Site icon Vistara News

GT World Mall: ಪಂಚೆ ಧರಿಸಿದ ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ದೂರು ದಾಖಲು

gt world mall haveri farmer

ಬೆಂಗಳೂರು: ಪಂಚೆ ಧರಿಸಿ ಬಂದದ್ದಕ್ಕೆ (Wearing Dhoti) ಹಾವೇರಿಯ ರೈತರೊಬ್ಬರಿಗೆ (Haveri Farmer) ಮಾಲ್‌ನೊಳಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ (bangalore mall) ಜಿಟಿ ವರ್ಲ್ಡ್‌ ಮಾಲ್‌ (GT World Mall) ವಿರುದ್ಧ ದೂರು (FIR) ದಾಖಲಾಗಿದೆ.

ಮಂಗಳವಾರ ಸಂಜೆ ಘಟನೆ ನಡೆದಿತ್ತು. ಹಾವೇರಿಯ ರೈತ ಫಕೀರಪ್ಪ ಅವರು ಪಂಚೆ ಧರಿಸಿ, ಮಗನ ಸಮೇತ ಸಿನಿಮಾ ನೋಡಲು ಬಂದಿದ್ದರು. ʼಪಂಚೆ ಧರಿಸಿ ಮಾಲ್ ಒಳಗೆ ಬರುವಂತಿಲ್ಲʼ ಎಂದು ಸೆಕ್ಯುರಿಟಿ ತಡೆದಿದ್ದರು. ಇದನ್ನು ರೈತರ ಮಗ ಪ್ರಶ್ನಿಸಿದ್ದರು. ನಂತರ ʼವಿಸ್ತಾರ ನ್ಯೂಸ್‌ʼ ಈ ವಿಚಾರವನ್ನು ಎತ್ತಿಕೊಂಡು ನಿನ್ನೆ ಇಡೀ ದಿನ ಕವರೇಜ್‌ ಮಾಡಿತ್ತು. ಪಂಚೆಯ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಅವಮಾನದ ವಿರುದ್ಧ ಸಿಡಿದೆದ್ದು ಪ್ರಶ್ನೆ ಮಾಡಿತ್ತು.

ಬಳಿಕ ಇದನ್ನು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕೈಗೆತ್ತಿಕೊಂಡಿದ್ದವು. ಮಾಲ್‌ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್‌ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು. ರೈತ ಫಕೀರಪ್ಪಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ರೈತ- ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಂಚೆ ಧರಿಸಿ ಮಾಲ್‌ಗೆ ಪ್ರವೇಶಿಸಿದ್ದರು.

ಇದೀಗ ಜಿಟಿ ಮಾಲ್ ಮಾಲ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ಫಕೀರಪ್ಪ ಅವರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಅಡಳಿತ ಮಂಡಳಿ ಹಾಗೂ ಸಿಬ್ಬಂದಿ ಅರುಣ್ ವಿರುದ್ಧ ಕ್ರಮ ಜರಗಿಸುವಂತೆ ಎಫ್ಐಆರ್ ದಾಖಲಾಗಿದೆ.

ರೈತರಿಗೆ ಅವಮಾನಕ್ಕೆ ಸಚಿವರು ಗರಂ

ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್‌ ಒಳಗೆ ಬಿಡದೆ ಕಾಯಿಸಿ ಹಾವೇರಿಯ ರೈತರನ್ನು (Haveri Farmer) ಅವಮಾನ ಮಾಡಿದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನ (GT World Mall) ಸಿಬ್ಬಂದಿಯ ವರ್ತನೆಗೆ ರಾಜ್ಯದ ಸಚಿವರುಗಳು (State ministers) ಗರಂ ಆಗಿದ್ದಾರೆ. ಈ ಬಗ್ಗೆ ಪೊಲೀಸ್‌ ನೋಟೀಸ್‌ ನೀಡುವ ಸೂಚನೆ ನೀಡಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಈ ಕುರಿತು ಗರಂ ಆಗಿದ್ದು, ʼಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಅವರು ಪಾಠ ಕಲಿಯಬೇಕುʼ ಎಂದು ಟೀಕಿಸಿದ್ದಾರೆ. ʼಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ನಮ್ಮ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಪತ್ರ ಬರೆಯುತ್ತೇವೆʼ ಎಂದು ಅವರು ಹೇಳಿದ್ದಾರೆ.‌

ಸರ್ಕಾರದಿಂದ ನಿಯಮ ತರುತ್ತೇವೆ: ಚಲುವರಾಯ ಸ್ವಾಮಿ

ರೈತರಿಗೆ ಪ್ರವೇಶ ನಿರಾಕರಣೆ ಮಾಡಿದ ಜಿ‌ಟಿ ಮಾಲ್ ಕ್ರಮವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಖಂಡಿಸಿದ್ದು, ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ʼನಾವು ಇದನ್ನ ಖಂಡಿಸುತ್ತೇವೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕುʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Exit mobile version