Site icon Vistara News

GT World Mall: ಅನ್ನದಾತರಿಗೆ ಅವಮಾನ; ತೆರಿಗೆ ಪಾವತಿಸದ್ದಕ್ಕಾಗಿ ಜಿಟಿ ಮಾಲ್‌ ಸೀಲ್ ಮಾಡಿದ ಬಿಬಿಎಂಪಿ

gt world mall bandh

ಬೆಂಗಳೂರು: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ (Farmer humiliation) ಅವಮಾನ ಮಾಡಿದ ಹಿನ್ನೆಲೆಯಲ್ಲಿ ಜನತೆಯ, ಮಾಧ್ಯಮಗಳ ಹಾಗೂ ಸರಕಾರದ ಆಕ್ರೋಶ ಎದುರಿಸಿದ್ದ ಬೆಂಗಳೂರಿನ ಜಿಟಿ ವರ್ಲ್ಡ್‌ ಮಾಲ್‌ (GT World Mall), ಸ್ವಯಂಪ್ರೇರಿತವಾಗಿ ಬಂದ್‌ (GT World Mall Bandh) ಮಾಡಿದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು (BBMP Officers) ಮಾಲ್‌ ಅನ್ನು ಸೀಜ್‌ ಮಾಡಿದ್ದಾರೆ.

ಮಾಲ್‌ ಬಾಗಿಲಿಗೆ ಬೀಗ ಜಡಿಯಲಾಗಿದ್ದು, ʼಆಸ್ತಿ ತೆರಿಗೆ (Property Tax) ಪಾವತಿಸದ ಕಾರಣಕ್ಕಾಗಿ ಮಾಲ್ ಅನ್ನು ಸೀಲ್ ಮಾಡಲಾಗಿದೆʼ ಎಂದು ಬಾಗಿಲಿಗೆ ಅಂಟಿಸಲಾದ ನೋಟೀಸ್‌ನಲ್ಲಿ ತಿಳಿಸಲಾಗಿದೆ. 2023-24ನೇ ಸಾಲಿನ 1,78,23,560 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಿದ್ದು, ಪ್ರಸಕ್ತ ಸಾಲಿನಲ್ಲಿ 1,78,23,460 ಆಸ್ತಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ಪಾವತಿಸಿಲ್ಲ ಅಂತ ಬಿಬಿಎಂಪಿ ಜಿಟಿ ಮಾಲ್ ಅನ್ನು ಬಂದ್ ಮಾಡಿದೆ. ಬಿಬಿಎಂಪಿಯ ಕಂದಾಯ ಇಲಾಖೆ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದು, ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ತೆರಿಗೆ ಪಾವತಿಸಿದ ಮೇಲೆ ಮಾಲ್ ತೆರೆಯಲು ಒಪ್ಪಿಗೆ ನೀಡಲಿದ್ದಾರೆ.

ಉತ್ತರ ನೀಡಿದ ಜಿಟಿ ಮಾಲ್‌

ಬಿಬಿಎಂಪಿ ನೋಟಿಸ್‌ಗೆ ಲಿಖಿತ ಉತ್ತರ‌ ನೀಡಿರುವ ಜಿಟಿ ಮಾಲ್ ಮಾಲಿಕರು, ತಪ್ಪೆಸಗಿದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಪಂಚೆ ಉಟ್ಟು ಬಂದ ರೈತ ಮಾಲ್ ಎಂಟ್ರಿ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೋಟೀಸ್‌ ನೀಡಿದ್ದು, ಅದಕ್ಕೆ ಉತ್ತರ ನೀಡಿ ಪತ್ರ ಬರೆದಿದ್ದಾರೆ.

ʼಪಂಚೆ ಧರಿಸಿದವರಿಗೆ ಮಾಲ್ ಒಳಗೆ ಪ್ರವೇಶ ಇಲ್ಲ ಎಂಬ ನಿಯಮ ನಮ್ಮಲ್ಲಿಲ್ಲ. ಜಿಟಿ ಮಾಲ್ 2017ರಲ್ಲಿ ಆರಂಭವಾಗಿದ್ದು, ಮಾಲ್‌ನಲ್ಲಿ ಅನೇಕ ಮಳಿಗೆಗಳಲ್ಲಿ ಪಂಚೆ ಮಾರಾಟವೂ ನಡೆದಿದೆ. ಪಂಚೆ ನಮ್ಮ ಸಂಸ್ಕೃತಿಯ ಸಂಕೇತ. ಪಂಚೆಯು‌ ನಮ್ಮ ನಾಡಿನ ಸಾಂಸ್ಕೃತಿಕ ಉಡುಗೆಯಾಗಿದೆ, ಇದಕ್ಕೆ ಹೆಮ್ಮೆಯೂ ಇದೆ. ಘಟನೆಯು ಸೆಕ್ಯುರಿಟಿಯ ಅಜಾಗರೂಕತೆಯಿಂದ ನಡೆದಿದೆ. ಪಂಚೆ ಉಟ್ಟು ಬಂದ ರೈತರನ್ನು ಮಾಲ್ ಒಳಗೆ ಬಿಡದೆ ಇದದ್ದು ಸರಿಯಾದ ಕ್ರಮವಲ್ಲ. ಈ ರೀತಿ ಮಾಡಿದ ನಮ್ಮ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆʼ ಎಂದು ಜಿಟಿ ಮಾಲ್ ಸಿಇಓ ಪ್ರಶಾಂತ್ ಆನಂದ್ ತಿಳಿಸಿದ್ದಾರೆ.

ಈ ಹಿಂದೆ ಬೇರೆ ಬೇರೆ ದಿನ ಪಂಚೆ ಧರಿಸಿದವರು ಓಡಾಡುವ ಸಿಸಿಟಿವಿ ದೃಶ್ಯದೊಂದಿಗೆ ಸಿಇಒ ಉತ್ತರ ಸಲ್ಲಿಸಿದ್ದಾರೆ. ʼ2017ರಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಮುಂದೆ ಇಂತಹ ಪ್ರಮಾದ ನಡೆಯಲು ಬಿಡುವುದಿಲ್ಲ. ಈ ಘಟನೆಯಿಂದ ನಮಗೆ ಬಹಳ ಬೇಸರವಾಗಿದ್ದು ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಮಾಲ್‌ನಲ್ಲಿನ ಮಳಿಗೆಗಳಲ್ಲಿ ಪಂಚೆಯನ್ನು ಮುಕ್ತವಾಗಿ ಮಾರಾಟ ಮಾಡುತ್ತೇವೆ. ಈ ಹಿಂದೆ ನಮ್ಮ ಮಾಲ್ ಅನೇಕರು ಪಂಚೆ ತೊಟ್ಟು ಬಂದಿದ್ದು ಅವರ ಸಿಸಿ ಟಿವಿ ಚಿತ್ರಣಗಳನ್ನು ನಾವು ನೀಡಿದ್ದೇವೆ. ಈ ವರೆಗೆ ಸಾಮಾಜಿಕವಾಗಿ ಇನ್ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ‌, ಮುಂದೆಯೂ ನಡೆಯದಂತೆ ಜಾಗೃತಿ ವಹಿಸುವುದಾಗಿ ಜಿಟಿ ಮಾಲ್ ನೋಟಿಸ್‌ಗೆ ಉತ್ತರ ನೀಡಿದೆ.

ಕಲಾಪದಲ್ಲಿ ಬಂದ್​ಗೆ ಸೂಚನೆ

ಗುರುವಾರ ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್‌ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್‌ ಲಾಡ್‌ (Santosh Lad) ಕೂಡ ಕೂಡ ಈ ವಿಚಾರದಲ್ಲಿ ಮಾಲ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್‌ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್‌ ಮಾಡಿಸಬಹುದು. ಆದರೆ ಎಚ್ಚರಿಕೆ ನೀಡಿ ಮೂರು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Exit mobile version