ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಕೊನೆಯುಸಿರೆಳೆದಿದ್ದಾರೆ. ಆದರೆ ತ್ಯಾಗಮಯ ಜೀವನ, ಮಕ್ಕಳನ್ನು ಆದರ್ಶರನ್ನಾಗಿ ಬೆಳೆಸಿದ ರೀತಿ ಮತ್ತು ಸರಳತೆಯಿಂದಾಗಿ ಅವರು ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ.
ಹೀರಾ ಬೆನ್ ನಿಜಕ್ಕೂ ತ್ಯಾಗಮಯಿ. ಚಹಾ ಮಾರುವ ಬಡ ಕುಟುಂಬ ಅವರದು. ಆದರೆ ಕಡು ಬಡತನದಲ್ಲೂ ದಿಟ್ಟತನದಿಂದ ಸಾರ್ಥಕ ಬದುಕನ್ನು ಮುನ್ನಡೆಸಿದರು. ಪತಿಗೆ ಹೆಗಲೆಣೆಯಾಗಿ ನಿಂತರು. ಐವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನೊಳಗೊಂಡ ಆರು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು. ಅವರನ್ನು ವಿದ್ಯಾವಂತರನ್ನಾಗಿ, ಸಂಸ್ಕಾರವಂತರಾಗಿ ಬೆಳೆಸಿದ ಮಹಾ ತಾಯಿ ಅವರಾಗಿದ್ದರು. ಅತಿ ಕಡಿಮೆ ಆದಾಯದಲ್ಲೂ ಸಂಸಾರವನ್ನು ಸರಾಗವಾಗಿ ನಿಭಾಯಿಸಿದರು.
ಹೀರಾಬೆನ್ ಜೀವನೋತ್ಸಾಹಿ ಆಗಿದ್ದರು. ಪ್ರಧಾನಿಯ ತಾಯಿಯಾಗಿದ್ದರೂ ಕೊನೆಯವರೆಗೂ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ನಡೆದ ಗುಜರಾತ್ ಚುನಾವಣೆಯಲ್ಲಿ ಅವರು ಮತಗಟ್ಟೆಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರು.
ಜೀವನದ ಕೊನೆಯವರೆಗೂ ಸರಳ ಜೀವನ ನಡೆಸಿದರು. ಪ್ರಧಾನಿಯ ತಾಯಿಯಾದರೂ ಆಳುಕಾಳು, ಸೇವಕರ ಮೊರೆ ಹೋಗಲಿಲ್ಲ. ಮಗ ಪ್ರಧಾನಿಯಾದ ಬಳಿಕ ಐಷಾರಾಮಿ ಜೀವನ ನಡೆಸುವ ಎಲ್ಲ ಅವಕಾಶ ಇದ್ದಾಗಲೂ ಅದರಿಂದ ದೂರವೇ ಉಳಿದರು. ಆಟೊರಿಕ್ಷಾದಲ್ಲೇ ಸಂಚರಿಸುತ್ತಿದ್ದರು. ಪ್ರಧಾನಿ ಮೋದಿ ಅವರು ನೋಟು ನಿಷೇಧಿಸಿದಾಗ ಖುದ್ದು ಬ್ಯಾಂಕ್‌ಗೆ ತೆರಳಿ ಹಣ ಡ್ರಾ ಮಾಡುವ ಮೂಲಕ ಗಮನ ಸೆಳೆದಿದ್ದರು.
ಪ್ರಧಾನಿ ಮೋದಿ ಮೇಲೆ ತಾಯಿ ಹೀರಾಬೆನ್ ಅಪಾರ ಪ್ರಭಾವ ಬೀರಿದ್ದರು. ಇದನ್ನು ಮೋದಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಹೀರಾಬೆನ್, ಯಾವ ಕಾರಣಕ್ಕೂ ಯಾವ ಸಂದರ್ಭದಲ್ಲೂ ಒಂದೇ ಒಂದು ರೂಪಾಯಿಯನ್ನೂ ಯಾರಿಂದಲೂ ಪಡೆಯಬೇಡ ಎಂದು ಉಪದೇಶ ಮಾಡಿದ್ದರು. ಮೋದಿ ಇಂದು ಜಾಗತಿಕ ಪ್ರಬಲ ನಾಯಕರಾಗಿ ರೂಪುಗೊಳ್ಳುವಲ್ಲಿ ಅವರ ತಾಯಿಯ ಪಾತ್ರ-ಪ್ರಭಾವವೂ ಇದೆ. ಪ್ರಧಾನಿ ಆದ ಬಳಿಕವೂ ನರೇಂದ್ರ ಮೋದಿ ಅವರು ಆಗಾಗ ಅಹಮದಾಬಾದ್ ಗೆ ತೆರಳಿ ತಾಯಿಯನ್ನು ಭೇಟಿ ಮಾಡಿ ಬರುತ್ತಿದ್ದರು. ಊರಿಗೆ ಅರಸನಾದರೂ ತಾಯಿಗೆ ಮಗ ಎಂಬಂತೆ ಅವರಿಬ್ಬರ ಸಂಭಾಷಣೆ ಇರುತ್ತಿತ್ತು. ಆರಾಮ ಕುರ್ಚಿಯಲ್ಲಿ ಕೂತಿರುವ ತಾಯಿ ಹೀರಾಬೆನ್ ಮತ್ತು ನೆಲದ ಮೇಲೆ ಕೂತು ಅವರ ಕಾಲುಗಳ ಮೇಲೆ ತಮ್ಮ ಕೈಗಳನ್ನಿಟ್ಟು ಉಭಯ ಕುಶಲೋಪರಿ ನಡೆಸುವ ಮೋದಿಯವರ ಚಿತ್ರ ಮಾರ್ಮಿಕ ಮತ್ತು ಭಾವುಕ ಸಂದೇಶ ಸ್ಪುರಿಸುತ್ತಿತ್ತು.
ತಾಯಿಯಲ್ಲಿ ಯಾವಾಗಲೂ ತ್ರಿಮೂರ್ತಿಗಳನ್ನು ಕಾಣುತ್ತಿದ್ದೆ. ಅವರ ಬದುಕು ತಪೋಸದೃಶ, ನಿಸ್ವಾರ್ಥ ಕರ್ಮಯೋಗಿಯ ಬಾಳ್ವೆ. ಅವರು ಮೌಲ್ಯಗಳಿಗೆ ಬದ್ಧವಾಗಿದ್ದರು. ಅವರು ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಬಾಳುವೆ ನಡೆಸಿ ಎಂದು ಹಿತವಚನ ಹೇಳುತ್ತಿದ್ದರು ಎಂಬ ಪ್ರಧಾನಿ ಮೋದಿಯವರ ಕಂಬನಿಯ ಸಾಲುಗಳು ಅವರ ತಾಯಿಯ ವಿಶಿಷ್ಟ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.
ಹೀಗೆ ಹೀರಾ ಬೆನ್ ಅವರು ನಿಜಕ್ಕೂ ಆದರ್ಶ ಮತ್ತು ಮಾದರಿ ಮಹಾತಾಯಿ. ಅವರೊಂದು ಸ್ಫೂರ್ತಿಯ ಸೆಲೆ.
ಇದನ್ನೂ ಓದಿ | Heeraben Modi | ಚಹಾ ಮಾರುವ ಕುಟುಂಬ, ಆರು ಮಕ್ಕಳು, ಸರಳ ಜೀವನ, ತ್ಯಾಗಮಯಿ ಈ ಹೀರಾಬೆನ್