Site icon Vistara News

GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?

GST Council meeting

ಬೆಂಗಳೂರು: ನವದೆಹಲಿಯಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 53ನೇ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆ (GST Council meeting) ನಡೆಯಿತು. ಸಭೆಯಲ್ಲಿ ತೆರಿಗೆ ಸಂಗ್ರಹ ಕುರಿತು ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಪ್ರಮುಖವಾಗಿ ತೆರಿಗೆದಾರರಿಗೆ ನಿಯಮ ಪಾಲನೆ ಹೊರೆ ಮತ್ತು ಕುಂದುಕೊರತೆಗಳನ್ನು ಸರಾಗಗೊಳಿಸಲು ಜಿಎಸ್​ಟಿ ಕೌನ್ಸಿಲ್ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ” ಶನಿವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವ್ಯಾಪಾರ ಸೌಲಭ್ಯ ಪಾಲನೆ ಹೊರೆಯನ್ನು ಕಡಿಮೆಗೊಳಿಸುವುದು ಮತ್ತು ಅನುಸರಣೆಯನ್ನು ಸರಾಗಗೊಳಿಸುವ ದೃಷ್ಟಿಯಿಂದ ತೆರಿಗೆದಾರರಿಗೆ ಪರಿಹಾರ ನೀಡಲು ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಸಭೆಯಲ್ಲಿ ಜಿಎಸ್ಟಿ ಕೌನ್ಸಿಲ್ ತೆಗೆದುಕೊಂಡ ನಿರ್ಧಾರಗಳ ಪ್ರಕಾರ ಯಾವುದು ಅಗ್ಗ ಹಾಗೂ ಯಾವುದು ದುಬಾರಿ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ರೈಲ್ವೆ ಸೇವೆಗಳು: ಭಾರತೀಯ ರೈಲ್ವೆಯಲ್ಲಿ ನೀಡಲಾಗುವ ಸೇವೆಗಳಾದ ಪ್ಲಾಟ್ಫಾರ್ಮ್ ಟಿಕೆಟ್ ಮಾರಾಟ, ವಿಶ್ರಾಂತಿ ಕೊಠಡಿ ಸೌಲಭ್ಯ, ಕಾಯುವಿಕೆ ಕೋಣೆಗಳು, ಬ್ಯಾಗೇಜ್​ಗಳನ್ನು ಇಡುವ ಕ್ಲಾಕ್​ ರುಮ್​ ಸೌಲಭ್ಯಗಳು ಮತ್ತು ಬ್ಯಾಟರಿ ಚಾಲಿತ ವಾಹನಗ ಸೇವೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೆಲವೊಂದು ವೆಚ್ಚಗಳು ಕಡಿಮೆಯಾಗಲಿವೆ.

ಹಾಸ್ಟೆಲ್ ಸೇವೆಗಳು: ಶಿಕ್ಷಣ ಸಂಸ್ಥೆಗಳ ಹೊರಗೆ ವಿದ್ಯಾರ್ಥಿಗಳು ಪಡೆಯುವ ಹಾಸ್ಟೆಲ್ ವಸತಿ ಸೇವೆಗಳಿಗೆ ಜಿಎಸ್ಟಿ ಕೌನ್ಸಿಲ್ ಪ್ರತಿ ವ್ಯಕ್ತಿಗೆ ತಿಂಗಳಿಗೆ 20,000 ರೂ.ಗಳವರೆಗೆ ವಿನಾಯಿತಿ ನೀಡಿದೆ. ಆದರೆ, ಈ ವಿನಾಯಿತಿ 90 ದಿನಗಳವರೆಗೆ ಮಾತ್ರ ಇರುತ್ತದೆ. ಆದಾಗ್ಯೂ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಇದರಿಂದ ಲಾಭವಾಗುತ್ತದೆ.

ತೆರಿಗೆ ನೋಟಿಸ್ ಮೇಲಿನ ದಂಡದ ಮೇಲಿನ ಬಡ್ಡಿ: 2017-18, 2018-19 ಮತ್ತು 2019-20ರ ಹಣಕಾಸು ವರ್ಷಗಳಿಗೆ ಜಿಎಸ್ಟಿ ಕಾಯ್ದೆಯ ಸೆಕ್ಷನ್ 73 ರ ಅಡಿಯಲ್ಲಿ ಹೊರಡಿಸಲಾದ ತೆರಿಗೆ ಬೇಡಿಕೆ ನೋಟಿಸ್ ಮೇಲಿನ ದಂಡದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಮಾರ್ಚ್ 31, 2025 ರೊಳಗೆ ಪೂರ್ಣ ತೆರಿಗೆ ಮೊತ್ತವನ್ನು ಪಾವತಿಸುವ ತೆರಿಗೆದಾರರು ಈ ಪ್ರಯೋಜನ ಪಡೆಯುತ್ತಾರೆ.

ಇದನ್ನೂ ಓದಿ: GST Council Meeting : ಪೆಟ್ರೋಲ್, ಡೀಸೆಲ್ ಜಿಎಸ್​​ಟಿ ವ್ಯಾಪ್ತಿಗೆ ಬರಲಿದೆಯೇ? ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್: ಯಾವುದೇ ಇನ್​ವಾಯ್ಸ್​ ಅಥವಾ ಡೆಬಿಟ್ ನೋಟ್ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಿಸ್ತರಣೆ ಪಡೆಯಲು ಜಿಎಸ್ಟಿ ಕೌನ್ಸಿಲ್ ಒಪ್ಪಿದೆ.

ಕಾರ್ಟನ್ ಬಾಕ್ಸ್ ಗಳ ಮೇಲಿನ ಜಿಎಸ್​ಟಿ ಇಳಿಕೆ : ಎಲ್ಲಾ ರೀತಿಯ ಕಾರ್ಟನ್ ಬಾಕ್ಸ್ ಗಳ ಮೇಲಿನ ಜಿಎಸ್ ಟಿಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲು ಜಿಎಸ್ ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಇದರಿಂದಾಗಿ ಇ ಕಾಮರ್ಸ್​ ಕಂಪನಿಗಳಿಗೆ ಉಳಿತಾಯವಾಗಲಿದ್ದು ಗ್ರಾಹಕರಿಗೂ ಲಾಭವಾಗಲಿದೆ.

ಜಿಎಸ್ಟಿ ರಿಟರ್ನ್: ಜಿಎಸ್​ಟಿ ಕೌನ್ಸಿಲ್ 2024-25ರ ಹಣಕಾಸು ವರ್ಷ ಮತ್ತು ನಂತರದ ವರ್ಷಗಳಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಏಪ್ರಿಲ್ 30 ರಿಂದ ಜೂನ್ 30 ರವರೆಗೆ ವಿಸ್ತರಿಸಿದೆ. ಇದರಿಂದ ತೆರಿಗೆದಾರರಿಗೆ ಇನ್ನಷ್ಟು ಅವಧಿ ದೊರೆಯಲಿದೆ.

ಸೋಲಾರ್​ ಕುಕ್ಕರ್​ಗಳು ದುಬಾರಿ: ಸೌರ ಕುಕ್ಕರ್​ಗಳಿಗೆ ಏಕರೂಪದ ಶೇಕಡಾ 12ರಷ್ಟು ಜಿಎಸ್​ಟಿ ಶಿಫಾರಸು ಮಾಡಲಾಗಿದೆ. ಈ ಕುಕ್ಕರ್​ಗಳು ಒಂದು ಅಥವಾ ಎರಡೆರಡು ಶಕ್ತಿ ಮೂಲಗಳಿಂದ ಕೆಲಸ ಮಾಡುವುದಾದರೂ ಒಂದೇ ದರ ವಿಧಿಸಲಾಗಿದೆ. ಹೀಗಾಗಿ ಸೋಲಾರ್​ ಕುಕ್ಕರ್​ಗಳು ದುಬಾರಿಯಾಗಲಿವೆ.

ಹಾಲಿನ ಕ್ಯಾನ್​ಗಳು: ಎಲ್ಲಾ ಹಾಲಿನ ಕ್ಯಾನ್​ಗಳ ಮೇಲೆ ಅವುಗಳು ಹೊಂದಿರುವ ವಸ್ತುಗಳನ್ನು (ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ) ಲೆಕ್ಕಿಸದೆ ಏಕರೂಪದ ಶೇಕಡಾ 12 ರಷ್ಟು ಜಿಎಸ್​ಟಿ ದರವನ್ನು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಹಿಂದೆ ಇದಕ್ಕೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿತ್ತು. ಹೀಗಾಗಿ ಕಡಿಮೆ ಜಿಎಸ್​ಟಿ ಇದ್ದ ಕ್ಯಾನ್ ಹಾಲಿನ ಬೆಲೆ ಹೆಚ್ಚಾಗಲಿವೆ.

ಸ್ಪ್ರಿಂಕ್ಲರ್​ಗಳು : ಬೆಂಕಿ ಅಥವಾ ನೀರಿನ ಸ್ಪ್ರಿಂಕ್ಲರ್​ಗಳಿಗೆ ಸೇರಿ ಎಲ್ಲಾ ರೀತಿಯ ಸ್ಪ್ರಿಂಕ್ಲರ್​ಗಳು ಏಕರೂಪದ ಜಿಎಸ್ಟಿ ದರವನ್ನು ಶೇಕಡಾ 12 ರಷ್ಟು ಹೊಂದಿರುತ್ತದೆ. ಇದು ಕೂಡ ಸ್ವಲ್ಪ ದುಬಾರಿಯಾಗಿದೆ.

Exit mobile version