ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ (HD Revanna) ಅವರು ಕಳೆದ ಮೂರು ದಿನಗಳಿಂದಲೂ ಕುಟುಂಬಸ್ಥರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್ ಪಲಾವ್ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಇದರ ಮಧ್ಯೆಯೇ, ರೇವಣ್ಣ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಚ್.ಡಿ.ರೇವಣ್ಣ ಅವರು ಯಾರನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಜೈಲಿನ ಬ್ಯಾರಕ್‌ನಲ್ಲಿ ಕೆಲ ಹೊತ್ತು ವಾಕ್ ಮಾಡಿದ ರೇವಣ್ಣ, ಬಳಿಕ ದೀರ್ಘ ಅವಧಿಗೆ ಪೇಪರ್ ಓದುತ್ತಲೇ ಕುಳಿತಿದ್ದರು ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ. ರೇವಣ್ಣ ಅವರು ಸೋಮವಾರ (ಮೇ 13) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.
ಲೈಂಗಿಕ ದೌರ್ಜನಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸಲ್ಲಿಸಿದ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಜಾಮೀನು ನೀಡದೆ ಮೇ 13ಕ್ಕೆ ವಿಚಾರಣೆ ಮುಂದೂಡಿತ್ತು. ಹಾಗಾಗಿ, ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು, ರೇವಣ್ಣ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.
ಭವಾನಿ ರೇವಣ್ಣಗೆ 2ನೇ ನೋಟಿಸ್
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್ ಜಾರಿ ಮಾಡಿದೆ. ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!