ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ನೇತೃತ್ವದ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ಮೇಲಿನ ನಿಷೇಧವನ್ನು ಗೃಹ ಸಚಿವಾಲಯ (MHA) ಮಂಗಳವಾರ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ. ಈ ಭಯೋತ್ಪಾದಕ ಸಂಘಟನೆಯನ್ನು ಮೊದಲು 2019 ರಲ್ಲಿ ನಿಷೇಧಿಸಲಾಗಿತ್ತು. ಎಸ್ಎಫ್ಜೆ ಭಾರತದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಎಸ್ಎಫ್ಜೆಯ ಚಟುವಟಿಕೆಗಳು ದೇಶದ ಶಾಂತಿ, ಏಕತೆ ಮತ್ತು ಸಮಗ್ರತೆ ಭಂಗ ತರುತ್ತಿದೆ ಎಂದು ಸಚಿವಾಲಯ ಹೇಳಿದೆ.
ಗೃಹ ಸಚಿವಾಲಯದ ಪ್ರಕಾರ, ಗುರುಪತ್ವಂತ್ ಸ್ಥಾಪಿಸಿದ ಎಸ್ಎಫ್ಜೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಭಂಗಗೊಳಿಸುವ ಉದ್ದೇಶದಿಂದ ಪಂಜಾಬ್ನಲ್ಲಿ ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಹೀಗಾಗಿ ಅದರ ಮೇಲಿನ ನಿಷೇಧ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.
ಎಸ್ಎಫ್ಜೆ ಸಂಘಟನೆಯು ಇತರ ಉಗ್ರಗಾಮಿ ಸಂಘಟನೆಗಳು ಮತ್ತು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಭಾರತ ಒಕ್ಕೂಟದ ಭೂಪ್ರದೇಶದಿಂದ ಪ್ರತ್ಯೇಕವಾಗಿ ಖಲಿಸ್ತಾನವನ್ನು ರಚಿಸಲು ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದೆ. ಜತೆಗೆ ಉಗ್ರಗಾಮಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ” ಎಂದು ಆರೋಪಿಸಲಾಗಿದೆ.
ಪ್ರತ್ಯೇಕತೆಯ ಕೂಗು
ಖಲಿಸ್ತಾನಿ ಪರ ಸಂಘಟನೆಗಳು ಭಾರತೀಯ ಭೂಪ್ರದೇಶದ ಒಂದು ಭಾಗವನ್ನು ಬೇರ್ಪಡಿಸುವ ದುರುದ್ದೇಶ ಹೊಂದಿದೆ. ಅದಕ್ಕಾಗಿ ಎಲ್ಲ ಸಹಾಯ ಮಾಡುತ್ತಿದೆ ಮತ್ತು ಭಾರತ ಮತ್ತು ಇತರ ಕಡೆಗಳಲ್ಲಿ ಈ ಉದ್ದೇಶಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕತಾವಾದಿ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.
ಎಸ್ಎಫ್ಜೆ ಕಾನೂನುಬಾಹಿರ ಚಟುವಟಿಕೆಗಳನ್ನು ತಕ್ಷಣ ನಿಯಂತ್ರಿಸದಿದ್ದರೆ, ಖಲಿಸ್ತಾನಿ ಪರ ಸಂಘಟನೆಯು ತನ್ನ ವಿಧ್ವಂಸಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದು ಕೇಂದ್ರವು ಹೇಳಿದೆ. ಖಲಿಸ್ತಾನಿ ಪರ ಸಂಘಟನೆಯು ಕಾನೂನಿನಿಂದ ಸ್ಥಾಪಿಸಲಾದ ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಖಲಿಸ್ತಾನ್ ರಾಷ್ಟ್ರವನ್ನು ಭಾರತದ ಒಕ್ಕೂಟದ ಭೂಪ್ರದೇಶದಿಂದ ಬೇರ್ಪಡಿಸುವ ಪ್ರಯತ್ನಗಳು ಮಾಡುತ್ತಿದೆ.
ಇದನ್ನೂ ಓದಿ: PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಪನ್ನುನ್ ನೇತೃತ್ವದ ಸಂಘಟನೆಯು ಕುಕೃತ್ಯ ಮುಂದುವರಿದಿದೆ. ಪಂಜಾಬ್ ಅನ್ನು ಭಾರತ ಒಕ್ಕೂಟದಿಂದ ಪ್ರತ್ಯೇಕಿಸಲು ಮತ್ತು ಖಲಿಸ್ತಾನ್ ರಚನೆಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಹೇಳಿದೆ.
ಇದು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ಹಾನಿಕಾರಕವಾದ ರಾಷ್ಟ್ರ ವಿರೋಧಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚಾರ ಮಾಡುತ್ತದೆ. ದೇಶದ ಅಲ್ಲಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂದು ಗೃಹ ಸಚಿವಾಲು ಅಭಿಪ್ರಾಯಪಟ್ಟಿದೆ.
ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಕೇಂದ್ರ ಸರ್ಕಾರವು 2020 ರಲ್ಲಿ ಭಯೋತ್ಪಾದಕ ಎಂದು ಘೋಷಿಸಿತ್ತು.. ಅವರು ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಯುಎಸ್, ಕೆನಡಾ ಮತ್ತು ಯುಕೆಯಲ್ಲಿ ಸಿಖ್ಖರಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಸಕ್ರಿಯವಾಗಿ ಲಾಬಿ ಮಾಡುತ್ತಿದ್ದಾರೆ.