ಬೆಂಗಳೂರು: ದೇಶದ ಜನತೆಗೆ ಕೌತುಕ ಮೂಡಿಸಿರುವ ಹಾಗೂ ಸಾವಿರಾರು ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಹಗರಣ ಕೇಂದ್ರ ಸ್ಥಾನವಾಗಿದ್ದ ಹಾಸನ ಲೋಕ ಸಭಾ ಕ್ಷೇತ್ರದಲ್ಲಿ (Hassan Election Result 2024) ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ (6,72,988 ಮತಗಳು) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸದ್ಯ ಎಸ್ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ (6,30,339 ಮತಗಳು) ವಿರುದ್ಧ 42,649 ಮತಗಳ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದ ಜನತೆ ಪ್ರಜ್ವಲ್ಗೆ ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ದೇವೇಗೌಡರ ಕುಟುಂಬದ ಬಿಗಿ ಹಿಡಿತದಿಂದ ಹಾಸನ ಕ್ಷೇತ್ರ ಕೈತಪ್ಪಿದೆ.
- ಶ್ರೇಯಸ್ ಪಟೇಲ್ (ಕಾಂಗ್ರೆಸ್)- 6,72,988 ಮತಗಳು
- ಪ್ರಜ್ವಲ್ ರೇವಣ್ಣ (ಜೆಡಿಎಸ್)- 6,30,339 ಮತಗಳು
- ಗೆಲುವಿನ ಅಂತರ- 42,649 ಮತಗಳು
2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು..2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು.
2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿತ್ತು.
ಪ್ರಮುಖ ಕ್ಷೇತ್ರ ಹಾಸನ
ಹಾಸನ ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು. 1957ರಲ್ಲಿ ಈ ಕ್ಷೇತ್ರವನ್ನು ಹಾಸನ ಎಂದು ಗುರುತಿಸಲಾಯಿತು. 1974 ರಲ್ಲಿ, ಹಾಸನ ಕ್ಷೇತ್ರವು ಕರ್ನಾಟಕದ ಭಾಗವಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜನತಾದಳದಿಂದ ಹಾಗೂ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿರುವ ಈ ನಗರವು ಹೊಯ್ಸಳ ರಾಜರ ಪ್ರಾಚೀನ ತಾಣಗಳಿಗೆ ನೆಲೆಯಾಗಿದೆ. ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2,016,000. ಈ ಪೈಕಿ 1,561,000 ಮತದಾರರಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಜನಸಂಖ್ಯೆಯ ಸುಮಾರು 78% ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, 22% ರಷ್ಟು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.
ಹಾಸನ ಲೋಕಸಭೆ ಕ್ಷೇತ್ರ ಸಾಮಾನ್ಯ ವರ್ಗದ ಸಂಸತ್ ಸ್ಥಾನವಾಗಿದೆ. ಇದು ಇಡೀ ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗವನ್ನು ಒಳಗೊಂಡಿದೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2 ಸ್ಥಾನಗಳನ್ನು ಹೊಂದಿವೆ.
2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಬಿಜೆಪಿಯ ಕೆ.ಎಚ್.ಹನುಮೇಗೌಡ ಅವರನ್ನು 2,91,113 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.50.63ರಷ್ಟು ಮತಗಳನ್ನು ಪಡೆದಿತ್ತು.
ದೇವೇಗೌಡ ಕುಟುಂಬದ ಭದ್ರಕೋಟೆ
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ಪಕ್ಷ ಮತ್ತು ಕುಟುಂಬದ ಭದ್ರಕೋಟೆಯಾಗಿ ಪರಿವರ್ತಿಸಿದ್ದಾರೆ. 1991ರಲ್ಲಿ ಅವರ ಮೊದಲ ವಿಜಯದ ನಂತರ, ಅವರು 1998, 2004, 2009 ಮತ್ತು 2014 ರಲ್ಲಿ ಮರು ಆಯ್ಕೆಯಾದರು.
ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2016000. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 69.34% ರಷ್ಟಿತ್ತು. ಎಸ್ಸಿ ಮತದಾರರು ಸುಮಾರು 19.5% ರಷ್ಟಿದ್ದರೆ, ಎಸ್ಟಿ ಮತದಾರರು ಸುಮಾರು 1.8% ರಷ್ಟಿದ್ದಾರೆ. ಸುಮಾರು 1294690 ಗ್ರಾಮೀಣ ಮತದಾರರು 78.4% ರಷ್ಟಿದ್ದಾರೆ.