Site icon Vistara News

GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ

gt world mall 2

ಬೆಂಗಳೂರು: ಹಾವೇರಿ ಮೂಲದ ರೈತರನ್ನು ಪಂಚೆ ಉಟ್ಟಿದ್ದಾರೆ (Haveri Farmer wearing Dhoti) ಎಂಬ ಕಾರಣಕ್ಕಾಗಿ ಮಾಲ್‌ ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ವರ್ಲ್ಡ್‌ ಮಾಲ್‌ (GT World Mall) ಮುಂದೆ ಇಂದು ರೈತ ಸಂಘಟನೆಗಳ ಹಾಗೂ ಕನ್ನಡ ಸಂಘಟನೆಗಳ ಸದಸ್ಯರು ಪಂಚೆ ಉಟ್ಟು ಪ್ರತಿಭಟನೆ ನಡೆಸಿದ್ದಾರೆ. ರೈತರಿಗೆ ನ್ಯಾಯ ಸಲ್ಲಿಸಲು ಹೋರಾಟ ನಡೆಸಿದ ವಿಸ್ತಾರ ನ್ಯೂಸ್‌ ಹಾಗೂ ಸಾರ್ವಜನಿಕರ ಮುಂದೆ ಮಾಲ್‌ ಮಾಲಿಕರು ಕ್ಷಮೆ ಯಾಚಿಸಿದರು. ಮಾಲ್‌ ಆಡಳಿತದ ವರ್ತನೆಯ ಬಗ್ಗೆ ಸ್ಪಷ್ಟನೆ ಕೇಳಿ ನೋಟೀಸ್‌ ನೀಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (Karnataka state human rights commission) ಮುಂದಾಗಿದೆ.

ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ರೈತರ ಗೆಟಪ್‌ನಲ್ಲಿ ಬೆಳಗ್ಗೆ ಮಾಲ್‌ ಮುಂದೆ ಜಮಾಯಿಸಿದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಆ್ಯಂಡ್ ಟೀಂ ಪಂಚೆ ಧರಿಸಿ ಮಾಲ್‌ ಮುಂದೆ ಸೇರಿದ್ದು, ಪ್ರತಿಭಟನೆಗೆ ಮುಂದಾದರು. ಇಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಅರೆಬೆತ್ತಲೆ ಪ್ರತಿಭಟನೆ ಮಾಡುತ್ತೇವೆ: ಕುರುಬೂರು

ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಅವರು ಈ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಇಂಥ ಘಟನೆಯ ಮೂಲಕ ರೈತರಿಗೆ ಅವಮಾನ ಮಾಡಲಾಗಿದೆ ಎಂದು ಖಂಡಿಸಿದ್ದಾರೆ. ಕೂಡಲೇ ಮಾಲ್‌ ಮಾಲಿಕರ ವಿರುದ್ಧ ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಾಲ್‌ ಮಾಲೀಕರು ಅನ್ನ ತಿನ್ನುವಂಥ ವ್ಯಕ್ತಿ ಆಗಿದ್ದರೆ ಇಂಥ ಕೆಲಸ ಮಾಡುತ್ತಿರಲಿಲ್ಲ. ಇಂದು ಪಂಚೆ ಉಟ್ಟವರನ್ನು ಒಳಬಿಟ್ಟಿಲ್ಲ. ಬೆಂಗಳೂರಿನಲ್ಲಿ ಇಂಥ ಘಟನೆಗಳು ಮರುಕಳಿಸುತ್ತಿವೆ. ಮಾಲ್‌ ಮಾಲಿಕರು ಕ್ಷಮೆ ಕೇಳಬೇಕು ಇಲ್ಲವಾದರೆ ರಾಜ್ಯದೆಲ್ಲೆಡೆಯಿಂದ ನೂರಾರು ರೈತರು ಆಗಮಿಸಿ ಅರೆಬೆತ್ತಲೆಯಾಗಿ ಮಾಲ್‌ ಒಳಗೆ ನುಗ್ಗುವ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ.

ನಾಳೆ ಆಯೋಗ ನೋಟೀಸ್‌

ಪಂಚೆ ಉಟ್ಟ ವೃದ್ಧರಿಗೆ ಮಾಲ್ ಪ್ರವೇಶ ನಿರಾಕರಣೆ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶಿಸಿದ್ದು, ಪಂಚೆ ಧರಿಸಿದವರಿಗೆ ಯಾಕೆ ಪ್ರವೇಶ ನೀಡಿಲ್ಲವೆಂದು ಸ್ಪಷ್ಟನೆ ಕೇಳಿ ನಾಳೆ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ. ನಾಳೆ ಸುಮೋಟೋ ಕೇಸ್ ದಾಖಲಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಕೈಮುಗಿದು ಒಳಗೆ ಬಿಟ್ಟ ಸೆಕ್ಯುರಿಟಿ

ನಿನ್ನೆ ಪಂಚೆ ಉಟ್ಟ ರೈತರನ್ನು ಒಳಗೆ ಬಿಡದ ಜಿಟಿ ಮಾಲ್ ಸೆಕ್ಯುರಿಟಿ ಸಿಬ್ಬಂದಿ ಇಂದು ಮೆತ್ತಗಾಗಿದ್ದಾರೆ. ನಿನ್ನೆಯ ಅವಾಂತರದ ನಂತರ ಎಚ್ಚೆತ್ತುಕೊಂಡ ಮಾಲ್ ಸಿಬ್ಬಂದಿ ಇಂದು ಪಂಚೆ ಉಟ್ಟವರನ್ನು ಒಳಗೆ ಬಿಡುತ್ತಿರುವುದಷ್ಟೇ ಅಲ್ಲ, ಪಂಚೆ ಉಟ್ಟವರಿಗೆ ಕೈಮುಗಿದು ಬರಮಾಡಿಕೊಳ್ಳುತ್ತಿದ್ದಾರೆ! ಇಂದು ಪ್ರತಿಭಟನೆಯ ಸಂದರ್ಭದಲ್ಲಿ ಲುಂಗಿ ಉಟ್ಟ ವೃದ್ಧರೊಬ್ಬರು ಒಳಗೆ ಹೋಗಿದ್ದು, ಸಿಬ್ಬಂದಿ ಅವರಿಗೆ ಕೈಮುಗಿದು ಸೆಕ್ಯುರಿಟಿ ಚೆಕ್‌ ಕೂಡ ಮಾಡದೆ ಒಳಬಿಟ್ಟಿದ್ದಾರೆ.

ಕ್ಷಮೆ ಕೇಳಿದ ಮಾಲ್‌ನ ಸೆಕ್ಯೂರಿಟಿ

ನಿನ್ನೆ ರೈತರನ್ನು ತಡೆದ ಸೆಕ್ಯುರಿಟಿ ಸಿಬ್ಬಂದಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. “ನಿನ್ನೆ ಮಧ್ಯಾಹ್ನ ವ್ಯಕ್ತಿಯೊಬ್ಬರು ಪಂಚೆಯಲ್ಲಿ ಮಾಲ್‌ಗೆ ಬಂದಿದ್ದರು. ಪಂಚೆಯನ್ನು ಮೊಣಕಾಲಿನ ತನಕ ಧರಿಸಿ ಅಸಭ್ಯವಾಗಿ ನಿಂತಿದ್ದರು. ಆಗ ಕೆಳಗಿನ ಫ್ಲೋರ್‌ನಲ್ಲಿ ಬರ್ತ್‌ಡೇ ಪಾರ್ಟಿಯ ಇವೆಂಟ್ ನಡೆಯುತ್ತಿತ್ತು. ಈ ವೇಳೆ ಈ ವಿಚಾರವನ್ನು ಮ್ಯಾನೆಜ್‌ಮೆಂಟ್‌ ಗಮನಕ್ಕೆ ತಂದಿದ್ದರು. ಸಂಜೆ ಮತ್ತೆ ರೈತರೊಬ್ಬರು ಪಂಚೆ ಧರಿಸಿ ಬಂದರು. ಈ ಸಮಯದಲ್ಲಿ ನಾವು ತಡೆದು, ಮ್ಯಾನೇಜ್‌ಮೆಂಟ್‌ ಗಮನಕ್ಕೆ ತಂದಿದ್ದೇವೆ. ಉದ್ದೇಶಪೂರ್ವಕವಾಗಿ ನಾವು ತಡೆದಿಲ್ಲ‌. ಮ್ಯಾನೇಜ್‌ಮೆಂಟ್‌ನಿಂದ ಉತ್ತರ ಬರುವ ತನಕ ಕಾಯಿಸಿದೆವು ಅಷ್ಟೆ” ಎಂದು ಸೆಕ್ಯುರಿಟಿ ಅರುಣ್ ಹೇಳಿದ್ದಾರೆ.

ಪ್ರಕರಣವೇನು?

ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬವರ ತಂದೆ ಮೂಲತಃ ರೈತರಾಗಿದ್ದು ಅವರು ಹಾವೇರಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜು. 16ರಂದು ತಮ್ಮ ವೃದ್ಧ ತಂದೆಯವರಿಗೆ ಸಿನಿಮಾ ತೋರಿಸಿ ಖುಷಿಪಡಿಸಲು ನಿರ್ಧರಿಸಿದ ನಾಗರಾಜ್, ತಂದೆಯನ್ನು ಜಿಟಿ ಮಾಲ್‌ಗೆ ಕರೆದೊಯ್ದಿದ್ದರು. ಸಾಮಾನ್ಯವಾಗಿ ಪಂಚೆ ಉಡುವ ಹವ್ಯಾಸವಿರುವ ಅವರು ಎಂದಿನಂತೆಯೇ ಪಂಚೆ ಉಟ್ಟು ಮಗನ ಜೊತೆಗೆ ಮಾಲ್‌ಗೆ ತೆರಳಿದ್ದರು. ಆದರೆ ಸೆಕ್ಯುರಿಟಿ ಒಳಗೆ ಬಿಟ್ಟಿರಲಿಲ್ಲ. ʼಪಂಚೆ ಉಟ್ಟವರನ್ನು ಒಳಗೆ ಬಿಡದಂತೆ ನಮಗೆ ಸೂಚನೆಯಿದೆʼ ಎಂದು ಹೇಳಿ ವಾಪಸ್‌ ಕಳಿಸಿದ್ದರು.

ಇದನ್ನೂ ಓದಿ: GT World Mall: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಜಿಟಿ ವರ್ಲ್ಡ್‌ ಮಾಲ್‌

Exit mobile version