Site icon Vistara News

Hassan Landslide: ಗುಡ್ಡ ಕುಸಿದು ಕತ್ತರಿಸಿಹೋದ ರಸ್ತೆ; 10 ಗ್ರಾಮಗಳ ಸಂಪರ್ಕ ಕಟ್;‌ ಎತ್ತಿನಹೊಳೆ ಕಾಮಗಾರಿಯೇ ಕಾರಣ

hassan landslide

ಹಾಸನ: ಹಾಸನ (Hassan news) ಜಿಲ್ಲೆಯಲ್ಲಿ ಮಳೆ ಹಾವಳಿ (karanataka Rain News) ಮುಂದುವರಿದಿದೆ. ಸಕಲೇಶಪುರ (Sakaleshpur) ಬಳಿ ಗುಡ್ಡ ಕುಸಿತದಿಂದ (Landslide) ಸುಮಾರು 200 ಅಡಿಗಳಷ್ಟು ದೂರದ ರಸ್ತೆಯೇ ಕತ್ತರಿಸಿಹೋಗಿ, ಮಂಗಮಾಯವಾಗಿದೆ. ಭಾರಿ ಭೂಕುಸಿತ ಉಂಟಾಗಿರುವ ಕಾರಣ ರಸ್ತೆ ಸರ್ವನಾಶವಾಗಿದ್ದು, ಇದರಿಂದ ಸಂಪರ್ಕಿತರಾಗಿದ್ದ ಸುಮಾರು 10 ಗ್ರಾಮಗಳ ಜನತೆ ಸಂಪರ್ಕ (communication cut) ಕಳೆದುಕೊಂಡಿದ್ದಾರೆ. ಈ ರಸ್ತೆಯ ಸಮೀಪದಲ್ಲಿ ಎತ್ತಿನಹೊಳೆ (Ettinahole project) ಪೈಪ್‌ಲೈನ್‌ ಹಾದುಹೋಗಿದ್ದು, ಅವೈಜ್ಞಾನಿಕವಾಗಿರುವ ಇದರ ಕಾಮಗಾರಿಯೇ ಈ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಾಸನದಲ್ಲಿ ಮುಂದುವರೆದ ಮಳೆಯ ಅಬ್ಬರದ ಪರಿಣಾಮ ಉಂಟಾಗುತ್ತಿರುವ ಭೂಕುಸಿತಗಳ ಸಾಲಿಗೆ ಸಕಲೇಶಪುರದ ಬಳಿಯ ಈ ಬೃಹತ್ ಪ್ರಮಾಣದ ಭೂ ಕುಸಿತ ಸೇರಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತವಾಗಿದೆ. 200 ಮೀಟರ್‌ಗೂ ಹೆಚ್ಚು ದೂರ ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕ ಕಟ್ ಆಗಿದೆ. ಈ ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ ಎಂದು ಆರೋಪಿಸಲಾಗಿದೆ.

ಮುಂದುವರಿದ ಹಳಿ ತೆರವು

ಶಿರಾಡಿ ಘಾಡಿಯಲ್ಲಿ ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡವನ್ನು ತೆರವು ಮಾಡುವ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಯುತ್ತಿದ್ದು, 420ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಹದಿನೈದು ದಿನಗಳ ಕಾಲ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ರೈಲು ಮಾರ್ಗ ಬಂದ್ ಆಗಿದೆ. ಕಾರ್ಯಾಚರಣೆಗೆ ಸತತ ಮಳೆ ಅಡ್ಡಿಯಾಗುತ್ತಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸಿದ್ದಾರೆ.

ಕೊಡಗಿನಲ್ಲಿ ಬಿರುಸುಗೊಂಡ ಮಳೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ಬ್ರಹ್ಮಗಿರಿ ತಪ್ಪಲಿನಲ್ಲಿ ನಿನ್ನೆಯಿಂದ ಧಾರಾಕಾರ‌ ಮಳೆಯಾಗುತ್ತಿದೆ. ಕಾವೇರಿ, ಕನ್ನಿಕೆ, ಸುಜೋತಿ ನದಿಗಳು ಉಕ್ಕಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮ‌ ಮತ್ತೆ ಸಂಪೂರ್ಣ ಭರ್ತಿಯಾಗಿದ್ದು, 2ನೇ ಬಾರಿಗೆ ಭಗಂಡೇಶ್ವರ ದೇಗುಲದ ಮೆಟ್ಟಿಲವರೆಗೆ ನೀರು ಬಂದಿದೆ. ಮಡಿಕೇರಿ – ತಲಕಾವೇರಿ ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ನೀರು ನಿಂತಿದೆ. ಭಾಗಮಂಡಲದ ಮೇಲ್ಸೇತುವೆ ಮೇಲೆ‌ ವಾಹನಗಳ ಓಡಾಟ ನಡೆದಿದೆ.

ಹಾರಿಹೋದ ಮನೆಗಳ ಸೂರುಗಳು

ಕಾರವಾರ: ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಭಾರೀ ಗಾಳಿಗೆ 20ಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ನಡೆದಿದೆ. ಸುಧಾ ಹರಿಕಾಂತ, ನಿರ್ಮಲಾ ದುರ್ಗೇಕರ್, ಶೋಭಾ ದುರ್ಗೇಕರ್ ಸೇರಿ 20ಕ್ಕೂ ಅಧಿಕ ನಿವಾಸಿಗಳ ಮೇಲ್ಛಾವಣಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಭಾರೀ ಗಾಳಿಗೆ ತಗಡಿನ ಶೀಟ್‌ಗಳಿದ್ದ ಮೇಲ್ಛಾವಣಿ ಹಾರಹೋಗಿವೆ. ಕೆಲವರ ಹೆಂಚಿನ ಮನೆಗಳಿಗೂ ಹಾನಿಯಾಗಿದ್ದು, ಹೆಂಚಿನ ತುಂಡು ತಲೆಗೆ ಬಿದ್ದು ಮನೆಯವರು ಗಾಯಗೊಂಡರು.

ಇದನ್ನೂ ಓದಿ: Ankola landslide: ಉತ್ತರ ಕನ್ನಡದ ರಾ. ಹೆದ್ದಾರಿ; ಕಾಮಗಾರಿ ಮುಗಿಸದೆ ಟೋಲ್ ಸಂಗ್ರಹ ಏಕೆ? ಗುತ್ತಿಗೆದಾರ ಕಂಪನಿಗೆ ಸಿಎಂ ತರಾಟೆ

Exit mobile version