ಬೆಂಗಳೂರು: ನಾಗರಿಕರ ಅಹವಾಲುಗಳನ್ನು ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ಫೆಬ್ರುವರಿ 8ರಂದು ವಿಧಾನಸೌಧ ಮುಂಭಾಗ ರಾಜ್ಯ ಮಟ್ಟದ ಜನಸ್ಪಂದನ (janaspandana) ಕಾರ್ಯಕ್ರಮ ಆಯೋಜಿಸಿದ್ದಾರೆ. ಇದು ಹಾಲಿ ಸರ್ಕಾರ ಆಯೋಜಿಸುತ್ತಿರುವ 2ನೇ ಹಂತದ ರಾಜ್ಯಮಟ್ಟದ ಜನಸ್ಪಂದನಾ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ಭಾಗಿಯಾಗಿ ತಮ್ಮ ಅಹವಾಲು ಸಲ್ಲಿಸುವಂತೆ ಸರ್ಕಾರ ಪ್ರಕಟಣೆಯಲ್ಲಿ ಈ ಹಿಂದೆಯೇ ತಿಳಿಸಿತ್ತು.
ಮುಖ್ಯಮಂತ್ರಿ @siddaramaiah ಅವರ ನೇತೃತ್ವದಲ್ಲಿ ಫೆಬ್ರವರಿ 8 ರಂದು ವಿಧಾನಸೌಧ ಆವರಣದಲ್ಲಿ ರಾಜ್ಯಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.
— CM of Karnataka (@CMofKarnataka) February 1, 2024
ಜನಸ್ಪಂದನದ ಮೂಲಕ ಜನರ ಅಹವಾಲುಗಳಿಗೆ ಸ್ಥಳದಲ್ಲೇ ಅಥವಾ ಕಾಲಮಿತಿಯೊಳಗೆ ಪರಿಹಾರದ ಗ್ಯಾರಂಟಿ. #ಜನಸ್ಪಂದನಾ pic.twitter.com/t2P5o2ONBF
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಅಹವಾಲು ಸಲ್ಲಿಕೆಗೆ ನೋಂದಾಯಿಸಲು 1902 ಡಯಲ್ ಮಾಡಬಹುದು ಎಂದು ಹೇಳಿತ್ತು. ವಿಧಾನಸೌಧ ಮುಂಭಾಗ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಕಾಲದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿನ ಪತ್ರಗಳಾದ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ : Bharat Rice: ಭಾರತ್ ಅಕ್ಕಿಗೆ ಭರ್ಜರಿ ಬೇಡಿಕೆ; ಖರೀದಿಗೆ ಮುಗಿಬಿದ್ದ ಜನ, ಎಲ್ಲೆಲ್ಲಿ ಸಿಗುತ್ತೆ?
ವೈದ್ಯಕೀಯ, ಕಂದಾಯ, ಪೊಲೀಸ್, ಪಹಣಿ, ಖಾತೆ, ಸರ್ವೆ, ಪೋಡಿ, ಅನ್ಯಾಯ ಹೀಗೆ ಯಾವುದೇ ವಿಚಾರಗಳಿರಲಿ, ತುರ್ತಾಗಿ ಸೂಕ್ತ ಪರಿಹಾರ ಸಿಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ
ಭರದ ಸಿದ್ಧತೆ
ಜನಸ್ಪಂದನಾ ಕಾರ್ಯಕ್ರಮಕ್ಕಾಗಿ ವಿಧಾನ ಸೌಧದ ಸುತ್ತಲೂ ಭರದ ಸಿದ್ಧತೆ ನಡೆಯುತ್ತಿದೆ. ಅಧಿಕಾರಿಗಳು, ಸಾರ್ವಜನಿಕರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರಿಗೂ ಅನುಕೂಲ ಆಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಶಾಮಿಯಾನ ಹಾಕಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ
ಸಂಚಾರ ಮಾರ್ಗ ಬದಲಾವಣೆ
- ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದಿಂದ ಗೇಟ್ ನಂಬರ್-04 ರವರೆಗೆ ಫೆಬ್ರವರಿ 8ರಂದು ಸಂಚಾರ ನಿಷೇಧ ಮಾಡಲಾಗಿದೆ. ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಸಾಗುವಂತೆ ಸೂಚಿಸಲಾಗಿದೆ.
- ವಾಹನಗಳು ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆಯುವಂತೆ ಸೂಚನೆ ನೀಡಲಾಗಿದೆ. ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಚೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು ಅಪ್ಪರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆಯುವಂತೆ ಪೊಲೀಸರು ತಿಳಿಸಿದ್ದಾರೆ.
ಕೆ.ಆರ್. ವೃತ್ತದಿಂದ ಸಾಗುವವರು ಅಂಬೇಡ್ಕರ್ ವೀದಿ / ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ, ಡಿ. ದೇವರಾಜು ಅರಸು ರಸ್ತೆ, ಶೇಷಾದ್ರಿ ರಸ್ತೆಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪಾರ್ಕಿಂಗ್ ಸ್ಥಳಗಳು
ಪಾವತಿ ಪಾರ್ಕಿಂಗ್ : ಸ್ಕೌಟ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ, ಜ್ಞಾನ ಜ್ಯೋತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪಾರ್ಕಿಂಗ್ ಸ್ಥಳ, ಸೆಂಟ್ರಲ್ ಕಾಲೇಜ್, ಸ್ವಾತಂತ್ರ್ಯ ಉದ್ಯಾನವನ, ಅರಮನೆ ಮೈದಾನ ಪಾರ್ಕಿಂಗ್ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.