ಚಂಡೀಗಢ: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲ ಕಂಪನಿಗಳಲ್ಲಿ ದೀಪಾವಳಿ ಬೋನಸ್ ಕುರಿತು ಚರ್ಚೆಯಾಗುತ್ತಿದೆ. ಕಂಪನಿಗಳೂ ದೀಪಾವಳಿ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಬೋನಸ್ ಹಾಗೂ ಸ್ವೀಟ್ ಕೊಟ್ಟು ಅವರ ಹಬ್ಬದ ಖುಷಿ ಹೆಚ್ಚಿಸುತ್ತವೆ. ಆದರೆ, ಹರಿಯಾಣದಲ್ಲಿ ಫಾರ್ಮಾ ಕಂಪನಿ (Haryana Pharma Company) ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ (Diwali Gift) ಹಿನ್ನೆಲೆಯಲ್ಲಿ ಟಾಟಾ ಪಂಚ್ (Tata Punch) ಕಾರುಗಳನ್ನೇ ಉಡುಗೊರೆ ನೀಡುವ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಹರಿಯಾಣದ ಪಂಚ್ಕುಲ ಮೂಲದ ಮಿಟ್ಸ್ಕಾರ್ಟ್ (MitsKart) ಎಂಬ ಫಾರ್ಮಾ ಕಂಪನಿಯ ಮಾಲೀಕರಾದ ಎಂ.ಕೆ. ಭಾಟಿಯಾ ಅವರು ಕಂಪನಿಯ 12 ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಟಾಟಾ ಪಂಚ್ ಕಾರುಗಳನ್ನು ನೀಡಿದ್ದಾರೆ. ಎಂ.ಕೆ. ಭಾಟಿಯಾ ಅವರು ಕಂಪನಿ ಉದ್ಯೋಗಿಗಳಿಗೆ ಕಾರುಗಳ ಕೀ ಕೊಟ್ಟಿರುವ ಸಂಗತಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ, ಉದ್ಯೋಗಿಗಳಿಗೆ ಕಾರುಗಳನ್ನೇ ಗಿಫ್ಟ್ ಕೊಟ್ಟು ಹೃದಯ ವೈಶಾಲ್ಯ ಮೆರೆದ ಬಾಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
“ಕೆಲವು ವರ್ಷಗಳ ಹಿಂದೆ ನಾನು ಕಂಪನಿ ಆರಂಭಿಸಿದಾಗ ಅಷ್ಟೇನೂ ಲಾಭ ಇರಲಿಲ್ಲ. ಆದರೆ, ನಮ್ಮ ಕಂಪನಿಯ ಪರಿಶ್ರಮ ಹಾಗೂ ಬದ್ಧತೆಯಿಂದಾಗಿ ಇಂದು ಲಾಭದತ್ತ ಸಾಗುತ್ತಿದ್ದೇವೆ. ಹಾಗಾಗಿ, ಹೆಚ್ಚು ಶ್ರಮ ವಹಿಸಿದ, ಬದ್ಧತೆಯಿಂದ ಕೆಲಸ ಮಾಡಿದ 12 ನೌಕರರಿಗೆ ಟಾಟಾ ಪಂಚ್ ಕಾರುಗಳನ್ನು ಉಡುಗೊರೆ ನೀಡಿದ್ದೇವೆ. 12 ನೌಕರರಲ್ಲಿ ಕಂಪನಿಯ ಆಫೀಸ್ ಸಹಾಯಕ ಕೂಡ ಇದ್ದಾರೆ. ಮುಂದಿನ ದಿನಗಳಲ್ಲಿ 12 ಉದ್ಯೋಗಿಗಳಲ್ಲ 50 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡುವ ಯೋಜನೆ ಇದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬಾ ಲಾಟರಿ; 1,200 ನೌಕರರನ್ನು ಜಪಾನ್ ಟ್ರಿಪ್ಗೆ ಕಳುಹಿಸಿದ ಅಮೆರಿಕ ಕಂಪನಿ ಬಾಸ್!
ಒಟ್ಟಿನಲ್ಲಿ ಕಂಪನಿ ಬಾಸ್ಗಳು ಎಂದರೆ ಯಾವಾಗಲೂ ಸಿಡುಕು ಮೂತಿಯವರು, ಉದ್ಯೋಗಿಗಳಿಗೆ ಹಚ್ಚಿನ ಕೆಲಸ ನೀಡಿ, ತಾವು ಚೆನ್ನಾಗಿ ಇರುವವರು, ಹೆಚ್ಚು ಸಂಬಳ ನೀಡದೆ, ವೇತನ ಹೆಚ್ಚಿಸದೆ ಲಾಭವನ್ನಷ್ಟೇ ನೋಡುವವರು ಎಂಬ ಬೇಸರದ ಮಾತುಗಳು ಕೇಳಿಬರುವ ಸಂದರ್ಭದಲ್ಲಿ ಹರಿಯಾಣದ ಕಂಪನಿ ಚೇರ್ಮನ್ ಎಂ.ಕೆ. ಭಾಟಿಯಾ ಅವರು ಉದ್ಯೋಗಿಗಳಿಗೆ ಕಾರುಗಳನ್ನೇ ಉಡುಗೊರೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇದರಿಂದ ಕಂಪನಿಯ ಬೇರೆ ನೌಕರರು ಶ್ರಮವಹಿಸಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಟಾಟಾ ಪಂಚ್ನ ಕಾರುಗಳ ಬೆಲೆಯು 6 ಲಕ್ಷ ರೂ.ನಿಂದ ಆರಂಭವಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ