ತುಮಕೂರು: ಹೇಮಾವತಿ ಲಿಂಕ್ ಕೆನಾಲ್ (Hemavati Link Canal) ವಿರೋಧಿಸಿ ಇಂದು ತುಮಕೂರು ಬಂದ್ (Tumkur Bundh) ಆರಂಭವಾಗಿದೆ. ತುಮಕೂರು ಜಿಲ್ಲಾದ್ಯಂತ ಬಂದ್ ಮಾಡಲು ಹೋರಾಟ ಸಮಿತಿ ಕರೆ ನೀಡಿದ್ದು, ಇಂದು ಮುಂಜಾನೆಯಿಂದಲೇ ಕಾರ್ಯರ್ತರು ಬೀದಿಗೆ ಇಳಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ವಿನಂತಿಸಿಕೊಂಡರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಬಂದ್‌ಗೆ ಕರೆ ಕೊಡಲಾಗಿತ್ತು. ಬಂದ್‌ಗೆ ವಿವಿಧ ರೈತ, ಕನ್ನಡಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಮಠಾಧೀಶರು, ವರ್ತಕರು, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್ ಸೇರಿ ಅನೇಕ ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡುವಂತೆ ಹೋರಾಟ ಸಮಿತಿಯಿಂದ ಮನವಿ ಮಾಡಲಾಗಿದೆ.
ಬಂದ್ ಪ್ರಯುಕ್ತ ಬೆಳಗ್ಗೆ 10 ಗಂಟೆಗೆ ಟೌನ್‌ಹಾಲ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಹೋರಾಟ ಸಮಿತಿ ಸಲ್ಲಿಸಲಿದೆ. ತುಮಕೂರು ನಗರ ಸೇರಿದಂತೆ 10 ತಾಲ್ಲೂಕುಗಳಲ್ಲೂ ಬಂದ್‌ಗೆ ಸಿದ್ಧತೆ ಆಗಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡಲಿದ್ದಾರೆ.
ಜಿಲ್ಲಾದ್ಯಂತ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದಲೂ ಬಿಗಿಭದ್ರತೆ ಹಾಕಲಾಗಿದೆ. ಹೇಮಾವತಿ ನಾಲಾ ವಲಯದ ಗುಬ್ಬಿ, ತುರುವೇಕೆರೆ, ತುಮಕೂರಿನಲ್ಲಿ ಬಂದ್ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಮೂರು ತಾಲ್ಲೂಕುಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಬಲವಂತವಾಗಿ ಯಾವುದೇ ಅಂಗಡಿ ಮುಚ್ಚಿಸದಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ತುಮಕೂರು ಎಸ್‌ಪಿ ಅಶೋಕ್ ವೆಂಕಟ್ ಖಡಕ್ ಸೂಚನೆ ನೀಡಿದ್ದಾರೆ.
ಇಂದು ಮುಂಜಾನೆಯೇ ಬೀದಿಗಿಳಿದ ಹೋರಾಟ ಸಮಿತಿಯ ಕಾರ್ಯಕರ್ತರು, ಅಂಗಡಿ- ಮುಂಗಟ್ಟುಗಳನ್ನ ತೆರೆಯದಂತೆ ವ್ಯಾಪಾರಸ್ಥರಿಗೆ ಮನವಿ ಮಾಡಿಕೊಂಡರು. ನಗರದ ಎಲ್ಲಾ ಪ್ರಮುಖ ರಸ್ತೆಗಳಿಗೆ ಹೋಗಿ ʼನಮ್ಮ ನೀರು ನಮ್ಮ ಹಕ್ಕುʼ ಅನ್ನುವ ಕೂಗಿನೊಂದಿಗೆ ಬಂದ್‌ಗೆ ಕರೆ ನೀಡಿದರು. ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹೇಮಾವತಿ ನದಿಯ ಗೊರೂರು ಡ್ಯಾಮ್ ನೀರಿಗಾಗಿ ತುಮಕೂರು ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ನಡುವೆ ಕಿತ್ತಾಟ ಶುರುವಾಗಿದೆ. ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀ ರಂಗ ಏತನೀರಾವರಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
ಇಡೀ ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಿ, ಗುಬ್ಬಿ ತಾಲೂಕು ಬಂದ್ ಯಶಸ್ವಿಯಾಗಿ ನಡೆಸಲು ಹೋರಾಟ ಸಮಿತಿಯ ಎಲ್ಲ ಮುಖಂಡರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಭೆ ನಡೆಸಿದೆ. ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು. ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡುವಂತೆ ಸಮಿತಿ ಮನವಿ ಮಾಡಿದೆ.
ತುಮಕೂರು ಬಂದ್ ಹಿನ್ನೆಲೆ ಸ್ವಯಂಪ್ರೇರಿತ ಬಂದ್ ಇರಲಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಆಟೋಗಳು ರಸ್ತೆಗಿಳಿಯುವುದು ಅನುಮಾನ. ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಬಾಗಿಲು ತೆರೆಯುವುದಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಂದ್ ಇರಲಿದೆ. ಆದರೆ, ಸರ್ಕಾರಿ ಸಾರಿಗೆ, ಶಾಲಾ-ಕಾಲೇಜು ಸೇರಿದಂತೆ ಸರಕಾರಿ ಸೇವೆಗಳು ಎಂದಿನಂತೆ ಇರಲಿವೆ ಎಂದು ಆಡಳಿತ ಸ್ಪಷ್ಟಪಡಿಸಿದೆ. ಅನುದಾನರಹಿತ ಶಾಲೆಗಳ ಒಕ್ಕೂಟ (ರೂಪ್ಸಾ) ಬಂದ್‌ಗೆ ಬೆಂಬಲ ಸೂಚಿಸಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ.
ಇದನ್ನೂ ಓದಿ: Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್ ಕಾರು ರೈಡ್ ಮಾಡಿದ ರಿಷಬ್ ಶೆಟ್ಟಿ ಹೇಳಿದ್ದೇನು?