Site icon Vistara News

HD Kumaraswamy: ಕೃಷಿ ಖಾತೆ ಬಯಸಿದ್ದ ಎಚ್‌ಡಿಕೆ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ತುಟಿ ಬಿಚ್ಚಲೇ ಇಲ್ಲ!

HD Kumaraswamy NDA government

ಬೆಂಗಳೂರು: ನೂತನ ಸರ್ಕಾರ ರಚನೆಯ (Central Government) ಕುರಿತು ನಿನ್ನೆ ನಡೆದ ಎನ್‌ಡಿಎ (NDA) ಮೈತ್ರಿ ಕೂಟದ ಸಭೆಯಲ್ಲಿ ಮಾಜಿ ಸಿಎಂ, ಜೆಡಿಎಸ್‌ (JDS) ನಾಯಕ ಎಚ್. ಡಿ ಕುಮಾರಸ್ವಾಮಿ (HD Kumaraswamy) ಭಾಗಿಯಾದರು. ಆದರೆ, ಸಭೆಗೆ ತೆರಳುವ ಮುನ್ನ ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ (Agriculture) ಪಡೆಯುವ ಬಗ್ಗೆ ಮನದ ಇಂಗಿತ ವ್ಯಕ್ತಪಡಿಸಿದ್ದ ಎಚ್‌ಡಿಕೆ, ಅಲ್ಲಿ ಈ ಕುರಿತು ಯಾವುದೇ ಮಾತನಾಡಲಿಲ್ಲ ಎಂದು ತಿಳಿದುಬಂದಿದೆ.

ದೆಹಲಿಗೆ ಬರುತ್ತಿದ್ದಂತೆ, ಮಾಧ್ಯಮದ ಮುಂದೆ ಕೃಷಿ ಖಾತೆ ಸಿಕ್ಕರೆ ತಾನು ನಿಭಾಯಿಸಬಲ್ಲೆ ಎಂದು ಮಾಜಿ ಸಿಎಂ ಹೇಳಿದ್ದರು. ಎಲ್ಲರ ಆಶಯವೂ ಅದೇ ಆಗಿದೆ, ನನಗೆ ಕೃಷಿ ಖಾತೆ ನೀಡಬೇಕು ಎಂಬುದಾಗಿದೆ. ನಾನು ಕೂಡ ಕೃಷಿ ಸಚಿವನಾಗಿ ಕರ್ತವ್ಯ ನಿಭಾಯಿಸಬಲ್ಲೆ ಎಂದಿದ್ದರು.

ಆದರೆ ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಗೂ, NDA ಸಭೆಯಲ್ಲಿ ಆದ ಬೆಳವಣಿಗೆಗೂ ಬಹಳಷ್ಟು ಅಂತರ ಕಂಡುಬಂದಿದೆ. NDA ಸಭೆಯಲ್ಲಿ ಮಂತ್ರಿ ಸ್ಥಾನದ ಬಗ್ಗೆ ಕುಮಾರಸ್ವಾಮಿ ತುಟಿ ಬಿಚ್ಚಲಿಲ್ಲ ಎನ್ನಲಾಗಿದೆ. ಮೊದಲು ಎನ್‌ಡಿಎ ಸರ್ಕಾರ ರಚನೆ ಆಗಲಿ, ಅದೇ ಸಂತೋಷ. ಬಳಿಕ ಮಂತ್ರಿ ಸ್ಥಾನದ ಬಗ್ಗೆ ನೋಡೋಣ ಎಂದಿದ್ದಾರೆ.

ಸಭೆ ಕ್ಲುಪ್ತವಾಗಿ ಮುಗಿಯುತು. ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಮಾತಿಗೆ ಎಚ್‌ಡಿಕೆ ಸಹಮತ ವ್ಯಕ್ತಪಡಿಸಿದರು. ಎಲ್ಲರೂ ಎನ್‌ಡಿಎಗೆ ತಮ್ಮ ಸಹಕಾರ ವ್ಯಕ್ತಪಡಿಸಿದರು. ಮಿತ್ರಪಕ್ಷಗಳಿಂದ ಔಪಚಾರಿಕವಾಗಿ ಸಮ್ಮತಿ ಪತ್ರ ಪಡೆಯುವ ಪ್ರಕ್ರಿಯೆ ನಡೆದಿದ್ದು, ಇಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಎನ್‌ಡಿಎ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. “ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಿತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೊಂದು ವೇಳೆ, ನರೇಂದ್ರ ಮೋದಿ ಅವರು ಬಯಸಿದರೆ ನಾನು ಸಚಿವನಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ” ಎಂಬುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಮಾಡಿಕೊಂಡಿರುವುದರಿಂದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕೂಡ ಸಹಕಾರಿಯಾಗಿದೆ. ಹಾಗಾಗಿ, ಕುಮಾರಸ್ವಾಮಿ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ (PM Narendra Modi) ಅವರಿಗೆ ಬೆಂಬಲ ಸೂಚಿಸಿದರು. ಮೈತ್ರಿಕೂಟದ ಸರ್ಕಾರ ರಚನೆಗೆ ಕುರಿತು ತೆಗೆದುಕೊಂಡ ಒಂದು ಸಾಲಿನ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಿದರು. ಖಾತೆ ಹಂಚಿಕೆ, ಯಾವ ಖಾತೆ ಯಾರಿಗೆ ನೀಡಬೇಕು ಎಂಬುದರ ಕುರಿತು ಆಮೇಲೆ ನೋಡಿಕೊಳ್ಳೋಣ. ಮೊದಲು ಸರ್ಕಾರ ರಚನೆಯಾಗಲಿ ಎಂಬುದಾಗಿ ಎಲ್ಲ ನಾಯಕರು ಮೋದಿ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

Exit mobile version