Site icon Vistara News

Hampi Utsav: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ; ಏನೇನು ಕಾರ್ಯಕ್ರಮಗಳಿವೆ?

hampi utsav

ಹೊಸಪೇಟೆ: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 3 ದಿನಗಳ ಹಂಪಿ ಉತ್ಸವವನ್ನು (Hampi Utsav) ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿ 2, 3 ಮತ್ತು 4ರಂದು ಹಂಪಿ ಉತ್ಸವ ನಡೆಯಲಿದೆ.

ಶುಕ್ರವಾರ ರಾತ್ರಿ 8 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಸಚಿವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫೆಬ್ರವರಿ 2, 3 ಮತ್ತು 4ರಂದು ಗ್ರಾಮೀಣ ಆಟಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿಂದೆ ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಹಂಪಿ ಉತ್ಸವ ನಡೆಯುತ್ತಿತ್ತು. ಸರ್ಕಾರ ಬದಲಾದಂತೆ ದಿನಾಂಕಗಳನ್ನು ಸಹ ಬದಲಾಯಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಡವಾಗಿ ಹಂಪಿ ಉತ್ಸವ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ಉತ್ಸವ ನಡೆಸಲು ಸರ್ಕಾರ ಯೋಚಿಸಿದೆ. ವಿಜಯನಗರ ಜಿಲ್ಲಾಡಳಿತವು ಹಂಪಿ ಉತ್ಸವಕ್ಕೆ 17 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದಿಂದ 14 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಉಳಿದ ಹಣವನ್ನು ಸ್ಥಳೀಯವಾಗಿ ಹೊಂದಿಸಲಾಗಿದೆ.

ಹಂಪಿ ಉತ್ಸವದ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕನ್ನಡಿಗರಿಗೆ ಕರೆ ನೀಡಿದ್ದಾರೆ. “ನಾಡಿನ ಕಲೆ, ವಾಸ್ತುಶಿಲ್ಪದ ತೊಟ್ಟಿಲು, ವಿಶ್ವವಿಖ್ಯಾತ ಹಂಪಿಯಲ್ಲಿ ಇದೇ ಫೆಬ್ರವರಿ 2ರಿಂದ 4ನೇ ತಾರೀಕಿನ ವರೆಗೆ ಹಂಪಿ ಉತ್ಸವ ನಡೆಯಲಿದೆ. ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ” ಎಂದು ಮನವಿ ಮಾಡಿದ್ದಾರೆ.

ಈ ಬಾರಿಯ ಹಂಪಿ ಉತ್ಸವದ ಪ್ರಮುಖ ಆಕರ್ಷಣೆ ಹಂಪಿ ಬೈ ಸ್ಕೈ. ಈ ವರ್ಷ ಉತ್ಸವದ ಒಂದು ದಿನ ಮುಂಚಿತವಾಗಿ ಹಂಪಿ ಬೈ ಸ್ಕೈಗೆ ಚಾಲನೆ ದೊರೆಯಲಿದೆ. ಇದರಿಂದ ಪ್ರವಾಸಿಗರಿಗೆ ಹೆಲಿಕಾಪ್ಟರ್‌ನಲ್ಲಿ ವಿಶ್ವ ಪಾರಂಪರಿಕ ತಾಣವನ್ನು ಆಕಾಶದಿಂದ ನೋಡಲು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಫೆ.01ರಂದು ಬೆಳಿಗ್ಗೆ 10 ಗಂಟೆಗೆ ಆಕಾಶದಿಂದ ಹಂಪಿ ನೋಡುವ ಆಸಕ್ತರಿಗೆ ಹಂಪಿ ಬೈ ಸೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಏನೇನು ಕಾರ್ಯಕ್ರಮಗಳಿವೆ?

ಫೆ.02 ರಂದು ಬೆಳಿಗ್ಗೆ 10 ಗಂಟೆಗೆ ಕಮಲಾಪುರ ಬಳಿಯ ಹವಾಮಾ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10.30ಕ್ಕೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸದ ಕುರಿತು ವಿಚಾರ ಸಂಕೀರ್ಣ ಹಾಗೂ ಕವಿಗೋಷ್ಠಿ ಜರುಗಲಿದೆ. ಬೆಳಿಗ್ಗೆ 11ಕ್ಕೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಬೆಂಗಳೂರಿನಿಂದ ಸುಮಾರು 50 ಹೆಚ್ಚು ಬೈಕ್‌ಗಳ ಮೂಲಕ ಹಂಪಿ ದರ್ಶನಕ್ಕಾಗಿ ಬೈಕ್ ರ‍್ಯಾಲಿ ಮೂಲಕ ಹಂಪಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ವೇದಿಕೆಗಳಲ್ಲಿ ವಿಭಿನ್ನವಾದ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಲ್ಲಿ ಸೆಲೆಬ್ರಿಟಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಫೆ.02 ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಪೊಲೀಸ್ ಅಧೀಕ್ಷಕರ ಕಚೇರಿ ಉದ್ಘಾಟನೆ. ಅಂದು ರಾತ್ರಿ 08 ಗಂಟೆಗೆ ಮುಖ್ಯಮಂತ್ರಿಗಳು ಹಾಗೂ ಇತರೆ ಗಣ್ಯರಿಂದ ವಿದ್ಯುಕ್ತವಾಗಿ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡಾ ಆಗಮಿಸಲಿದ್ದಾರೆ ಎಂದು ತಿಳಿಸಿದ ಅವರು, ರಾತ್ರಿ 11 ಗಂಟೆವರೆಗೆ ಉತ್ಸವದ 04 ವೇದಿಕೆಗಳಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಜೆಮ್ಮಿನ್ ಮತ್ತು ಉಹಿರೆ ಉಹಿರೆ ಬ್ಯಾಂಡ್ ಸಂಗೀತ, ಕಾಂತಾರ ನೃತ್ಯ ಹಾಗೂ ಹುಲಿ ನೃತ್ಯಗಳು ಡ್ರಮ್ಸ್ ಮತ್ತು ಇವೆಂಟ್ಸ್, ತಂಡ ಬೆಂಗಳೂರು ಇವರಿಂದ ಪ್ರದರ್ಶನಗೊಳ್ಳಲಿದೆ. ಅಲ್ಲದೇ ಅನುರಾಧ ಭಟ್ ಹಾಗೂ ಶಾಸ್ತ್ರೀಯ ನೃತ್ಯಗಾರರಿಂದ ಶ್ರೀ ಹಂಪಿ ವಿರೂಪಾಕ್ಷೇಶ್ವರನಿಗೆ ಭವ್ಯವಾದ ಆರಂಭಿಕ ಹಾಡು ಮತ್ತು ನೃತ್ಯ ಜರುಗಲಿದೆ. ಅದೇ ದಿನ ವಿದ್ವಾನ್ ಪ್ರವೀಣ್ ಗೋಡಕಿಂಡಿ ಮತ್ತು ತಂಡದಿಂದ ಕೊಳಲು ವಾದನ ಕಾರ್ಯಕ್ರಮ ಜರುಗಲಿದೆ. ನಂತರ ಖ್ಯಾತ ಚಲನಚಿತ್ರ ಗಾಯಕರಾದ ವಿಜಯ ಪ್ರಕಾಶ್, ಅನುರಾಧ, ಉಷಾ, ದಿವ್ಯಾ ಹಾಗೂ ಮಂಗಳ ಇವರ ತಂಡದಿದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಫೆ.03 ರಂದು ಬೆಳಿಗ್ಗೆ 10 ಗಂಟೆಗೆ ಹವಾಮಾ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮ ಕುರಿ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 11 ಗಂಟೆಗೆ ಹೊಸ ಮಲಪನಗುಡಿಯ ಹತ್ತಿರ ಸಜ್ಜುಗೊಳಿಸಿರುವ ಅಖಾಡದಲ್ಲಿ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಹಾಗೂ ಚಕ್ಕಡಿಯನ್ನು ಬಿಚ್ಚಿ ತೊಡಿಸುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಅಂದು ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ನಾಲ್ಕು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿಭಿನ್ನವಾದ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಲ್ಲಿ ಸೆಲೆಬ್ರಿಟಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಫೆ.03 ರ ರಾತ್ರಿ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ಗಣ್ಯರಿಂದ ಎರಡನೇ ದಿನದ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಖ್ಯಾತ ಚಲನಚಿತ್ರ ನಟ ದರ್ಶನ್ ತೂಗದೀಪ್ ಉಪಸ್ಥಿತರಿರುವರು. ಅಂದು ರಾತ್ರಿ 11 ಗಂಟೆವರೆಗೆ ಉತ್ಸವದ ನಾಲ್ಕು ವೇದಿಕೆಗಳಲ್ಲಿ 4 ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಕೋಲ್ಕತ್ತಾದ ಗೋಲ್ಡನ್ ಗರ್ಲ್ಸ್ ತಂಡದಿಂದ ಗಣಪತಿ ನೃತ್ಯ, ಶಿವನ ನೃತ್ಯ ಹಾಗೂ ಭಕ್ತಿ ನೃತ್ಯ ರೂಪಕಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೇ ಗಂಗಾವತಿ ಪ್ರಾಣೇಶ್ ಇವರಿಂದ ಹಾಸ್ಯ ಸಂಜೆ ಜರುಗಲಿದೆ. ವೈಜಯಂತಿ ಕಾಶಿ ಅವರಿಂದ ನೃತ್ಯ ರೂಪಕ ಜರುಗಲಿದೆ. ಬಳಿಕ ಖ್ಯಾತ ಕಲಾವಿದರಿಂದ ತಂತಿ ವಾದ್ಯಗಳ ಗೋಷ್ಠಿ ಹಾಗೂ ಶಹನಾಯಿ ವಾದನ ಕಾರ್ಯಕ್ರಮಗಳು, ಅದೇ ದಿನ ರ‍್ಯಾಪ್ ಸಂಗೀತಗಾರರಾದ ಆಲ್‌ಓಕೆ ತಂಡ ಸಂಗೀತ ಕಾರ್ಯಕ್ರಮ ನೀಡಲಿದೆ. ಅದೇ ದಿನ 10 ಗಂಟೆಯ ನಂತರ ಖ್ಯಾತ ಸಂಗೀತ ಸಂಯೋಜಕ ವಿ.ಹರಿಕೃಷ್ಣ ಮತ್ತು ಗಾಯಕರಾದ ಹೇಮಂತ, ಸಂತೋಷ, ವೆಂಕಿ, ಅನಿರುದ್ಧ ಶೆಟ್ಟಿ, ವಾಲಿ, ಇಂದು ನಾಗರಾಜ್ ಹಾಗೂ ಇತರರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಫೆ.04 ರಂದು ಬೆಳಿಗ್ಗೆ 10ಗಂಟೆಗೆ ಎಚ್.ಡಬ್ಲೂ.ಎಚ್.ಎ.ಎಂ.ಎ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮವಾದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಜಾನಪದ ವಾಹಿನಿ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಈ ಮೆರವಣಿಗೆಯಲ್ಲಿ ಸುಮಾರು 35 ಕಲಾ ತಂಡಗಳು ಭಾಗವಹಿಸಲಿವೆ. ಅಲ್ಲದೇ ಹಂಪಿಯ ದೇವಸ್ಥಾನ ಲಕ್ಷ್ಮೀ ಆನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ನಾಲ್ಕು ವೇದಿಕೆಗಳಲ್ಲಿ ಏಕ ಕಾಲದಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅಂದು ರಾತ್ರಿ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ವಿ.ರವಿಚಂದ್ರನ್ ಉಪಸ್ಥಿತರಿರುವರು.

ಫೆ.04 ರ ರಾತ್ರಿ 11 ಗಂಟೆವರೆಗೆ ಉತ್ಸವದ ನಾಲ್ಕು ವೇದಿಕೆಗಳಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಾದ ಗಾಯತ್ರಿ ಪೀಠದಲ್ಲಿ ಚಲನಚಿತ್ರ ನಟರಾದ ಅರ್ಮುಗಂ ರವಿಶಂಕರ್, ಅಜಯ್ ರಾವ್, ನೆನಪಿರಲಿ ಪ್ರೇಮ್, ರಾಗಿಣಿ ದ್ವಿವೇದಿ. ನಮ್ರತಾ ಗೌಡ. ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಜಾಹಿದ್ ಅಹಮ್ಮದ್ ಖಾನ್, ಸತ್ಯನಾರಾಯಣ್ ಶೆಟ್ಟಿ, ಸಂಯುಕ್ತ ಹೆಗ್ಡೆ ಹಾಗೂ ದಿಗಂತ ಅವರಿಂದ ವಿವಿಧ ನೃತ್ಯ ಹಾಗೂ ಗಾಯನಗಳು ನಡೆಯಲಿವೆ. ಅದೇ ದಿನ 10 ಗಂಟೆಯ ನಂತರ ಖ್ಯಾತ ಸಂಗೀತ ಸಂಯೋಜಕ ಸಾಧು ಕೋಕಿಲ ಮತ್ತು ಗಾಯಕರಾದ ಕಲಾವತಿ, ಸುನೀತ, ವಾಣಿ ಹರಿಹರನ್, ಉಷಾ, ಮಂಗಳಾ ಮುಂತಾದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಇದನ್ನೂ ಓದಿ: Vijayanagara News: ಹಂಪಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಡಿಸಿ ಎಂ.ಎಸ್.ದಿವಾಕರ್‌

Exit mobile version