ಭಾರತ ಹಾಗೂ ಶ್ರೀಲಂಕೆಯ ನಡುವೆ ಇರುವ ಕಚ್ಚತೀವು ಎಂಬ ದ್ವೀಪ (Katchatheevu Island) ಈಗ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇದು ಪ್ರಾರಂಭವಾದದ್ದು ತಮಿಳುನಾಡಿನಲ್ಲಿ ಮೊನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಭಾಷಣದಲ್ಲಿ ಮಾಡಿದ ಒಂದು ಉಲ್ಲೇಖದಿಂದ. 1974ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಶ್ರೀಲಂಕಾಕ್ಕೆ ಈ ದ್ವೀಪವನ್ನು ಹಸ್ತಾಂತರಿಸಿದ್ದರು. ಇದರ ಬಗ್ಗೆ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭಾರತಕ್ಕೆ ಅತ್ಯಂತ ಆಯಕಟ್ಟಿನ ಜಾಗದಲ್ಲಿದ್ದ ಈ ದ್ವೀಪವನ್ನು ಬಹು ಸುಲಭವಾಗಿ ಹೇಗೆ ಕಾಂಗ್ರೆಸ್ ನಿರ್ಯೋಚನೆಯಿಂದ ಬಿಟ್ಟುಕೊಟ್ಟಿತು ಎಂಬುದನ್ನು ಮೋದಿ ನೆನೆದಿದ್ದರು. ಇಂದು ನೋಡಿದಾಗ, ಇದು ಎಷ್ಟು ಅಪಾಯಕಾರಿಯಾದ ಐತಿಹಾಸಿಕ ಪ್ರಮಾದವಾಗಿದೆ ಎಂಬುದು ಎದ್ದು ಕಾಣುತ್ತಿದೆ.
ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿ ಪಾಕ್ ಜಲಸಂಧಿಯಲ್ಲಿ ಇರುವ, 1.9 ಚದರ ಕಿಮೀ ವಿಸ್ತೀರ್ಣದ ಈ ದ್ವೀಪದ ಮೇಲೆ ಮೊದಲಿನಿಂದಲೂ ಭಾರತದ ಹಿಡಿತವಿತ್ತು. ಕಚ್ಚತೀವು ಜನವಸತಿ ಇಲ್ಲದ ದ್ವೀಪ. ಬಹುಶಃ 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡಿರಬಹುದು. ಇಲ್ಲಿನ 285 ಎಕರೆ ಭೂಮಿಯಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸಿದ್ದವು. 17ನೇ ಶತಮಾನದಲ್ಲಿ, ರಾಮೇಶ್ವರಂನಿಂದ ವಾಯುವ್ಯಕ್ಕೆ ಸುಮಾರು 55 ಕಿಮೀ ದೂರದಲ್ಲಿರುವ ರಾಮನಾಥಪುರಂ ಮೂಲದ ರಾಮನಾಡ್ ಜಮೀನ್ದಾರರಿಗೆ ಇದರ ನಿಯಂತ್ರಣವನ್ನು ನೀಡಲಾಯಿತು. 1921ರಲ್ಲಿ ಶ್ರೀಲಂಕಾ ಮತ್ತು ಭಾರತ ಎರಡೂ ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು. 20ನೇ ಶತಮಾನದ ಆರಂಭದಲ್ಲಿ ರಚಿಸಿದ ಕ್ಯಾಥೋಲಿಕ್ ದೇವಾಲಯ ಸೇಂಟ್ ಆಂಥೋನಿ ಚರ್ಚ್ ಮಾತ್ರ ಇಲ್ಲಿರುವ ಕಟ್ಟಡ. ಭಾರತ ಮತ್ತು ಶ್ರೀಲಂಕಾ ಎರಡರಿಂದಲೂ ಇಲ್ಲಿಗೆ ಭಕ್ತರು ವಾರ್ಷಿಕ ಉತ್ಸವದ ಸಮಯದಲ್ಲಿ ತೀರ್ಥಯಾತ್ರೆ ಮಾಡುತ್ತಾರೆ.
1925ರಿಂದ ಶ್ರೀಲಂಕಾ ಇಲ್ಲಿ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸಲು ತೊಡಗಿತು. ಸ್ವಾತಂತ್ರ್ಯಾನಂತರ, ಶ್ರೀಲಂಕಾ ತನ್ನ ಅನುಮತಿಯಿಲ್ಲದೆ ಭಾರತೀಯ ನೌಕಾಪಡೆಯು ದ್ವೀಪದಲ್ಲಿ ಕಾಲಿಡಲು ಅನುಮತಿಸಲಿಲ್ಲ. ದ್ವೀಪವನ್ನು ರಕ್ಷಿಸಿಕೊಳ್ಳಬೇಕಾಗಿದ್ದ ಪ್ರಧಾನಿ ನೆಹರೂ, ಈ ವಿಷಯವನ್ನು ಅಷ್ಟು ಮಹತ್ವದ್ದಲ್ಲ ಎಂದು ತಳ್ಳಿಹಾಕಿದರು. “ನಾನು ಈ ಚಿಕ್ಕ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ನೆಹರು 1961ರಲ್ಲಿ ಹೇಳಿದರು. ಅವರ ಈ ಹೇಳಿಕೆಯನ್ನು ನೋಡಿದಾಗ, ಸಿಯಾಚಿನ್ ಬಗೆಗೆ ಕೂಡ ಅವರು ಇಂಥದೇ ಹೇಳಿಕೆ ನೀಡಿದ್ದು ನೆನಪಾಗುತ್ತದೆ. ಸಿಯಾಚಿನ್ ಮೇಲೆ ಚೀನೀಯರ ಆಕ್ರಮಣದ ಆತಂಕ ಇದ್ದಾಗ “ಅಲ್ಲಿ ಹುಲ್ಲುಗರಿಕೆ ಕೂಡ ಬೆಳೆಯುವುದಿಲ್ಲ” ಎಂದಿದ್ದರು ನೆಹರೂ. ಅರುಣಾಚಲ ಪ್ರದೇಶದ ಮೇಲೆ ಚೀನಾ ಕತ್ತಿ ಮಸೆಯುತ್ತಿದ್ದಾಗ ಚೀನಾಗೆ ತೆರಳಿ ʼಹಿಂದಿ ಚೀನಿ ಭಾಯಿ ಭಾಯಿʼ ಎಂದವರೂ ಆವರೇ. ಇಂಥ ಹಲವು ಐತಿಹಾಸಿಕ ಪ್ರಮಾದಗಳಿಗೆ ನೆಹರೂ ಕಾರಣಕರ್ತರಾಗಿದ್ದಾರೆ.
1974ರಲ್ಲಿ ಭಾರತ ಸರ್ಕಾರವು ದ್ವೀಪವನ್ನು ಶ್ರೀಲಂಕಾಕ್ಕೆ ದ್ವಿಪಕ್ಷೀಯ ಒಪ್ಪಂದದಲ್ಲಿ ಹಸ್ತಾಂತರಿಸಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ, ಈ ಬಗ್ಗೆ ಎರಡನೇ ಯೋಚನೆಯನ್ನೇ ಮಾಡಲಿಲ್ಲ. “ದ್ವೀಪವು ವಿವಾದಿತ ಸ್ಥಳ” ಆಗಿರುವುದರಿಂದ ಮತ್ತು “ಉತ್ತಮ ದ್ವಿಪಕ್ಷೀಯ ಸಂಬಂಧಗಳ ಅಗತ್ಯವಿರುವುದರಿಂದ” “ಭಾರತ ಬಾಂಧವ್ಯವನ್ನು ಸಮತೋಲನ ಮಾಡಬೇಕಿ”ರುವುದರಿಂದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಇಂದಿರಾ ಸರ್ಕಾರ ಹೇಳಿತು. ಇದೊಂದು ಮೂರ್ಖ ನಿರ್ಧಾರವಾಗಿತ್ತು. ನೆರೆಹೊರೆಯವರ ಉತ್ತಮ ಬಾಂಧವ್ಯ ನಾವು ಎಷ್ಟು ಬಿಟ್ಟುಕೊಡುತ್ತೇವೆ ಎಂಬುದರ ಮೇಲೆ ಇದ್ದರೆ, ಸಾತ್ವಿಕ ಪ್ರವೃತ್ತಿಯವರು ಸದಾ ಬಿಟ್ಟುಕೊಡುತ್ತಲೇ ಇರಬೇಕಾಗುತ್ತದೆ. “ಭಾರತದ ಸ್ನೇಹದ ಸಂಕೇತವಾಗಿ ಕಚ್ಚತೀವು ದ್ವೀಪ ಬಿಟ್ಟುಕೊಟ್ಟೆವು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಇದೇ ತರ್ಕವನ್ನು ಮುಂದುವರಿಸಿದರೆ ಅರುಣಾಚಲ ಪ್ರದೇಶವನ್ನು ಚೀನಾಗೂ, ಕಾಶ್ಮೀರವನ್ನು ಪಾಕಿಸ್ತಾನಕ್ಕೂ ಬಿಟ್ಟುಕೊಟ್ಟು ನಾವು ನಮ್ಮ ಸ್ನೇಹವನ್ನು ಸಾಬೀತುಪಡಿಸಬೇಕಾಗುತ್ತದೆ! ಡಿಎಂಕೆ ನಾಯಕ ಸ್ಟಾಲಿನ್ ಕೂಡ ಇಂಥದೇ ನಿಲುವನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ವೈರಲ್‌ಗಾಗಿ ಅಶ್ಲೀಲತೆ, ಹುಚ್ಚಾಟ; ಕಠಿಣ ಕ್ರಮ ಅಗತ್ಯ
ಕಚ್ಚತೀವು ದ್ವೀಪ ಲಂಕೆ ಹಾಗೂ ಭಾರತದ ನಡುವೆ ಇದೆ. ಇದೊಂದು ಆಯಕಟ್ಟಿನ ಜಾಗ. ಇಲ್ಲಿಂದ ಭಾರತದ ಹಲವು ಬಂದರುಗಳ ಮೇಲೆ ಕಣ್ಣಿಡಬಹುದು. ಸ್ನೇಹದ ಹೆಸರಿನಲ್ಲಿ ದ್ವೀಪವನ್ನೇನೋ ಲಂಕೆಗೆ ಕೊಟ್ಟಾಯಿತು. ಆದರೆ ಲಂಕಾ ಆ ಸ್ನೇಹವನ್ನು ಉಳಿಸಿಕೊಂಡಿತೇ? ಭಾರತ ಮಾಡಿದ ಸಹಾಯವನ್ನೆಲ್ಲಾ ಮರೆತು ಅದು ಚೀನಾದ ಸ್ನೇಹಹಸ್ತಕ್ಕೆ ಕೈಚಾಚಿಲ್ಲವೇ? ಸ್ನೇಹ ಬೆಳೆಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರೆ ಪುರಾತನ ಮಿತ್ರ ಭಾರತದ ಶತ್ರು ಚೀನಾದ ಸೈನ್ಯಕ್ಕೆ ತನ್ನಲ್ಲಿ ನೆಲೆ ಕಲ್ಪಿಸಿಕೊಡುವ ಕೃತಘ್ನತೆಯನ್ನು ಅದು ತೋರಿತು. ಈಗ ದ್ವೀಪವೂ ಇಲ್ಲ. ಲಂಕಾದ ಸ್ನೇಹವೂ ಇಲ್ಲ ಎಂಬಂತಾಗಿದೆ. ಚೀನಾದ ನೌಕಾನೆಲೆ ಇಲ್ಲಿ ಯಾವಾಗ ಬೇಕಾದರೂ ನೆಲೆಯೂರಬಹುದಾದ ಕಾರಣ ಆ ದ್ವೀಪ ಈಗ ಭಾರತಕ್ಕೆ ಬೆದರಿಕೆಯೂ ಹೌದು. ಆ ದ್ವೀಪದ ಬಳಿ ಮೀನು ಹಿಡಿಯಲು ಹೋಗುವ ಭಾರತದ ಮೀನುಗಾರರನ್ನು ಶ್ರೀಲಂಕಾ ಬಂಧಿಸಿ ಹಿಂಸಿಸುತ್ತಿದೆ. ಇಂಥ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವವರನ್ನು ಏನು ಹೇಳೋಣ? ಕೊನೆಯ ಪಕ್ಷ ಅದು ತಪ್ಪಾಗಿತ್ತು ಎಂದಾದಾರೂ ಹೇಳುವ ಛಾತಿ ತೋರಿಸಬೇಕಲ್ಲವೇ?