ಲಖನೌ: ವಾರಾಣಸಿಯ (Varanasi) ವಿವಾದಿತ (Gyanvapi Case) ಜ್ಞಾನವಾಪಿ ಮಸೀದಿಯಲ್ಲಿರುವ (Gyanvapi Mosque) ‘ವಝುಖಾನಾ’ (wazukhana) ಪ್ರದೇಶವನ್ನು ತೆರೆದು ಸಮೀಕ್ಷೆಗೆ ಮುಕ್ತ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ಹಿಂದೂ ಸಂಘಟನೆಗಳು ಈ ಅರ್ಜಿ ಸಲ್ಲಿಸಿವೆ.
2022ರಲ್ಲಿ ನಡೆಸಲಾದ ಸಮೀಕ್ಷೆಯ ಸಂದರ್ಭದಲ್ಲಿ ʼಶಿವಲಿಂಗ’ ಎಂದು ಹೇಳಲಾದ ವಸ್ತುವನ್ನು ಈ ಪ್ರದೇಶದಲ್ಲಿ ಕಂಡುಹಿಡಿಯಲಾಗಿತ್ತು. ನಂತರ ಸರ್ವೋಚ್ಚ ನ್ಯಾಯಾಲಯ ವಝುಖಾನಾ ಪ್ರದೇಶವನ್ನು ಮುಚ್ಚಲು ಆದೇಶಿಸಿತ್ತು. ವುಝುಖಾನಾ ಎಂದರೆ ನಮಾಜಿಗೆ ಮುನ್ನ ಕೈಕಾಲು ತೊಳೆದುಕೊಳ್ಳುವ ಪ್ರದೇಶವಾಗಿದೆ.
ಹಿಂದೂ ಸಂಘಟನೆಗಳು ಸಲ್ಲಿಸಿದ ಮನವಿಯಲ್ಲಿ, ಶಿವಲಿಂಗಕ್ಕೆ ಹಾನಿಯಾಗದಂತೆ ವಝುಖಾನಾದಲ್ಲಿ ಮತ್ತೊಂದು ಸಮಗ್ರ ಸಮೀಕ್ಷೆಯನ್ನು ಕೈಗೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಹಿಂದೂಗಳಿಗೆ ಹಸ್ತಾಂತರಿಸಿ: ವಿಹಿಂಪ
ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜ್ಞಾನವಾಪಿ ಮಸೀದಿಯನ್ನೇ ಹಿಂದೂಗಳಿಗೆ ಹಸ್ತಾಂತರಿಸುವಂತೆ ಕರೆ ನೀಡಿದೆ. ʼʼವಾರಣಾಸಿಯಲ್ಲಿ ಭವ್ಯವಾದ ದೇವಾಲಯವನ್ನು ಕೆಡವಿ ಆ ಜಾಗದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಎಎಸ್‌ಐ ಸಮೀಕ್ಷಾ ವರದಿಯು ಪುನಃ ದೃಢೀಕರಿಸಿದೆ. ಹೀಗಾಗಿ ಈ ರಚನೆಯನ್ನು ಹಿಂದೂ ದೇವಾಲಯವೆಂದು ಘೋಷಿಸಿ ಸಮುದಾಯಕ್ಕೆ ಹಸ್ತಾಂತರಿಸುವಂತೆ” ವಿಹಿಂಪ ಒತ್ತಾಯಿಸಿದೆ.
ವಿವಾದಿತ ಸ್ಥಳದಲ್ಲಿ “ವುಝುಖಾನಾ ಪ್ರದೇಶ” ಎಂದು ಕರೆಯಲ್ಪಡುವ ಶಿವಲಿಂಗ ಇರುವ ಪ್ರದೇಶದಲ್ಲಿ “ಸೇವಾ ಪೂಜೆ” ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಬೇಕು ಎಂದು ವಿಹಿಂಪ ಒತ್ತಾಯಿಸಿದೆ.
“ಸಂಗ್ರಹಿಸಿದ ಪುರಾವೆಗಳು ಮತ್ತು ಎಎಸ್ಐ ಒದಗಿಸಿದ ವರದಿಗಳು 1947ರ ಆಗಸ್ಟ್ 15ನೇ ದಿನದಂದು ಈ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಹಿಂದೂ ದೇವಾಲಯವಾಗಿತ್ತು ಎಂದು ಸಾಬೀತುಪಡಿಸುತ್ತದೆ” ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. “ಆದ್ದರಿಂದ, 1991ರ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 4ರ ಪ್ರಕಾರ, ಈ ರಚನೆಯನ್ನು ಹಿಂದೂ ದೇವಾಲಯವೆಂದು ಘೋಷಿಸಬೇಕು” ಎಂದು ಅವರು ಒತ್ತಾಯಿಸಿದರು.
ಜ್ಞಾನವಾಪಿ ಮಸೀದಿಯನ್ನು ಮತ್ತೊಂದು ಸೂಕ್ತ ಸ್ಥಳಕ್ಕೆ “ಗೌರವಯುತವಾಗಿ ಸ್ಥಳಾಂತರಿಸಿ” ಕಾಶಿ ವಿಶ್ವನಾಥನ ಮೂಲ ಸ್ಥಳವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಲು ಒಪ್ಪಿಕೊಳ್ಳುವಂತೆ ಮಸೀದಿಯನ್ನು ನಿರ್ವಹಿಸುವ ಇಂತೇಜಾಮಿಯಾ ಸಮಿತಿಗೆ VHP ಕರೆ ನೀಡಿದೆ.
ಎಎಸ್‌ಐನ ಸಮೀಕ್ಷೆಯ ವರದಿಯ ಪ್ರಕಾರ, ಜ್ಞಾನವಾಪಿ ಮಸೀದಿ ಆವರಣದಲ್ಲಿ 55 ಕಲ್ಲಿನ ಶಿಲ್ಪಗಳು ಕಂಡುಬಂದಿವೆ. ಇದರಲ್ಲಿ 15 ಶಿವಲಿಂಗ, ಮೂರು ಭಗವಾನ್ ವಿಷ್ಣು, ಮೂರು ಗಣೇಶ, ಎರಡು ನಂದಿ, ಎರಡು ಕೃಷ್ಣ ಮತ್ತು ಐದು ಹನುಮಾನ್ ಶಿಲ್ಪಗಳು ಸೇರಿವೆ. “17ನೇ ಶತಮಾನದಲ್ಲಿ ಔರಂಗಜೇಬನ ಆಳ್ವಿಕೆಯಲ್ಲಿ ದೇವಾಲಯದ ಭಾಗವನ್ನು ನಾಶಪಡಿಸಿದಂತೆ ಕಾಣುತ್ತದೆ. ಅಸ್ತಿತ್ವದಲ್ಲಿರುವ ರಚನೆಯನ್ನು ಮಾರ್ಪಡಿಸಲಾಗಿದೆ ಮತ್ತು ಮರುಬಳಕೆ ಮಾಡಲಾಗಿದೆ” ಎಂದು ಎಎಸ್‌ಐ ವರದಿ ಹೇಳಿದೆ.
ಉತ್ಖನನದ ವೇಳೆ ಕಲ್ಲಿನ ಒಂದು ಮಕರ ಶಿಲ್ಪ, ಒಂದು ದ್ವಾರಪಾಲಕ, ಒಂದು ಅಪಸ್ಮಾರ ಪುರುಷ, ಒಂದು ಗುಡಿ ಶಿಖರ, 14 ತುಣುಕುಗಳು ಮತ್ತು ಏಳು ವಿವಿಧ ಶಿಲಾ ಶಿಲ್ಪಗಳು ASIಗೆ ಕಂಡುಬಂದಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ಆವರಣದಲ್ಲಿ ಯೋನಿಪೀಠ, ಗಣಪ, ಹನುಮಾನ್ ಮೂರ್ತಿ! ಸಮೀಕ್ಷೆ ವರದಿ ಸೋರಿಕೆ