ಬೆಂಗಳೂರು : 2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗೂ 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರ 2024-25ನೇ ವರ್ಷದ ರಾಜ್ಯ ಬಜೆಟ್ನಲ್ಲಿ (Karnataka Budget 2024) ಘೋಷಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ರಾಜ್ಯ ಪೀಠಗಳನ್ನು ರಚಿಸಲಾಗುವುದು ಮತ್ತು ಕಾರ್ಯಗತಗೊಳಿಸಲಾಗುವುದು. ಇದು ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸಹಾಯವಾಗುತ್ತದೆ ಎಂದು ಸಿಎಂ ಬಜೆಟ್ನಲ್ಲಿ ಮಂಡಿಸಿದರು.
ಇಲಾಖೆಯು, ಗ್ರಾಹಕ ಸಂವೇದಿ ಜಿ.ಎಸ್.ಟಿ ಡೇಟಾಬೇಸ್ ಮ್ಯಾನೇಜ್ಮೆಂಟ್ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ (ಎಐ) ವಿಶ್ಲೇಷಣಾತ್ಮಕ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ತೆರಿಗೆ ಕಾನೂನು ಮತ್ತು ತಾಂತ್ರಿಕ ಪರಿಣಿತಿ ಹೊಂದಲು ಹಾಗೂ ಅವರಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಕೋನ ಅಭಿವೃದ್ಧಿಪಡಿಸಲು ಇ-ತರಬೇತಿ ನೀಡಲಿದೆ ಎಂದು ಬಜೆಟ್ನಲ್ಲಿ ಮಂಡಿಸಿದ್ದಾರೆ.
2024-25ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,10,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ
ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ನಮ್ಮ ಸರ್ಕಾರವು 2023-24ರಲ್ಲಿ ಪರಿಷ್ಕರಣೆ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದ ಜನವರಿ ತಿಂಗಳ ಅಂತ್ಯದವರೆಗೆ 15,692 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯಾಗಿದ್ದು, ಶೇ.10ರಷ್ಟು ಬೆಳವಣಿಗೆ ಹೊಂದಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
2024-25ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 26,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಬಿಯರ್ ರೇಟ್ ಸ್ಲ್ಯಾಬ್ಗಳ ಪರಿಷ್ಕರಣೆ
ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್ನ ಸ್ಲಾಬ್ಗಳನ್ನು ಪರಿಷ್ಕರಿಸಲಾಗುವುದು. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ : Karnataka Budget Session 2024: ಮಹಾನಗರಗಳಲ್ಲಿ ರಾತ್ರಿ ವ್ಯಾಪಾರಕ್ಕೆ ಸಿಎಂ ಉತ್ತೇಜನ!
2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.
ಸಾರಿಗೆ
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯಡಿ ಜನವರಿ ತಿಂಗಳವರೆಗೆ 9,333 ಕೋಟಿ ರೂ.ಗಳು ಸ್ವೀಕೃತವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.19ರಷ್ಟು ಬೆಳವಣಿಗೆಯಾಗಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ. 2024-25ನೇ ಸಾಲಿಗೆ ಸಾರಿಗೆ ಇಲಾಖೆಗೆ ಒಟ್ಟು 13,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ಪ್ರಕಟಿಸಿದ್ದಾರೆ.
ಗಣಿ ಮತ್ತು ಭೂ-ವಿಜ್ಞಾನ
2023-24 ನೇ ಆರ್ಥಿಕ ವರ್ಷದಲ್ಲಿ ಜನವರಿ ತಿಂಗಳ ಅಂತ್ಯದವರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 5,658 ಕೋಟಿ ರೂ.ಗಳು ಸಂಗ್ರಹವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಗಣಿಗಾರಿಕೆಯಿಂದ ಸ್ವೀಕೃತವಾದ ರಾಜಸ್ವದಲ್ಲಿ ಶೇ.22ರಷ್ಟು ಏರಿಕೆಯಾಗಿದೆ. 2024-25ನೇ ಸಾಲಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 9,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.