ್ಷ ಕೋಟಿ ರೂ.ಗಳಿಂದ 16.69 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಒಂದು ದಿನ ಮುಂಚಿತ ಬಿಡುಗಡೆ
ಫೆಬ್ರವರಿ 1ರಂದು ಸಂಸತ್ತಿನಲ್ಲಿ 2024-25ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡನೆಯಾಗುವುದರಿಂದ ಜಿಎಸ್ಟಿ ಸಂಗ್ರಹದ ಡೇಟಾವನ್ನು ಪ್ರತಿ ತಿಂಗಳ ಸಾಮಾನ್ಯ ನಿಗದಿತ ದಿನಾಂಕವಾದ 1ಕ್ಕಿಂತ ಒಂದು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ಜಿಎಸ್ಟಿ ಸಂಗ್ರಹದ ರಾಜ್ಯವಾರು ದತ್ತಾಂಶವನ್ನು ಸಚಿವಾಲಯವು ಈ ಬಾರಿ ನಿಯಮದ ಪ್ರಕಾರ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ : GST Collection : ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ
ಜಿಎಸ್ಟಿ ಸಂಗ್ರಹದ ಅಂಕಿಅಂಶಗಳನ್ನು ನಂತರ ಪರಿಷ್ಕರಿಸುವ ಸಾಧ್ಯತೆಯಿದೆ. “ಇಂದು ಸಂಜೆ 05:00 ಗಂಟೆಗೆ (ಅಂದರೆ 31.01.2024) ಡೇಟಾ ಇದೆ. ತಿಂಗಳ ಅಂತಿಮ ಸಂಗ್ರಹವು ಹೆಚ್ಚಾಗಿರುತ್ತದೆ” ಎಂದು ಸಚಿವಾಲಯ ತಿಳಿಸಿದೆ.
“ಜಿಎಸ್ಟಿ ಸಂಗ್ರಹದಲ್ಲಿ ಸ್ಥಿರವಾದ ಬೆಳವಣಿಗೆಯಾಗಿದ್ದು, ಇದು ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ. ಈ ಬೆಳವಣಿಗೆಗೆ ಒಂದು ಪ್ರಮುಖ ಕಾರಣವೆಂದರೆ ಡಿಸೆಂಬರ್ನಲ್ಲಿ ವಾರ್ಷಿಕ ರಿಟರ್ನ್ಸ್ ಮತ್ತು ಹಣಕಾಸು ವರ್ಷ 22-23ರ ವ್ಯವಹಾರಗಳಲ್ಲಿ ಸ್ವಯಂಪ್ರೇರಿತ ಪಾವತಿಗಳಾಗಿರುವುದು ಎಂದು ಹಣಕಾಸು ಪರಿಣತರೊಬ್ಬರು ಹೇಳಿದ್ದಾರೆ.